ಪ್ರಧಾನಿ ಮೋದಿ ನಿವೃತ್ತರಾಗುತ್ತಾರೆಯೇ? RSS ಕೇಂದ್ರ ಕಚೇರಿ ಭೇಟಿಯ ಉದ್ದೇಶವೇನು?

Date:

Advertisements
ಹನ್ನೊಂದು ವರ್ಷಗಳ ಸುದೀರ್ಘ ಬಿರುಕು ಮತ್ತು ಮುನಿಸಿನ ನಡುವೆಯೇ ಮೋದಿ ನಾಗ್ಪುರಕ್ಕೆ ಭೇಟಿ ಕೊಟ್ಟಿದ್ದಾರೆ. 2013ರಲ್ಲಿ ಮೋದಿಯವರು ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ನಂತರ, ರಾಷ್ಟ್ರ ರಾಜಕಾರಣಕ್ಕೆ ತೆರಳಿದರು. ಪ್ರಧಾನಿಯೂ ಆದರು. ಹಾಗೆಯೇ ಈಗಲೂ ಪಕ್ಷದ ಅಧ್ಯಕ್ಷ ಅಥವಾ ಪ್ರಧಾನಿ ಬದಲಾಗುತ್ತಾರ?

ಕಳೆದ ಭಾನುವಾರ, ಉಗಾದಿ ಹಬ್ಬದ ದಿನ ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದಲ್ಲಿರುವ ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್ಎಸ್) ಕಚೇರಿಗೆ ಭೇಟಿ ನೀಡಿದ್ದರು. ‘ಆರ್‌ಎಸ್ಎಸ್ ಭಾರತೀಯ ಸಂಸ್ಕೃತಿಯ ಆಧುನಿಕ ಆಲದ ಮರ’ ಎಂದು ಬಣ್ಣಿಸಿದರು. ಹಾಗೆ ಭೇಟಿ ನೀಡುವ ಮೂಲಕ ಭಾರತದ ಮೊದಲ ಪ್ರಧಾನಿ ಎಂಬ ‘ಹಿರಿಮೆ’ಗೂ ಪಾತ್ರರಾದರು.

ಪಂಡಿತ್ ಜವಹರಲಾಲ್ ನೆಹರೂ ಅವರಿಂದ ಮನಮೋಹನ ಸಿಂಗ್‌ವರೆಗೆ, ದೇಶ ಹದಿನಾಲ್ಕು ಪ್ರಧಾನಮಂತ್ರಿಗಳನ್ನು ಕಂಡಿದೆ. ಆ ಪ್ರಧಾನಿಗಳಾರೂ ನಾಗ್ಪುರದತ್ತ ಹೆಜ್ಜೆ ಹಾಕಿದವರಲ್ಲ, ಆರ್‌ಎಸ್ಎಸ್ ಕಚೇರಿಗೆ ಭೇಟಿ ನೀಡಿರಲಿಲ್ಲ, ಸಂಘಟನೆಯ ನಾಯಕರೊಂದಿಗೆ ವೇದಿಕೆ ಹಂಚಿಕೊಂಡವರಲ್ಲ. ಅಷ್ಟೇ ಅಲ್ಲ, ಆರ್‌ಎಸ್ಎಸ್ ಅನ್ನು ದೇಶದಲ್ಲಿ ಅಶಾಂತಿ ಹಬ್ಬಿಸುವ, ದ್ವೇಷ ಹರಡುವ, ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುವ ಸಂಘಟನೆ ಎಂದು ನಿಷೇಧಿಸಿದ್ದರು.

ಆ ಸತ್ಸಂಪ್ರದಾಯವನ್ನು ಮೊದಲ ಬಾರಿಗೆ ಮುರಿದ ‘ಖ್ಯಾತಿ’ ದೇಶದ ಹದಿನೈದನೇ ಪ್ರಧಾನಮಂತ್ರಿ ಮೋದಿಯವರಿಗೆ ಸಲ್ಲುತ್ತದೆ. ಕಳೆದ ಹನ್ನೊಂದು ವರ್ಷಗಳಿಂದ ಆರ್‌ಎಸ್ಎಸ್ ಕಚೇರಿಯತ್ತ ಹೆಜ್ಜೆ ಹಾಕದ ಮೋದಿ, ಈಗ ಇದ್ದಕ್ಕಿದ್ದಂತೆ ಭೇಟಿ ಕೊಟ್ಟಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ರೊಂದಿಗೆ ಕೂತು ಮಾತನಾಡಿದ್ದು, ವೇದಿಕೆ ಹಂಚಿಕೊಂಡಿದ್ದು ಏಕೆ? ಆರ್‌ಎಸ್ಎಸ್ ಸಂಘಟನೆಗೂ ಸರ್ಕಾರಕ್ಕೂ ಇರುವ ಸಂಬಂಧವೇನು? ನಾಯಕತ್ವ ಬದಲಾವಣೆಯ ಮಾತುಕತೆ ಜರುಗಿದೆಯೇ? ಈ ಎಲ್ಲ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.  

Advertisements
WhatsApp Image 2025 04 01 at 16.54.31

ಹೌದು, ಆರ್‌ಎಸ್ಎಸ್ ಸಂಘಟನೆಯನ್ನು ಕೇಂದ್ರ ಸರ್ಕಾರ ಮೂರು ಬಾರಿ ನಿಷೇಧಿಸಿತ್ತು. ಮೊದಲ ಸಲ ಗಾಂಧಿ ಹತ್ಯೆ ನಡೆದಾಗ; ಎರಡನೇ ಸಲ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಹಾಗೂ ಕೊನೆಯದಾಗಿ ಬಾಬ್ರಿ ಮಸೀದಿ ಕೆಡವಿದಾಗ ಆರ್‍ಎಸ್ಎಸ್ ಸಂಘಟನೆಯನ್ನು ನಿಷೇಧಿಸಲಾಗಿತ್ತು.

ಇದನ್ನು ಓದಿದ್ದೀರಾ?: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಬಾಯಲ್ಲಿ ಮತ್ತೆ ದೇವರು, ಮತ್ತೆ ಸುದ್ದಿ, ಮತ್ತೆ ಮೌನ!

1948ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಲಾಯಿತು. ಹತ್ಯೆ ಮಾಡಿದ ಗೋಡ್ಸೆಗೂ ಆರ್‌ಎಸ್ಎಸ್ ಸಂಘಟನೆಗೂ ನಿಕಟ ಸಂಪರ್ಕವಿತ್ತು. ಗಾಂಧಿ ಹತ್ಯೆಯಾದ ನಂತರ, ಆರ್​ಎಸ್​ಎಸ್​ ಶಾಖೆಗಳಲ್ಲಿ ಸಿಹಿ ಹಂಚಿ ಸಮಾರಂಭಗಳನ್ನು ಏರ್ಪಡಿಸುವ ಮೂಲಕ ಅದು ಬಯಲಾಗಿತ್ತು. ಹೀಗಾಗಿ ಆರ್​ಎಸ್​ಎಸ್‌ನ ಸರಸಂಘಚಾಲಕ ಗೋಳ್ವಾಲ್ಕರ್ ಹಾಗೂ ಹಿಂದೂ ಮಹಾಸಭಾದ ಮುಖ್ಯಸ್ಥ ಸಾವರ್ಕರ್ ಅವರನ್ನು ಆ ಸಂದರ್ಭದಲ್ಲಿ ಬಂಧಿಸಲಾಗಿತ್ತು. ಅಲ್ಲದೆ ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ಫೆಬ್ರವರಿ 4, 1948ರಂದು ಆರ್‌ಎಸ್ಎಸ್ ನಿಷೇಧಿಸಿರುವುದಾಗಿ ಘೋಷಿಸಿತ್ತು.

ಅಷ್ಟೇ ಅಲ್ಲ, ‘ದೇಶದಲ್ಲಿ ಅಶಾಂತಿ, ದ್ವೇಷ, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಶಕ್ತಿಗಳನ್ನು ಬೇರುಸಹಿತ ಕಿತ್ತೆಸೆಯಲು ಆರ್‌ಎಸ್ಎಸ್ ಮೇಲೆ ನಿಷೇಧವನ್ನು ಹೇರಲಾಗುತ್ತಿದೆ. ಹಿಂಸಾಚಾರವನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸಂಘವನ್ನು ಕಾನೂನುಬಾಹಿರ ಸಂಘವೆಂದು ಘೋಷಿಸಲು ನಿರ್ಧರಿಸಿದೆ’ ಎಂದು ಸರ್ಕಾರ ಆ ಸಂದರ್ಭದಲ್ಲಿ ಹೇಳಿತ್ತು.

‘ದೇಶದ ಹಲವಾರು ಭಾಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಬೆಂಕಿ ಹಚ್ಚುವಿಕೆ, ದರೋಡೆ, ಡಕಾಯಿತಿ ಮತ್ತು ಕೊಲೆಗಳನ್ನು ಒಳಗೊಂಡ ಹಿಂಸಾಚಾರದಲ್ಲಿ ತೊಡಗಿದ್ದಾರೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದಾರೆ ಎಂದು ಕಂಡುಬಂದಿದೆ. ಅವರು ಭಯೋತ್ಪಾದಕ ವಿಧಾನಗಳನ್ನು ಆಶ್ರಯಿಸಲು, ಬಂದೂಕುಗಳನ್ನು ಸಂಗ್ರಹಿಸಲು, ಸರ್ಕಾರದ ವಿರುದ್ಧ ಅಸಮಾಧಾನವನ್ನು ಸೃಷ್ಟಿಸಲು ಮತ್ತು ಪೊಲೀಸರು ಮತ್ತು ಮಿಲಿಟರಿಯನ್ನು ಅಧೀರಗೊಳಿಸುವಂತೆ ಜನರನ್ನು ಉತ್ತೇಜಿಸುವ ಕರಪತ್ರಗಳನ್ನು ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ’ ಎಂದು ಸರ್ಕಾರ ಸಮಜಾಯಿಷಿ ನೀಡಿತ್ತು.

ಇದಾದ ನಂತರ, ಆರ್‌ಎಸ್ಎಸ್ ಸಂಘಟನೆಯನ್ನು ಎರಡನೇ ಬಾರಿಗೆ ನಿಷೇಧಿಸಿದ್ದು, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ, ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ.

ಪ್ರಧಾನಿ ಇಂದಿರಾಗಾಂಧಿಯವರು ಜೂನ್ 25, 1975ರಲ್ಲಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಹೇರಿದರು. ಈ ಸಂದರ್ಭದಲ್ಲಿ ಆರ್‌ಎಸ್ಎಸ್ ಮೇಲೆ ಹಿಡಿತ ಸಾಧಿಸಲು ಇಂದಿರಾಗಾಂಧಿ ನೇತೃತ್ವದ ಸರ್ಕಾರ, ಜುಲೈ 4, 1975ರಂದು ಆರ್‌ಎಸ್ಎಸ್ ಅನ್ನು ನಿಷೇಧಿಸಿತು. ನಿಷೇಧಿಸಿದ್ದಕ್ಕೆ ಇಂದಿರಾ ಗಾಂಧಿಯವರು ಕಾರಣ ಕೊಡುತ್ತ, ತುರ್ತು ಪರಿಸ್ಥಿತಿಯ ವಿರುದ್ಧವಿರುವವರು, ಗಾಂಧಿ ಹತ್ಯೆಗೆ ಪ್ರಚೋದನೆ ನೀಡಿದ ಮತ್ತು ಮತಾಂಧ ಹಿಂದೂ ಸಂಘಟನೆಯಾದ ಆರ್‌ಎಸ್ಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆ ಕಾರಣದಿಂದ ನಿಷೇಧಿಸಲಾಗಿದೆ ಎಂದಿದ್ದರು.

ಇನ್ನು ಮೂರನೇ ಬಾರಿಗೆ ನಿಷೇಧ ಹೇರಿದ್ದು ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿದಾಗ. ಡಿಸೆಂಬರ್ 6, 1992ರಂದು ಬಾಬ್ರಿ ಮಸೀದಿ ಕೆಡವುವ ಕೆಲಸದಲ್ಲಿ ಆರ್‌ಎಸ್ಎಸ್ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಹಿಂದೂ-ಮುಸ್ಲಿಂ ಗಲಭೆಗಳಾಗಬಹುದೆಂಬ ಹಿನ್ನೆಲೆಯಲ್ಲಿ ಡಿಸೆಂಬರ್ 10 ರಂದು ಆರ್‌ಎಸ್ಎಸ್ ಅನ್ನು ನಿಷೇಧಿಸಲಾಯಿತು. ಆ ಸಂದರ್ಭದಲ್ಲಿ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದರು, ಗೃಹ ಸಚಿವ ಶಂಕರರಾವ್ ಬಲವಂತರಾವ್ ಚವಾಣ್, ಆರ್‌ಎಸ್ಎಸ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.

ಇಂತಹ ನಿಷೇಧಿತ ಸಂಘಟನೆಯ ಕೇಂದ್ರ ಕಚೇರಿಗೆ ಸಮಸ್ತ ದೇಶವನ್ನು ಪ್ರತಿನಿಧಿಸುವ ಪ್ರಧಾನಿ ಹೋಗುವುದು ಎಷ್ಟು ಸರಿ ಎಂಬ ಚರ್ಚೆಗಿಂತ ಹೆಚ್ಚಾಗಿ, ಬರುವ ಸೆಪ್ಟೆಂಬರ್‍‌ಗೆ ಮೋದಿಯವರು 75ರ ಗಡಿ ದಾಟಲಿದ್ದಾರೆ. ಸಂಘದ ಯಜಮಾನರು ನಾಯಕತ್ವ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದಾರೆ. ಸಂಘದ ಉದ್ಘಾಟನಾ ಕಾರ್ಯಕ್ರಮಗಳ ನೆಪದಲ್ಲಿ ಈ ಭೇಟಿ ನಡೆದಿದೆ, ಮಾತುಕತೆಯೂ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಈ ಅನುಮಾನಗಳಿಗೆ ಪೂರಕವಾಗಿ, ಮಹಾರಾಷ್ಟ್ರದ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್, ‘ಆರ್‌ಎಸ್‌ಎಸ್ ಭಾರತದ ನಾಯಕತ್ವದಲ್ಲಿ ಬದಲಾವಣೆಯನ್ನು ಬಯಸುತ್ತಿದೆ. ನಾನು ಅರ್ಥ ಮಾಡಿಕೊಂಡಂತೆ ಇಡೀ ಸಂಘ ಪರಿವಾರಕ್ಕೆ ಬದಲಾವಣೆ ಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ ಮತ್ತು ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಅವರ ಇತ್ತೀಚಿನ ಭೇಟಿಯೂ ಅದಕ್ಕೆ ಸಂಬಂಧಿಸಿದೆ’ ಎಂದಿರುವುದು, ರಾಜಕೀಯ ವಲಯದಲ್ಲಿ ಕೋಲಾಹಲವನ್ನೆಬ್ಬಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ಮುಂದಿನ ಲೋಕಸಭಾ ಚುನಾವಣೆಗಳು ನಡೆಯಲಿರುವ 2029ರ ನಂತರವೂ ಪ್ರಧಾನಿ ಮೋದಿ ದೇಶವನ್ನು ಮುನ್ನಡೆಸಲಿದ್ದಾರೆ. ಉತ್ತರಾಧಿಕಾರಿಯನ್ನು ಹುಡುಕುವ ಅಗತ್ಯವಿಲ್ಲ. ನಮ್ಮ ಸಂಸ್ಕೃತಿಯಲ್ಲಿ, ತಂದೆ ಜೀವಂತವಾಗಿರುವಾಗ ಉತ್ತರಾಧಿಕಾರಿಯ ಬಗ್ಗೆ ಮಾತನಾಡುವುದಿಲ್ಲ. ಅದು ಮೊಘಲ್ ಸಂಸ್ಕೃತಿ. ಮೋದಿಯವರೇ ನಮ್ಮ ನಾಯಕ- ಈಗಲೂ ಮುಂದಕ್ಕೂ’ ಎಂದಿರುವುದು ರಾಜಕೀಯ ಸಮರ್ಥನೆಯಾದರೂ, ಬಿಜೆಪಿಯ ಹಿರಿಯ ನಾಯಕರ ದೃಷ್ಟಿ ಆರ್‌ಎಸ್ಎಸ್ ನಾಯಕರತ್ತ ನೆಟ್ಟಿದೆ. ಎಲ್ಲದಕ್ಕೂ ನಾಗ್ಪುರವೇ ಕೇಂದ್ರವಾಗಿದೆ.

2024 ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನಾಯಕರ ಮತ್ತು ಸಂಘದ ಮುಖ್ಯಸ್ಥರ ನಡುವೆ ಮುನಿಸು ತಲೆದೋರಿತ್ತು. ಅದಕ್ಕೆ ಪೂರಕವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ‘ದಿ ಇಂಡಿಯನ್ ಎಕ್ಸ್ ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ, ‘ಬಿಜೆಪಿಗೆ ಇನ್ನು ಆರ್‌ಎಸ್‌ಎಸ್‌ ಕೈ ಹಿಡಿದು ನಡೆಸುವ ಅಗತ್ಯವಿಲ್ಲ’ ಎಂದು ಹೇಳಿದ್ದು- ಆರ್‌ಎಸ್ಎಸ್ ನಾಯಕರಿಗೆ ಇರುಸು ಮುರುಸುಂಟುಮಾಡಿತ್ತು. ಆ ಮುನಿಸು ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಎದ್ದು ಕಂಡಿತ್ತು. ಆ ನಂತರ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಆರ್‌ಎಸ್ಎಸ್ ಆಕ್ರಮಿಸಿಕೊಂಡಿತ್ತು.

WhatsApp Image 2025 04 01 at 16.55.04

ಇದನ್ನು ಓದಿದ್ದೀರಾ?: ಸಾಮರಸ್ಯದಿಂದ ಬದುಕಲು ಒಗ್ಗಟ್ಟು ಮುಖ್ಯ: ಮೋಹನ್ ಭಾಗವತ್

ಮೋದಿ ಮತ್ತು ಸಂಘದ ನಡುವಿನ ಹನ್ನೊಂದು ವರ್ಷಗಳ ಸುದೀರ್ಘ ಬಿರುಕು ಮತ್ತು ಮುನಿಸಿನ ನಡುವೆಯೇ ಮೋದಿ ನಾಗ್ಪುರಕ್ಕೆ ಭೇಟಿ ಕೊಟ್ಟಿದ್ದಾರೆ. 2013ರಲ್ಲಿ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಆ ಭೇಟಿಯ ನಂತರ, ಅವರು ರಾಷ್ಟ್ರ ರಾಜಕಾರಣಕ್ಕೆ ತೆರಳಿದರು. ಪ್ರಧಾನಿಯೂ ಆದರು.

ಅದೇ ರೀತಿ, ಇದೇ ಸೆಪ್ಟೆಂಬರ್‍‌ಗೆ 75ರ ಗಡಿ ದಾಟುವ ಮೋದಿಯವರು ಪ್ರಧಾನಿ ಪಟ್ಟದಿಂದ ಕೆಳಗಿಳಿಯಲಿದ್ದಾರೆಯೇ? ನಿವೃತ್ತರಾಗಲಿದ್ದಾರೆಯೇ? ಆರ್‌ಎಸ್‌ಎಸ್ ಮುಖ್ಯಸ್ಥರು ಪಕ್ಷದ ಅಧ್ಯಕ್ಷ ಅಥವಾ ಪ್ರಧಾನಿ ಕುರ್ಚಿ ಮೇಲೆ ಹೊಸಬರನ್ನು ಕೂರಿಸಲಿದ್ದಾರೆಯೇ? ಕಾದು ನೋಡೋಣ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

Download Eedina App Android / iOS

X