- ಬಂಧಿತರಿಂದ ಮೂರು ದ್ವಿಚಕ್ರ ವಾಹನ ವಶ
- ಆರ್ಸಿ ಮತ್ತು ಚಾಲನಾ ಪರವಾನಗಿ ರದ್ದು
ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳು ಸೇರಿದಂತೆ ಹಲವೆಡೆ ಬೈಕ್ ಸ್ಟಂಟ್ ಮತ್ತು ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ರಸ್ತೆಯಲ್ಲಿ ಸಾಹಸ ಪ್ರದರ್ಶಿಸುತ್ತಿದ್ದ ಇಬ್ಬರು ಬೈಕ್ ಸವಾರರನ್ನು ಬೆಂಗಳೂರು ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ರಸ್ತೆಗಳಲ್ಲಿ ಬೈಕ್ ಸ್ಟಂಟ್ ಮಾಡುವ ಮೂಲಕ ಇತರೆ ವಾಹನ ಸವಾರರಿಗೆ ಅಪಾಯ ತಂದೊಡ್ಡುವ ವಾಹನ ಸವಾರರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದು, ಪಶ್ಚಿಮ ವಿಭಾಗದ ಸಂಚಾರಿ ವಿಶೇಷ ತಂಡ ಇಬ್ಬರನ್ನು ಬಂಧಿಸಿ ಅವರಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಪ್ರಕರಣದ ಮೂರನೇ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಂದ ದೂರಿನ ಆಧಾರದ ಮೇಲೆ ವಿಶೇಷ ತಂಡವು ಮಾಗಡಿ ರಸ್ತೆ ಮತ್ತು ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ದರ್ಶನ್ ಗೌಡ (19) ಮತ್ತು ಅವರ ಸಹಚರ ಅಭಿಷೇಕ್ ಗೌಡ (21) ಅವರನ್ನು ಪತ್ತೆ ಮಾಡಿ, ಬಂಧಿಸಿದ್ದಾರೆ.
ಪೊಲೀಸರು ಬಂಧಿತರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಆರ್ಸಿ ಮತ್ತು ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವಂತೆ ಆರ್ಟಿಒ ಅಧಿಕಾರಿಗಳಿಗೆ ವರದಿ ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೈಕ್ ಸ್ಟಂಟ್ ಮಾಡುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುವ ಬೈಕ್ ಸವಾರರ ಮೇಲೆ ನಿಗಾ ಇಡಲು ಸಂಚಾರ ಪೊಲೀಸರು ಪ್ರತಿ ವಿಭಾಗದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಡಿಸೆಂಬರ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಚಿಂತನೆ: ರಾಮಲಿಂಗಾರೆಡ್ಡಿ
ಅಪಾಯಕಾರಿ ಡ್ರೈವಿಂಗ್ ಮತ್ತು ಬೈಕ್ ಸ್ಟಂಟ್ ಪ್ರದರ್ಶನದ ಮೇಲಿನ ಶಿಸ್ತುಕ್ರಮವು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗುವ ಮಾರಣಾಂತಿಕ ಅಪಘಾತಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.