ಕಲಬುರಗಿ ನಗರವನ್ನು ನಾಗರಿಕ ಸ್ನೇಹಿಯಾಗಿಸಲು ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಸಲುವಾಗಿ ಯೋಜನೆಗಳನ್ನು ಹಮ್ಮಿಕೊಳ್ಳಲು ಪೂರ್ವಭಾವಿಯಾಗಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಶಾಸಕರು, ಅಧಿಕಾರಿಗಳು ಹಾಗೂ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದರು.
ಬೆಂಗಳೂರು ನಗರದ ತಮ್ಮ ಕಚೇರಿಗೆ ಮಂಗಳವಾರ ಆಗಮಿಸಿದ್ದು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರೊಂದಿಗೆ ಸಭೆ ನಡೆಸಿದ ಸಚಿವರು ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಹಲವಾರು ಸಲಹೆ, ಸೂಚನೆಗಳನ್ನು ನೀಡಿದರು. ವಿಡಿಯೋ ಸಂವಾದದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ ಹಾಗೂ ಕನಿಝಾ ಫಾತಿಮಾ ಹಾಗೂ ಕಲಬುರಗಿ ನಗರ ಪಾಲಿಕೆಯ ಆಯುಕ್ತರು, ನಗರ ಯೋಜನಾ ಸಂಸ್ಥೆಯಾದ ಐಐಹೆಚ್‌ಎಸ್ ಪ್ರತಿನಿಧಿಗಳು ಭಾಗವಹಿಸಿದ್ದರು.
“ನಗರಕ್ಕೆ ಸುಸ್ಥಿರ ನೀರು ಸರಬರಾಜು, ಉತ್ತಮ ರಸ್ತೆ, ಉದ್ಯಾನವನ, ತ್ಯಾಜ್ಯ ಮರುಬಳಕೆ, ತ್ಯಾಜ್ಯ ವಿಲೇವಾರಿ, ಸುಗಮ ವಾಹನ ಸಂಚಾರ, ಆಕರ್ಷಕ ಹಾಗೂ ಅನುಕೂಲಕರ ಬಸ್ ತಂಗುದಾಣಗಳ ನಿರ್ಮಾಣ ಮುಂತಾದ ಮೂಲಭೂತ ಸೌಲಭ್ಯಗಳನ್ನು ಉತ್ತಮಪಡಿಸಿ ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತನೆ ಮಾಡುವ ಗುರಿ ಹೊಂದಲಾಗಿದೆ” ಎಂದು ಸಚಿವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮುಕ್ತ ವ್ಯಾಪಾರ ಒಪ್ಪಂದ; ಕೇಂದ್ರ ಸರ್ಕಾರದ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿ ವಿರೋಧ
“ನಗರ ಯೋಜನೆಯನ್ನು ರೂಪಿಸುವಲ್ಲಿ ಪರಿಣಿತ ಸಲಹಾ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್ಮೆಂಟ್ ಸಂಸ್ಥೆಯು ಸ್ಥಳೀಯ ಶಾಸಕರು ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಲಬುರಗಿ ನಗರದ ಉತನ್ನತೀಕರಣಕ್ಕೆ ಸಂಬಂಧಿಸಿದಂತೆ ಉತ್ತಮ ಅಭ್ಯಾಸಗಳನ್ನು ಒಳಗೊಂಡ ವರದಿಯನ್ನು ಐದು ದಿನಗಳ ಒಳಗೆ ಸಲ್ಲಿಸಬೇಕು” ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.