ಐಪಿಎಲ್ 2025ರ ಟೂರ್ನಿ ನಡೆಯುತ್ತಿದೆ. ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ ನಡುವೆ ಬುಧವಾರ (ಏಪ್ರಿಲ್ 2) ಸಂಜೆ ಬೆಂಗಳೂರಿನಲ್ಲಿ ಪಂದ್ಯ ನಡೆಯಲಿದೆ. ಪಂದ್ಯಕ್ಕೆ ಮಳೆ ಅಡ್ಡಿ ಮಾಡಬಹುದು ಎಂಬ ಆತಂಕ ಅಭಿಮಾನಿಗಳಲ್ಲಿ ಕಾಡುತ್ತಿದೆ. ಹವಾಮಾನ ಇಲಾಖೆ ಕೂಡ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಬುಧವಾರ ಬೆಳಗ್ಗೆಯೇ ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ರಾತ್ರಿ ವೇಳೆಗೆ, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು, 11 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು, ಬೆಂಗಳೂರಿನ ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ವಿಜಯನಗರ, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ಇಲಾಖೆ ಹೇಳಿದೆ.
ಈ ವರದಿ ಓದಿದ್ದೀರಾ?: ನಿತೀಶ್ ಕುಮಾರ್ ವಕ್ಫ್ ಮಸೂದೆ ವಿರೋಧಿಸಬಹುದೆಂಬ ಭರವಸೆ ಈಗಲೂ ಇದೆ: ಕಾಂಗ್ರೆಸ್ ನಾಯಕ ತಾರಿಕ್
ಮುಂಗಾರು ಪೂರ್ವ ಮಳೆಯು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದ್ದರೆ, ಇತ್ತ, ಆರ್‌ಸಿಬಿ ಅಭಿಮಾನಿಗಳು ಆತಂಕದಲ್ಲಿದ್ದಾರೆ. ಈಗಾಗಲೇ ಎರಡು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ತಂಡ, ಎರಡೂ ಪಂದ್ಯಗಳನ್ನು ಗೆದ್ದಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರ್‌ಸಿಬಿಯ ಆರಂಭಿಕ ಗೆಲುವುಗಳು ಅಭಿಮಾನಿಗಳಲ್ಲಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುತ್ತದೆ ಎಂಬ ವಿಶ್ವಾಸ ಮೂಡಿಸಿದೆ.
ಆದರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದು ಎಂದು ಹೇಳಲಾಗುತ್ತಿದೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ಅಥವಾ ಆರಂಭವಾಗಿ ಅರ್ಧಕ್ಕೆ ಸ್ಥಗಿತಗೊಂಡರೆ, ಆರ್‌ಸಿಬಿಗೆ ಅಂಕ ಗಳಿಕೆಯಲ್ಲಿ ನಷ್ಟವಾಗಹುದು ಎಂಬ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ ಮಳೆಯಾಗದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.