ಗೋವಾಕ್ಕೆ ಕರ್ನಾಟಕದ ಅರಣ್ಯ ಭೂಮಿ, ಪ್ರಧಾನಿ ಮೋದಿ ಲಾಬಿಗೆ ಮಣಿಯುತ್ತಾ ಕಾಂಗ್ರೆಸ್‌ ಸರ್ಕಾರ?

Date:

Advertisements
ಮಹದಾಯಿ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ಅನುಮತಿ ನೀಡಲು ನಿರಾಕರಿಸಿದ ಹೊತ್ತಲ್ಲಿ ಗೋವಾ – ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗದ ಯೋಜನೆ ವಿರೋಧಿಸಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರವೇ ಈಗ ಪ್ರಧಾನಿ ಮೋದಿ ಲಾಬಿಗೆ ಒಳಗಾಗಿ ಕರ್ನಾಟಕ ಅರಣ್ಯ ಇಲಾಖೆಯೇ ಯೂ-ಟರ್ನ್ ಹೊಡೆದಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.  

ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲಾ ಭಾಗದ ಹಲವು ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಹದಾಯಿ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ಅನುಮತಿ ನೀಡಲು ನಿರಾಕರಿಸಿದ ಹೊತ್ತಲ್ಲಿ ಗೋವಾ ಸರ್ಕಾರದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ನಡೆಸಿರುವ ಲಾಬಿಗೆ ರಾಜ್ಯ ಸರ್ಕಾರ ಮಣಿದಿದೆ ಎನ್ನಲಾಗಿದೆ.

ಗೋವಾ – ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗದ ಯೋಜನೆ ಗೋವಾಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಯೋಜನೆಯಾಗಿದ್ದು, ಇದಕ್ಕೆ ಯಾವುದೇ ಅಡ್ಡಿ ಮಾಡದೆ ಸಹಕಾರ ನೀಡುವಂತೆ ನರೇಂದ್ರ ಮೋದಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಏಳು ತಿಂಗಳ ಹಿಂದೆ ಪತ್ರ ಬರೆದಿದ್ದರು. ಇದು ರಾಷ್ಟ್ರೀಯ ಗ್ರಿಡ್ ಅಭಿವೃದ್ಧಿಯ ಭಾಗ. ಈ ಯೋಜನೆಯ ಅನುಷ್ಠಾನಕ್ಕೆ ಸಹಕಾರ ನೀಡಬೇಕು ಎಂದು ಪತ್ರದಲ್ಲಿ ಪ್ರಧಾನಿ ಮನವಿ ಮಾಡಿದ್ದರು.

ಈಗ ಅರಣ್ಯ ಪಡೆಯ ಮುಖ್ಯಸ್ಥರ ಸಹಮತಿ ಮೇರೆಗೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಅವರಿಗೆ ಮಾ.25ರಂದು ಪ್ರಸ್ತಾವ ಸಲ್ಲಿಸಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ) ಬ್ರಿಜೇಶ್ ಕುಮಾರ್, “ಪರ್ಯಾಯ ಮಾರ್ಗದಲ್ಲಿ ಈ ಯೋಜನೆ ಅನುಷ್ಠಾನ ಮಾಡಬಹುದು ಅಥವಾ ಮರಗಳ ಹನನ ಕಡಿಮೆ ಮಾಡಲು ಆಧುನಿಕ ತಂತ್ರಜ್ಞಾನ ಬಳಸಲು ಯೋಜನಾ ಸಂಸ್ಥೆಯನ್ನು ನಿರ್ದೇಶಿಸಬಹುದು” ಎಂದಿದ್ದಾರೆ.

Advertisements

ಗೋವಾ- ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಕರ್ನಾಟಕದ 435 ಎಕರೆ ಅರಣ್ಯ ಒದಗಿಸುವ ಪ್ರಸ್ತಾವ ಇದಾಗಿದೆ. ಮಹದಾಯಿ ವಿಚಾರದಲ್ಲಿ ಗೋವಾ ಖ್ಯಾತೆ ತೆಗೆದ ಬೆನ್ನಲ್ಲೇ ಈ ವಿದ್ಯುತ್‌ ಯೋಜನೆಗೆ ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿ, ಕೇಂದ್ರದ ಮನವಿಯನ್ನು ತಿರಸ್ಕರಿಸಿತ್ತು. ಈಗ ಏಳು ತಿಂಗಳು ಕಳೆಯುವುದರಲ್ಲೇ ರಾಜ್ಯ ಅರಣ್ಯ ಇಲಾಖೆಯು ಯೂ-ಟರ್ನ್ ಹೊಡೆದಿದೆ ಎಂದು ತಿಳಿದು ಬಂದಿದೆ.

ಪ್ರಧಾನಿ ಕಾರ್ಯಾಲಯವೇ ಖುದ್ದು ಈ ವಿದ್ಯುತ್‌ ವಿತರಣಾ ಜಾಲದ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿದೆ. ರಾಜ್ಯದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಪ್ರಧಾನಿ ಹಾಗೂ ಕೇಂದ್ರ ಇಂಧನ ಸಚಿವರು ರಾಜ್ಯಕ್ಕೆ ಪದೇ ಪದೆ ಪತ್ರ ಬರೆದು, ನಿರಂತರ ಒತ್ತಡ ಹೇರಿದ್ದರಿಂದ ರಾಜ್ಯ ಸರ್ಕಾರದ ನಿಲುವು ಬದಲಾಗಿದೆ ಎನ್ನಲಾಗಿದೆ.

ಛತ್ತೀಸಗಢದ ತಮ್ನಾರ್‌ನಿಂದ ಗೋವಾಕ್ಕೆ ವಿದ್ಯುತ್ ಸರಬರಾಜು ಮಾಡುವ ಯೋಜನೆ ಇದಾಗಿದೆ. ಈ ಮಾರ್ಗ ಕರ್ನಾಟಕದ ಮೂಲಕ ಹಾದು ಹೋಗುತ್ತದೆ. ಧಾರವಾಡ ಜಿಲ್ಲೆಯ ನರೇಂದ್ರದಿಂದ ಗೋವಾಕ್ಕೆ ವಿದ್ಯುತ್ ಮಾರ್ಗ ನಿರ್ಮಿಸಲು ಮುಂದಾಗಿರುವ ‘ಗೋವಾ-ತಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್’ ರಾಜ್ಯದ ಅರಣ್ಯವನ್ನು ಅರಣ್ಯೇತರ ಬಳಕೆಗೆ ಬಳಸಿಕೊಳ್ಳುತ್ತಿದೆ.

ಇದರಿಂದ ಧಾರವಾಡ ಜಿಲ್ಲೆಯಲ್ಲಿ 4.70 ಹೆಕ್ಟೇರ್, ಬೆಳಗಾವಿ ಜಿಲ್ಲೆಯಲ್ಲಿ 101 ಹೆಕ್ಟೇರ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 70 ಹೆಕ್ಟೇ‌ರ್ ಅರಣ್ಯವನ್ನು ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಿದೆ. ಈ ಯೋಜನೆ ಜಾರಿಯಾದರೆ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ 177 ಹೆಕ್ಟೇರ್ ದಟ್ಟ ಕಾಡು ನಾಶವಾಗಲಿದೆ ಹಾಗೂ ಅಂದಾಜು 72 ಸಾವಿರ ಮರಗಳನ್ನು ಕತ್ತರಿಸಬೇಕಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪತ್ರಿಕೋದ್ಯಮದ ಪಾವಿತ್ರ್ಯವನ್ನು ಪಾತಾಳಕ್ಕಿಳಿಸಿದ ‘ಪತ್ರಕರ್ತರು’!

ಈ ವಿದ್ಯುತ್ ಯೋಜನೆಗೆ ಗೋವಾದ ಭಗವಾನ್ ಮಹಾವೀರ ವನ್ಯಜೀವಿ ಧಾಮದ 27 ಹೆಕ್ಟೇರ್ ಅರಣ್ಯ ಬಳಕೆಗೆ ಒಪ್ಪಿಗೆ ಕೇಳಿತ್ತು. ಈ ಪ್ರಸ್ತಾವಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 79ನೇ ಸಭೆಯಲ್ಲಿ‌ ಈಗಾಗಲೇ ಷರತ್ತುಬದ್ಧ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿ ಗೋವಾದ ಈ ವಿದ್ಯುತ್‌ ಯೋಜನೆಗೆ ಹಲವು ಪರಿಸರವಾದಿಗಳು, ಮಹದಾಯಿ ನೀರಾವರಿ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಉದ್ದೇಶಿತ ವಿದ್ಯುತ್ ಮಾರ್ಗ ದಾಂಡೇಲಿ ಆನೆ ಕಾರಿಡಾರ್, ಭೀಮಗಡ ಅಭಯಾರಣ್ಯದ ಪರಿಸರ ಸೂಕ್ಷ್ಮವಲಯ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯ ಹಾಗೂ ದಾಂಡೇಲಿ ಅಭಯಾರಣ್ಯಗಳ ಮೂಲಕ ಹಾದುಹೋಗಲಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಕಾಡು ನಾಶವಾಗಲಿದೆ. ಸಾವಿರಾರು ಅಪರೂಪದ ವನ್ಯಜೀವಿಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಆತಂಕ ವ್ಯಕ್ತವಾಗಿತ್ತು.

ಇದರಿಂದ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ, ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ದೇಶನದ ಮೇರೆಗೆ 2024ರ ಮಾರ್ಚ್ 16ರಂದು ಅರಣ್ಯ ಪಡೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, “ಈ ಅರಣ್ಯ ತೀರುವಳಿ ಪ್ರಸ್ತಾವ ತಿರಸ್ಕರಿಸಬೇಕು. ಅರಣ್ಯೇತರ ಪ್ರದೇಶದಲ್ಲಿ ಪ್ರಸ್ತಾಪಿತ ವಿದ್ಯುತ್ ವಿತರಣಾ ಜಾಲ ಕೈಗೆತ್ತಿಕೊಳ್ಳಬೇಕು ಎಂದು ನಿರ್ದೇಶನ ನೀಡಬೇಕು. ಭವಿಷ್ಯದಲ್ಲಿ ಇಂತಹ ಪ್ರಸ್ತಾವನೆಗಳ ಬಗ್ಗೆ ಪ್ರಾಥಮಿಕ ಹಂತದಲ್ಲೇ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಅಗಾಧ ಪ್ರಮಾಣದ ಅರಣ್ಯ ನಾಶವಾಗುತ್ತಿದ್ದರೂ, ಈ ಪ್ರಸ್ತಾವನೆ ಶಿಫಾರಸು ಮಾಡಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು” ಎಂದು ತಾಕೀತು ಮಾಡಿದ್ದರು.

ಈಗ ಕರ್ನಾಟಕ ಅರಣ್ಯ ಇಲಾಖೆಯೇ ಯೂ-ಟರ್ನ್ ಹೊಡೆದಿದ್ದು, ಗೋವಾ – ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗದ ಯೋಜನೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತು ಕರ್ನಾಟಕ ನಡುವೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಸಿಕ್ಕಬೇಕಿರುವ ಪಾಲಿಗಾಗಿ ಇತ್ತೀಚಿನ ದಿನಗಳಲ್ಲಿ ಸಂಘರ್ಷ ಸಾಮಾನ್ಯವಾಗಿದೆ. ಮಹದಾಯಿ ಯೋಜನೆಯ ವಿಚಾರದಲ್ಲಿ ಈ ಸಂಘರ್ಷ ಅತಿ ಹೆಚ್ಚಾಗಿಯೇ ಇದೆ. ತನ್ನ ನ್ಯಾಯಯುತ ಪಾಲನ್ನು ತನಗೆ ನೀಡುವಂತೆ ಕೇಳಲು ಕರ್ನಾಟಕ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಎಷ್ಟೇ ಕೇಳಿಕೊಂಡರೂ ರಾಜ್ಯದ ಮನವಿಗೆ ಮೋದಿ ಕಿವಿಗೊಟ್ಟಿಲ್ಲ. ಆದರೆ, ಗೋವಾ ಸರ್ಕಾರದ ಪರವಾಗಿ ಪ್ರಧಾನಿ ಮೋದಿ ನಿರಂತರ ಲಾಬಿ ನಡೆಸುತ್ತಿದ್ದಾರೆ.

ಮಹದಾಯಿ ನದಿ ನೀರಿನ ವಿವಾದ ದಶಕಗಳ ಕಾಲ ನಡೆಯುತ್ತಲೇ ಬಂದಿದೆ. ಕರ್ನಾಟಕ ಸರ್ಕಾರ ಈ ಯೋಜನೆಗಾಗಿ ತಯಾರಿಸಿದ ಈಗಿನ ವೆಚ್ಚದ ನವೀಕೃತ ಅಂದಾಜು ರೂ. 1,677 ಕೋಟಿ. 2012ರಲ್ಲಿ ಈ ಯೋಜನೆಗೆ ಮೂರ್ತರೂಪ ದೊರೆತಾಗ ಅಂದಾಜಿಸಿದ ವೆಚ್ಚ ರೂ. 840.92 ಕೋಟಿ. ಅಂದರೆ ಯೋಜನೆ ವೆಚ್ಚ ಹೆಚ್ಚೂಕಡಿಮೆ ದುಪ್ಪಟ್ಟು.

ಯೋಜನೆಗೆ ಬೇಕಿರುವ ಅರಣ್ಯ ಪ್ರದೇಶದ ವ್ಯಾಪ್ತಿ 499.13 ಹೆಕ್ಟೇರ್‌. ಈಗ ಈ ಯೋಜನೆ ಆರಂಭಿಸಲು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಅನುಮತಿಯನ್ನು ಎದುರು ನೊಡುತ್ತಿದೆ. ಆದರೆ, ಸಮಸ್ಯೆ ಎದುರಾಗಿರುವುದು ರಾಷ್ಟ್ರೀಯ ವನ್ಯಜೀವಿ ಮಂಡಳಿಯು ತೆಗೆದುಕೊಂಡಿರುವ ತೀರ್ಮಾನದಿಂದ ಮಹದಾಯಿ ನನೆಗುದಿಗೆ ಬಿದ್ದಿದೆ. ಅತ್ತ ಗೋವಾ ಸುಪ್ರೀಂ ಕೋರ್ಟ್‌ನಲ್ಲಿ ಖ್ಯಾತೆ ತೆಗೆದಿದೆ.

ಮಹದಾಯಿ ನ್ಯಾಯಾಧೀಕರಣ 13.42 ಟಿಎಂಸಿ ನೀರನ್ನು ಕರ್ನಾಟಕಕ್ಕೆ ನೀಡಿ ಆದೇಶ ಹೊರಡಿಸಿತು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಫೆಬ್ರುವರಿ 2020ರಲ್ಲಿ ಆದೇಶ ಆಗಿದೆ. ಈ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಡಿಸೆಂಬರ್ 29, 2022ರಲ್ಲಿ ಒಪ್ಪಿಗೆ ನೀಡಿದೆ. ಈ ಒಪ್ಪಿಗೆಯ ಹಿನ್ನೆಲೆಯಲ್ಲಿಯೇ ನೋಡುವುದಾದರೆ, 1.78 ಟಿಎಂಸಿ ಅಡಿ ನೀರನ್ನು ಮೀಸಲಿಡಲಾಯಿತು. ಇದರಿಂದ ಉತ್ತರ ಕರ್ನಾಟಕದ 4 ಜಿಲ್ಲೆ 13 ತಾಲೂಕಿಗೆ ಕುಡಿಯುವ ನೀರು ಸಿಗಲಿದೆ.

ಮಹದಾಯಿಗೆ ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರವು, ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 10.68 ಹೆಕ್ಟೇ‌ರ್ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತದೆ ಎಂದು ತನ್ನ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಈ ಪ್ರಸ್ತಾವನೆಗೆ ರಾಜ್ಯ ವನ್ಯಜೀವಿ ಮಂಡಳಿ ಅನುಮತಿ ನೀಡಿ, ಕೇಂದ್ರಕ್ಕೆ ಕಳುಹಿಸಿತ್ತು. ಆದರೆ, ಕೇಂದ್ರ ವನ್ಯಜೀವಿ ಮಂಡಳಿ ತನ್ನ ಸಭೆಯಲ್ಲಿ ರಾಜ್ಯದ ಅನುಮತಿಯನ್ನು ನಿರಾಕರಿಸಿದೆ.

ಸದ್ಯಕ್ಕೆ ಕರ್ನಾಟಕಕ್ಕೆ ಮಹದಾಯಿ ಯೋಜನೆಗೆ ಅಡ್ಡಗಾಲು ಹಾಕಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಸದಾ ಕಹಿಯನ್ನೇ ನೀಡಿ ಗೋವಾಗೆ ಸಿಹಿ ನೀಡಲು ಹೊರಟಿರುವುದು ಯಾವ ನ್ಯಾಯ? ಈ ಬಗ್ಗೆ ಮಾತನಾಡಬೇಕಾದ ರಾಜ್ಯದ ಬಿಜೆಪಿ ಸಂಸದರು ತಮ್ಮ ಬಾಯಿಗೆ ಹೊಲಿಗೆ ಹಾಕಿಕೊಂಡು, ಕೇಂದ್ರದ ವಿರುದ್ಧ ಧ್ವನಿ ಎತ್ತದೆ ನಡು ಬಗ್ಗಿಸಿಕೊಂಡಿದ್ದಾರೆ ಎಂಬುದು ಉತ್ತರ ಕರ್ನಾಟಕದ ಜನರಲ್ಲಿನ ಆಕ್ರೋಶ.

ಮಹದಾಯಿ ಹೋರಾಟಗಾರ ಸಿದ್ದಣ್ಣ ತೇಜಿ ಮಾತನಾಡಿ, “40 ವರ್ಷಗಳಿಂದ ಮಹದಾಯಿ ರಾಜಕಾರಣಕ್ಕೆ ಬಲಿಯಾಗುತ್ತಲೇ ಬಂದಿದೆ. ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಹದಾಯಿ ನೆನಪಿಸಿಕೊಳ್ಳುತ್ತಾರೆ. ಇವರ ರಾಜಕಾರಣಕ್ಕೆ ನಮ್ಮ ಭಾಗದ ರೈತರಿಗೆ 40 ವರ್ಷಗಳಿಂದ ಅನ್ಯಾಯವಾಗುತ್ತಿದೆ. ರಾಜಕಾರಣವನ್ನು ಬದಿಗಿರಿಸಿ, ಕುಡಿಯಲು ನೀರು ಕೊಡುವ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಗೋವಾ ಸರ್ಕಾರ ಜೊತೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು. ಗೋವಾ- ತಮ್ನಾರ್ ಯೋಜನೆಗೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಒಪ್ಪಿಗೆ ಕೊಡಬಾರದು. ನೀರಾವರಿ ಸಚಿವರು ಉತ್ತರ ಕರ್ನಾಟಕದವರೇ ಅಲ್ಲ. ಅವರಿಗೆ ನಮ್ಮ ಅಳಲು ಅರ್ಥವಾಗುವುದಿಲ್ಲ. ಏನಾದ್ರೂ ಕೇಂದ್ರದ ಜೊತೆ ಹೊಂದಾಣಿಕೆ ಮಾಡಿಕೊಂಡು ಗೋವಾದ ವಿದ್ಯುತ್‌ ಯೋಜನೆಗೆ ರಾಜ್ಯ ಅನುಮತಿ ನೀಡದರೆ ಈ ಜೀವನದಲ್ಲಿ ಮಹದಾಯಿಗೆ ನ್ಯಾಯ ಸಿಗಲ್ಲ. ಮಹದಾಯಿಗೆ ನ್ಯಾಯ ಸಿಕ್ಕ ಮೇಲೆ ಬೇಕಾದರೆ ವಿದ್ಯುತ್‌ ಯೋಜನೆಗೆ ರಾಜ್ಯ ಒಪ್ಪಿಗೆ ಸೂಚಿಸಲಿ” ಎಂದು ಹೇಳಿದರು.

ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ, “2018ರಲ್ಲೇ ಈ ಬಗ್ಗೆ ತೀರ್ಪು ಬಂದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು. ಯೋಜನೆ ಜಾರಿಗೆ ಯಾವ ಕ್ರಮವನ್ನೂ ಕೈಗೊಳ್ಳದೇ ಚುನಾವಣೆ ಬಂದಾಗ ಯೋಜನೆಯ ಪರಿಷ್ಕೃತ ವಿಸ್ತ್ರತ ಯೋಜನಾ ವರದಿಗೆ ಒಪ್ಪಿಗೆ ನೀಡಿದಂತೆ ಮಾಡಿ ರಾಜಕೀಯ ಲಾಭ ಪಡೆಯಿತು. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ಮಹದಾಯಿ ಯೋಜನೆ ಜಾರಿಗೆ ಕೇಂದ್ರ ವಿಳಂಬ ಮಾಡುತ್ತಿದೆ. ಗೋವಾದ ವಿದ್ಯುತ್‌ ಪ್ರಸರಣ ಮಾರ್ಗದ ಯೋಜನೆ ಬಗ್ಗೆ ಕರ್ನಾಟಕ ಸರ್ಕಾರ ಹಿಂದೆ ಒಪ್ಪಿಗೆ ನೀಡಿದ್ದನ್ನು ಬೇರೆ ದಾರಿ ಇಲ್ಲದೇ ಪುನರ್‌ಪರಿಶೀಲಿಸಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು. ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ನಾವು ಬೆಂಬಲ ಸೂಚಿಸಿದ್ದೇವು. ಈಗ ರಾಜ್ಯ ಸರ್ಕಾರವೇ ಒಪ್ಪಿಗೆ ಕೊಡುತ್ತದೆ ಎಂದರೆ ನಮ್ಮ ಭಾಗದಿಂದ ಹೋರಾಟ ಕೈಗೆತ್ತಿಕೊಳ್ಳುತ್ತೇವೆ” ಎಂದು ತಿಳಿಸಿದರು.

“ನಮ್ಮ ಭಾಗದ ಸಚಿವರಿಗೆ, ಶಾಸಕರಿಗೆ ಮಹದಾಯಿ ಆಟದ ಅಂಗಳವಾಗಿದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹದಾಯಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಯಾವುದೇ ನಾಯಕರಿಗೂ ಮಹದಾಯಿ ಜಾರಿ ಬಗ್ಗೆ ಕಿಂಚತ್ತೂ ಕಾಳಜಿ ಕಾಣುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಾರೆ ಕಳಸಾ ಬಂಡೂರಿ ಯೋಜನೆ ಉತ್ತರ ಕರ್ನಾಟಕದ ಜನಪ್ರತಿನಿಧಿಗಳಿಗೆ ಒಂದು ಚುನಾವಣೆ ಸರಕಾಗಿದೆ. 2002 ರಿಂದ ಕಳಸಾ ಬಂಡೂರಿ ಯೋಜನೆಯು ಮತದಾರರ ಭಾವನೆಗಳೊಂದಿಗೆ ಆಟವಾಡುವ ರಾಜಕೀಯ ವಿಷಯವಾಗಿ ಬದಲಾಗಿದೆ. ಬೆಳಗಾವಿ, ಧಾರವಾಡ ಹಾಗೂ ಗದಗ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರು ಒಳರಾಜಕಾರಣಕ್ಕೆ ಮಹದಾಯಿ ಬಲಿಯಾಗುತ್ತಲೇ ಹೋಗುತ್ತಿದೆ. ‌ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮಹದಾಯಿ ಸಮಸ್ಯೆಯನ್ನು ಬಗೆಹರಿಸುವ ಬದಲು ರಾಜಕಾರಣಕ್ಕೆ ಜೀವಂತವಾಗಿಟ್ಟುಕೊಟ್ಟಿರುವುದೇ ಹೆಚ್ಚು ಎಂಬ ಆರೋಪಗಳು ಅವರ ಸುತ್ತ ಇವೆ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಸಮಯದಲ್ಲಿ ಮಾತ್ರ ಈ ಯೋಜನೆಯ ಬಗ್ಗೆ ದನಿಯೆತ್ತುತ್ತಾರೆ. ಆದರೆ ಅಧಿಕಾರ ಸ್ವೀಕರಿಸಿದ ನಂತರ ಮರೆಯುತ್ತಾರೆ. ಇದು ಮಹದಾಯಿ ವಾಸ್ತವ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X