ಭರವಸೆಯ ಆಟಗಾರ ಪ್ರಭ್‌ಸಿಮ್ರನ್ ಸಿಂಗ್ ಬಾರಿಸಿದ ಅರ್ಧಶತಕ ಹಾಗೂ ವೇಗಿ ಅರ್ಷದೀಪ್ ಸಿಂಗ್ (43ಕ್ಕೆ 3 ವಿಕೆಟ್) ಇವರ ಅಮೋಘ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 18ನೇ ಆವೃತ್ತಿಯ ಐಪಿಎಲ್‌ನ 13ನೇ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿತು. ಸತತ 2 ಗೆಲುವಿನೊಂದಿಗೆ ಪಂಜಾಬ್ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಖನೌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 171 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಎಲ್‌ಎಸ್‌ಜಿ 16.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ172 ರನ್ ಸೇರಿಸಿ ಭರ್ಜರಿ ಜಯಗಳಿಸಿತು. ಎಲ್‌ಎಸ್‌ಜಿ ಆಡಿದ 3 ಪಂದ್ಯಗಳಲ್ಲಿ 1 ಗೆಲುವು ದಾಖಲಿಸಿದ್ದು, 2 ಸೋಲು ಕಂಡಿದೆ.
171 ರನ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡದ ಆರಂಭ ಕಳಪೆಯಾಗಿತ್ತು. ಪ್ರಿಯಾಂಶ್ ಆರ್ಯ ಅವರನ್ನು ದಿಗ್ವೇಶ್ ರಠಿ ಪೆವಿಲಿಯನ್‌ಗೆ ಅಟ್ಟಿದರು. ಎರಡನೇ ವಿಕೆಟ್‌ಗೆ ಪ್ರಭ್‌ಸಿಮ್ರನ್ ಸಿಂಗ್ ಅವರನ್ನು ಸೇರಿಕೊಂಡ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಎಲ್‌ಎಸ್‌ಜಿ ಬೌಲರ್‌ಗಳು ವಿಫಲರಾದರು. ಈ ಜೋಡಿ 44 ಎಸೆತಗಳಲ್ಲಿ 84 ರನ್ ಸಿಡಿಸಿ ಔಟ್ ಆಯಿತು. ಆರಂಭಿಕ ಆಟಗಾರ ಪ್ರಭ್‌ಸಿಮ್ರನ್ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 69 ರನ್ ಬಾರಿಸಿ ಔಟ್ ಆದರು.
ಈ ಸುದ್ದಿ ಓದಿದ್ದೀರಾ? ಐಪಿಎಲ್ ಕ್ರಿಕೆಟ್ | ಆಟಗಾರರು, ಅಭಿಮಾನಿಗಳು ಮತ್ತು ಸೋಷಿಯಲ್ ಮೀಡಿಯಾ ಎಂಬ ಕಿಂದರಿಜೋಗಿ
ಮೂರನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ನೆಹಾಲ್ ವಧೀರ್ ಜೋಡಿ ತಂಡಕ್ಕೆ ಬೇಕಿದ್ದ ಅಗತ್ಯ ರನ್‌ಗಳನ್ನು ಕಲೆ ಹಾಕುವಲ್ಲಿ ಸಫಲರಾದರು. ಈ ಜೋಡಿ 37 ಎಸೆತಗಳಲ್ಲಿ ಅಜೇಯ 67 ರನ್ ಸಿಡಿಸಿ ತಂಡಕ್ಕೆ ನೆರವಾಯಿತು. ಶ್ರೇಯಸ್ ಅಯ್ಯರ್ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 52 ರನ್ ಬಾರಿಸಿದರು. ಇದು ಐಪಿಎಲ್‌ನಲ್ಲಿ ಶ್ರೇಯಸ್ ಅವರ ಎರಡನೇ ಅರ್ಧಶತಕವಾಗಿದೆ. ಇನ್ನು 24 ವರ್ಷದ ನೇಹಲ್ ವಧೀರ್ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 43 ರನ್ ಸಿಡಿಸಿ ಅಬ್ಬರಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಮಿಚೆಲ್ ಮಾರ್ಷ್ ಸೊನ್ನೆ ಸುತ್ತಿದರು. ಐಡೆನ್ ಮಾರ್ಕ್ರಾಮ್ (28 ರನ್) ಹಾಗೂ ನಿಕೋಲಸ್ ಪೂರನ್ ಎರಡನೇ ವಿಕೆಟ್‌ಗೆ 19 ಎಸೆತಗಳಲ್ಲಿ 31 ರನ್ ಸೇರಿಸಿತು. ನಾಯಕ ರಿಷಭ್ ಪಂತ್ (2) ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ನಿಕೋಲಸ್ ಪೂರನ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 44 ರನ್ ಸಿಡಿಸಿ ಔಟ್ ಆದರು. ಉಳಿದಂತೆ ಆಯುಷ್ ಬದೋನಿ 41 ರನ್, ಅಬ್ದುಲ್ ಸಮದ್ 27 ರನ್ ಸಿಡಿಸಿ ಔಟ್ ಆದರು.