ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ರಣಜಿಯಲ್ಲಿ ಮುಂಬೈ ತಂಡ ತೊರೆಯಲು ನಿರ್ಧರಿಸಿದ್ದಾರೆ. ಗೋವಾ ತಂಡ ಸೇರುವುದಾಗಿ ಹೇಳಿಕೊಂಡಿದ್ದಾರೆ.
ವೈಯಕ್ತಿಕ ಕಾರಣಗಳನ್ನು ಉಲ್ಲೆಖಿಸಿ ಜೈಸ್ವಾಲ್ ಅವರು ‘ಮುಂಬೈ ಕ್ರಿಕೆಟ್ ಅಸೋಸಿಯೇಷನ್’ಗೆ (ಎಂಸಿಎ) ಪತ್ರ ಬರೆದಿದ್ದಾರೆ. ತಮ್ಮನ್ನು ತಂಡದಿಂದ ಇಡುಗಡೆಗೊಳಿಸುವಂತೆ ವಿನಂತಿ ಮಾಡಿದ್ದಾರೆ. ಅಲ್ಲದೆ, 2025-26ನೇ ರಣಜಿ ಕ್ರಿಕೆಟ್ ಋತುವಿನಿಂದ ಗೋವಾ ತಂಡದಲ್ಲಿ ಆಡುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಎಂಸಿಎ ಅಧಿಕಾರಿ ಕೂಡ ಖಾತ್ರಿ ಪಡಿಸಿದ್ದು, “ಜೈಸ್ವಾಲ್ ನಡೆ ಆಶ್ಚರ್ಯಕರವಾಗಿದೆ. ಅವರು ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣ ಇರಬಹುದು. ಮುಂಬೈ ತಂಡದಿಂದ ತಮ್ಮನ್ನು ಬಿಡುಗಡೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ. ಅವರ ವಿನಂತಿಯನ್ನು ನಾವು ಸ್ವೀಕರಿಸಿದ್ದೇವೆ” ಎಂದು ಹೇಳಿದ್ದಾರೆ.
ಗೋವಾ ಕ್ರಿಕೆಟ್ ಅಸೋಸಿಯೇಷನ್‌ನ ಕಾರ್ಯದರ್ಶಿ ಶಂಬಾ ದೇಸಾಯಿ ಕೂಡ ಪ್ರತಿಕ್ರಿಯಿಸಿದ್ದು, “”ಜೈಸ್ವಾಲ್ ನಮ್ಮ ತಂಡದಲ್ಲಿ ಆಡಲು ಬಯಸಿದ್ದಾರೆ. ಅವರನ್ನು ನಾವು ಸ್ವಾಗತಿಸುತ್ತೇವೆ. ಅವರು ಗೋವಾ ತಂಡವನ್ನು ಮುನ್ನಡೆಸಬಹುದು. ಆದಾಗ್ಯೂ, ತಂಡದಲ್ಲಿ ಅವರ ಲಭ್ಯತೆ ಯಾವ ರೀತಿಯಲ್ಲಿರುತ್ತದೆ ಎಂಬುದರ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಐಪಿಎಲ್ ಕ್ರಿಕೆಟ್ | ಆಟಗಾರರು, ಅಭಿಮಾನಿಗಳು ಮತ್ತು ಸೋಷಿಯಲ್ ಮೀಡಿಯಾ ಎಂಬ ಕಿಂದರಿಜೋಗಿ
ಇತ್ತೀಚೆಗೆ, ಭಾರತೀಯ ಕ್ರಿಕೆಟ್ ತಂಡದಲ್ಲಿ ಇರುವ ಎಲ್ಲ ಆಟಗಾರರು ಕಡ್ಢಾಯವಾಗಿ ದೇಶಿಯ ಕ್ರಿಕೆಟ್ (ರಣಜಿ)ಯಲ್ಲಿ ಆಡಲೇಬೇಕೆಂದು ಬಿಸಿಸಿಐ ನಿಯಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಜೈಸ್ವಾಲ್ 2024-25ನೇ ಋತುವಿನ ರಣಜಿ ಟೂರ್ನಿಯಲ್ಲಿ ಮುಂಬೈ ತಂಡದಲ್ಲಿ ಆಡಿದ್ದರು. ಇದೀಗ, ತಂಡ ತೊರೆಯಲು ನಿರ್ಧರಿಸಿದ್ದಾರೆ.