ಭೂಮಿ ಸ್ವಲ್ಪ ಕಂಪಿಸಿದರೆ, ಜನ ಪ್ರಾಣಭಯದಿಂದ ತಮ್ಮ ಮನೆ-ಕಟ್ಟಡದಿಂದ ಹೊರ ಓಡುತ್ತಾರೆ. ತಾವು ಮೊದಲ ಬದುಕುಳಿದರೆ ಸಾಕು ಎಂದು ಧಾವಿಸುತ್ತಾರೆ. ಸದ್ಯ, ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿ ಭಾರೀ ದುರಂತ ಎದುರಾಗಿದೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಈ ನಡುವೆ, ಮತ್ತೊಮ್ಮೆ ಭೂಮಿ ಕಂಪಿಸಿದೆ. ಈ ವೇಳೆ, ಪ್ರಾಣಭಯಕ್ಕಿಂತ ಮಾನವೀಯತೆಗೆ ಒತ್ತುಕೊಟ್ಟಿರುವ ದಾದಿಯರು, ಭೂಕಂಪದ ನಡುವೆಯೂ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದರನ್ನು ಮುಂದುವರೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ, ಮ್ಯಾನ್ಮಾರ್ ಭೂಕಂಪದ ಸಮಯದಲ್ಲಿ ನವಜಾತ ಶಿಶುಗಳನ್ನು ದಾದಿಯರು ರಕ್ಷಿಸಿದ್ದಾರೆ. ತಮ್ಮ ಕರ್ತವ್ಯ ಪ್ರಜ್ಞೆ ಮತ್ತು ಮಾನವೀಯತೆಯನ್ನು ಮೆರೆದಿರುವುದು ಕಂಡುಬಂದಿದೆ.
ನಾಲ್ಕು ದಿನಗಳ ಹಿಂದೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪವು ಭಾರಿ ವಿನಾಶವನ್ನುಂಟು ಮಾಡಿದೆ. 7.7 ತೀವ್ರತೆಯ ಭೂಕಂಪದಿಂದ ಹಲವಾರು ಕಟ್ಟಡಗಳು ಉರುಳಿಬಿದ್ದಿವೆ. ಕನಿಷ್ಠ 2,056 ಮಂದಿ ಸಾವನ್ನಪ್ಪಿದ್ದು, 3,900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 270 ಮಂದಿ ಕಾಣೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವೈದ್ಯಕೀಯ ತಂಡವು ರಕ್ಷಣಾ ಮತ್ತು ಅಗತ್ಯ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ದಾದಿಯರು ಭೂಕಂಪ ಸಂಭವಿಸಿದ್ದರ ನಡುವೆಯೂ ನವಜಾತ ಶಿಶುಗಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಭೂಕಂಪ ಸಂಭವಿಸಿದಾಗ ತೊಟ್ಟಿಲುಗಳು ಉರುಳದಂತೆ ತಡೆಯಲು ಇಬ್ಬರು ನರ್ಸ್ ಧಾವಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ, ಭೂಕಂಪದಲ್ಲಿ ಆಸ್ಪತ್ರೆ ಕಟ್ಟಡವು ಅಲುಗಾಡಿದೆ. ಆ ದಾದಿಯರು ಭೀಕರ ಕಂಪನದ ಸಮಯದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗದೆ, ಶಿಶುಗಳ ತೊಟ್ಟಿಲುಗಳನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ. ನವಜಾತ ಶಿಶುಗಳನ್ನ ಕಾಪಾಡಲು ಮುಂದಾಗುತ್ತಾರೆ.
ಈ ವರದಿ ಓದಿದ್ದೀರಾ?: ಮ್ಯಾನ್ಮಾರ್ ಭೂಕಂಪ | ಸಾವಿರಕ್ಕೂ ಅಧಿಕ ಸಾವು; 2,000 ಮಂದಿಗೆ ಗಾಯ
ಆ ವಿಡಿಯೋದಲ್ಲಿ ಶಿಶುಗಳನ್ನು ರಕ್ಷಿಸುತ್ತಿರುವವರನ್ನು ಚೀನಾದ ಯುನ್ನಾನ್‌ನಲ್ಲಿರುವ ಜಿಂಗ್ಚೆಂಗ್ ಆಸ್ಪತ್ರೆಯ ದಾದಿಯರು ಎಂದು ಹೇಳಲಾಗಿದೆ. ನರ್ಸ್‌ಗಳ ಕರ್ತವ್ಯಪ್ರಜ್ಞೆ ಮತ್ತು ಮಾನವೀಯತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಬ್ಬರು ದಾದಿಯರ ಪ್ರಾಮಾಣಿಕ ಕೆಲಸ, ಕರ್ತವ್ಯ ಪ್ರಜ್ಞೆ ಜಗತ್ತಿಗೆ ಮಾದರಿ. ಮುಖ್ಯವಾಗಿ ಇಲ್ಲಿ ಮಾನವೀಯತೆ ಗೆದ್ದಿದೆ. ದಾದಿಯರ ಧೈರ್ಯವೇ ಇದಕ್ಕೆ ಸಾಕ್ಷಿ. ದಾದಿಯರು ಭೂಕಂಪ ಸಂಭವಿಸಿದರೂ ಓಡಿ ಹೋಗದೇ, ಅವರ ಅಲ್ಲಿಯೇ ಇದ್ದು ನವಜಾತ ಶಿಶುಗಳ ಜೀವಗಳನ್ನು ಉಳಿಸಿದ್ದಾರೆ. ದಾದಿಯರು ನಮಗೆ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ನೆಟ್ಟಿಗರ ಶ್ಲಾಘಿಸಿದ್ದಾರೆ.