ಹದಿನೆಂಟನೆ ಐಪಿಎಲ್ ಆವೃತ್ತಿಯು ಹಲವು ಅಚ್ಚರಿಗಳಿಗೆ ಕಾರಣವಾಗುತ್ತಿದೆ. ಸಣ್ಣ ವಯಸ್ಸಿನಲ್ಲಿ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯಾಗಿದ್ದವ ಇಂದು ಗುರುವನ್ನೇ ಮೀರಿಸಿ ಬೆಳದಿದ್ದಾನೆ. ಆತ ಮತ್ಯಾರು ಅಲ್ಲ ರಾಜಸ್ಥಾನ ರಾಯಲ್ಸ್ ತಂಡದ ರಿಯಾನ್ ಪರಾಗ್. ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ಸತತ ಎರಡು ಸೋಲುಗಳ ನಂತರ ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
43 ವರ್ಷದ ಎಂಎಸ್ ಧೋನಿ 2004ರಲ್ಲಿ ಕ್ರಿಕೆಟ್ಗೆ ಪದಾರ್ಪಣೆ ಮಾಡುವಾಗ ಪರಾಗ್ಗೆ ಕೇವಲ 3 ವರ್ಷ. ಮಹೇಂದ್ರ ಸಿಂಗ್ ಧೋನಿ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಬೆಳೆದವರಲ್ಲಿ ರಿಯಾನ್ ಪರಾಗ್ ಕೂಡ ಒಬ್ಬರು. ಚಿಕ್ಕವನಾಗಿದ್ದಾಗ ಧೋನಿ ಜೊತೆ ಒಂದು ಫೋಟೋ ತೆಗೆದುಕೊಳ್ಳಲು ಪರಿತಪಿಸುತ್ತಿದ್ದ ಪರಾಗ್ ಇಂದು ಧೋನಿ ಇರುವ ತಂಡವನ್ನೇ ಸೋಲಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದೀಗ ಪರಾಗ್ ಚಿಕ್ಕವರಿದ್ದಾಗ ಧೋನಿ ಜೊತೆ ತೆಗೆಸಿಕೊಂಡ ಭಾವಚಿತ್ರ ವೈರಲ್ ಆಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಮಿಂಚಿದ ಇಶಾನ್ ಕಿಶನ್, ವಿಘ್ನೇಶ್ ಪುತ್ತೂರ್ ಮತ್ತು ನೂರ್ ಅಹ್ಮದ್
ಆಸಕ್ತಿದಾಯಕ ಸಂಗತಿ ಏನೆಂದರೆ ರಿಯಾಗ್ ಅಪ್ಪನಾಗಿರುವ ಪರಾಗ್ ದಾಸ್ ಕೂಡ ಧೋನಿ ವಿರುದ್ಧ ರಣಜಿ ಟ್ರೋಫಿಯಲ್ಲಿ ಆಡಿದ್ದರು. 1999-2000ನೇ ಇಸವಿಯಲ್ಲಿ ಧೋನಿ ರಣಜಿ ಟ್ರೋಫಿಯಲ್ಲಿ ಬಿಹಾರ ತಂಡದ ಪರ ಪಾದಾರ್ಪಣೆ ಮಾಡಿದ್ದರು. ಆ ಸಂದರ್ಭದಲ್ಲಿ ಬಿಹಾರ್ ವಿರುದ್ಧದ ಅಸ್ಸಾಂ ತಂಡವನ್ನು ಪರಾಗ್ ದಾಸ್ ಪ್ರತಿನಿಧಿಸಿದ್ದರು. ಅಲ್ಲದೆ 43 ಪ್ರಥಮ ದರ್ಜೆ ಹಾಗೂ 32 ಲಿಸ್ಟ್ ಎ ಪಂದ್ಯಗಳಲ್ಲಿ ಅಸ್ಸಾಂ ತಂಡದ ಪರ ಆಡಿದ್ದಾರೆ. ಇನ್ನೂ ಕುತೂಹಲಕಾರಿ ವಿಷಯವೆಂದರೆ ರಿಯಾಗ್ ತಂದೆಯನ್ನು ಆಗ ಧೋನಿ ಸ್ಟಂಪ್ ಔಟ್ ಮಾಡಿದ್ದರು.
ನಿನ್ನೆ(ಮಾ.30) ರಾಜಸ್ಥಾನ್ ತಂಡವು ಋತುವಿನ 11 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೇವಲ 6 ರನ್‌ಗಳಿಂದ ಸೋಲಿಸಿತು. ಈ ಪಂದ್ಯ ಕೊನೆಯ ಓವರ್‌ನವರೆಗೂ ರೋಚಕತೆ ಸೃಷ್ಟಿಸಿತು. ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ಗೆಲುವಿಗೆ 20 ರನ್‌ಗಳು ಬೇಕಾಗಿದ್ದವು. ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದರು, ಆದರೆ ನಾಯಕ ರಿಯಾನ್ ಪರಾಗ್ ರಾಜಸ್ಥಾನ ಪರ ಮಾಸ್ಟರ್ ಸ್ಟ್ರೋಕ್ ನೀಡಿದರು. ಆದರೆ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಧೋನಿ ಯಾವುದೇ ಮೋಡಿ ಮಾಡಲು ಸಾಧ್ಯವಾಗಲಿಲ್ಲ.
ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ರಾಜಸ್ಥಾನ ಸೋಲಿನ ಭೀತಿಯಲ್ಲೇ ಇತ್ತು, ಆದರೆ ಕೊನೆಯ ಓವರ್‌ನಲ್ಲಿ ರಾಜಸ್ಥಾನ್ ಪಂದ್ಯದ ಗತಿಯನ್ನು ಬದಲಾಯಿಸಿತು. ಧೋನಿ ಔಟ್ ಆದ ಪರಿಣಾಮ ಆರ್ಆರ್ ಜಯ ಸಾಧಿಸಿತು.