ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಮುಖ್ಯ ರಸ್ತೆಯ ಸ್ಥಿತಿ ಅಯೋಮಯವಾಗಿದೆ. ದಂಡಿ ದಂಡಿ ಗುಂಡಿಗಳು ಬಿದ್ದು ವಾಹನ ಸವಾರರಿಗೆ, ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮುಂಗಟ್ಟುಗಳು ನಿತ್ರ ಧೂಳಿನ ಮಜ್ಜನ ಮಾಡುವಂತಾಗಿದೆ.
“ಕಲ್ಯಾಣ ಕರ್ಣಾಟಕದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದರೂ ಅದರ ಸದ್ಬಳಕೆ ಮಾತ್ರ ಆಗುತ್ತಿಲ್ಲ. ಅನುದಾನವೆಲ್ಲಾ ಯಾರ್ಯಾರದ್ದೋ ಜೇಬು ಸೇರುತ್ತಿದೆ. ಹೀಗಾದರೆ ಗುಂಡಿ ಮುಚ್ಚುವವರಾದರೂ ಯಾರು? ಧೂಳಿನಲ್ಲೆ ಜೀವನ ನಡೆಸುತ್ತಿರುವ ನಮ್ಮಂತವರ ಗೋಳು ಕೇಳೋಕೂ ಯಾರು ಇಲ್ಲ” ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಕೊಪ್ಪಳದಿಂದ ಮುಂಡರಗಿಗೆ ಹೋಗುವ ವಾಹನಗಳ ಸವಾರರು ವಾಹನ ಚಲಾಯಿಸುವಾಗ ಬರುವ ಧೂಳಿನ ಘಾಟಿಗೆ ಮೂಗು, ಕಣ್ಣು ಮುಚ್ವಿಕೊಂಡು ಚಲಾಯಿಸಬೇಕು. ರಸ್ತೆಯ ಎರಡೂ ಪಕ್ಕದಲ್ಲಿರುವ ಹೋಟೆಲ್, ಬೇಕರಿ, ತಂಪು-ಪಾನೀಯ ಹಾಗೂ ಕಿರಾಣಿ ಅಂಗಡಿಗಳ ಮಾಲಿಕರು ಗಂಟೆಗೊಂದು ಸಾರಿ ಸ್ವಚ್ಛತೆಯಲ್ಲಿ ತೊಡಗಬೇಕು.

ವಾಹನಗಳ ದಟ್ಟಣೆ ಹೆಚ್ಚಾದಂತೆ ಸುಸಜ್ಜಿತ ರಸ್ತೆಗಳು ನಿರ್ಮಾಣವಾಗಬೇಕು. ಆದರೆ, ಇಲ್ಲಿ ಮಾತ್ರ ವಾಹನಗಳ ಒಡಾಟ ಹೆಚ್ಚಾದಂತೆಲ್ಲ ರಸ್ತೆಗಳ ಗುಂಡಿಗಳೂ ಹೆಚ್ಚಾಗುತ್ತಿವೆ. ಗ್ರಾಮ ಪಂಚಾಯತಿ, ಲೋಕೋಪಯೋಗಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆಯೇ? ಎನ್ನುವುದು ಅಳವಂಡಿ ಗ್ರಾಮದಲ್ಲಿ ಹಾದು ಹೋಗುವ ಪ್ರಯಾಣಿಕರ ಪ್ರಶ್ನೆಯಾಗಿದೆ.
ರಸ್ತೆ ಡಾಂಬರ್ ಕಂಡು ಎಷ್ಟೋ ವರ್ಷಗಳೇ ಕಳೆದಿವೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೂ, ಅಳವಂಡಿ ಗ್ರಾಮದ ರಸ್ತೆ ದುರಸ್ತಿ ಮಾಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರಿಗೆ ಕಾಣದೇ ಇಲ್ಲ. ಬೇಸಿಗೆಯಲ್ಲಿ ಧೂಳು ಮೂಗಿಗೆ ರಾಚಿದರೆ, ಮಳೆಗಾಲದಲ್ಲಿ ಕೆಸರಿಗೆ ಕಾಲು ಜಾರಿ ಬಿದ್ದು ಸೊಂಟ ಮುರಿದುಕೊಂಡೋ, ಕಾಲು ಮುರಿದುಕೊಂಡೋ ಮನೆಮುಳ್ಳರಾಗಿ ಬೀಳುವ ದುಸ್ಥಿತಿ.
ಸ್ಥಳೀಯ ನಿವಾಸಿ ಯೋಗೇಶ್ ಬೀಸನಳ್ಳಿ ಈದಿನ ಡಾಟ್ ಕಾಮ್ನೊಂದಿಗೆ ಮಾತನಾಡಿ, “ತಗ್ಗು ಬಿದ್ದಿರೊ ರಸ್ತೆಗಳ ಬಗ್ಗೆ ಮಾತಾಡಿದ್ರ ಅಪ್ರಾಧರೀ ಇಲ್ಲಿ. ಮೂಲ ಸೌಲಭ್ಯದ ಬಗ್ಗೆ ಮಾತಾಡಿದ್ರ, ಪ್ರಶ್ನೆ ಮಾಡಿದ್ರ. ‘ನೀನೊಬ್ಬ ಹೆಚ್ಚಾಗಿದ್ದಿ ಬಾ.. ದೇಶ ನಿನ್ನಿಂದ್ಲೆ ಉದ್ಧಾರ ಆಗದ’ ಅಂತ ಲೇವ್ಡಿ ಮಾಡ್ತಾರ. ಹಿಂಗಿರಬೇಕಾದ್ರ ಊರ ಉಸಾಬರಿ ನಮ್ಗ್ಯಾಕ್? ಅಂತ ಸುಮ್ನಿರತೇವಿರೀ.. ಆದ್ರ, ನಮ್ಗ ಕುಡಿಯಾಕ್ ನೀರ್ ಸಿಗ್ದಿದ್ರೂ ಧೂಳ ಅಂತೂ ಫ್ರೀ ಸಿಗ್ತೈತ್ರಿ ಅದ್ನ ಕುಡಿತೇವ್ರಿ” ಎಂದು ಬೇಸರ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲಾ ಎಎಪಿ ಮಾಧ್ಯಮ ಸಂಯೋಜಕ ಶರಣು ಶೆಟ್ಟರು ಮಾತನಾಡಿ, “ಕೊಪ್ಪಳ ತಾಲೂಕಿನ ಶಾಸಕರು ಹಾಗೂ ಜಿಲ್ಲೆಯ ಅಧಿಕಾರಿಗಳು ಕಳೆದು ಹೋಗ್ಯಾರ. ಪೋಲಿಸ್‌ರು ಹುಡುಕಿಕೊಡಬೇಕು. ಧಾರ್ಮಿಕ ಆಚರಣೆಯಾದ ಹೋಳಿ ಆಚರಿಸಲು ಶಾಸಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು. ಹೋಳಿ ಹುಣ್ಣಿಮೆಯಂದು ಕುಡಿದು ಕುಣಿದು ಕುಪ್ಪಳಿಸುವ ಯುವಕರು ಜೊತೆ ಶಾಸಕರೂ ಕುಣಿದು ಕುಪ್ಪಳಿಸಿದರು. ಆದರೆ, ತಾಲೂಕಿನ ರಸ್ತೆ ಗುಂಡಿಗಳ ಮುಚ್ಚುವಲ್ಲಿ ಶಾಸಕರು ಗಮನ ಹರಿಸಲಿಲ್ಲ. ನಮ್ಮ ಶಾಸಕರಿಗೆ ಧಾರ್ಮಿಕ ನಂಬಿಕೆಗಳ ಮೇಲೆ ಇದ್ದ ಕಾಳಜಿ ತಾಲೂಕಿನ ಅಭಿವೃದ್ಧಿಯ ಮೇಲೆ ಇಲ್ಲ ಎಂಬುದಕ್ಕೆ ಇದು ಸಾಕ್ಷಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ | ಕರ್ತವ್ಯ ಲೋಪ ಆರೋಪ : ಆನೆಗೊಂದಿ ಗ್ರಾ.ಪಂ. ಪಿಡಿಒ ಅಮಾನತು
ಅಳವಂಡಿ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕರೆ ಮೂಲಕ ಸಂಪರ್ಕಿಸಲಾಯಿತು; ಆದರೆ, ಸಂಪರ್ಕಕ್ಕೆ ಸಿಗದಿರುವಷ್ಟು ಅವರು ಕಾರ್ಯನಿರತರಾಗಿದ್ದರು. ಇನ್ನಾದರೂ ಶಾಸಕರು, ಸಂಸದರು ಹಾಗೂ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳುತ್ತ ಎಂದು ಕಾದು ನೋಡಬೇಕು.