1983ರ ಭಾರತದ ವಿಶ್ವಕಪ್‌ ವಿಜಯೋತ್ಸವಕ್ಕೆ 40ರ ಸಂಭ್ರಮ; ಅಭಿಮಾನಿಗಳಿಂದ ರೋಚಕ ಪಂದ್ಯದ ನೆನಪು

Date:

Advertisements

ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್ ನೇತೃತ್ವದಲ್ಲಿ ಭಾರತ ತಂಡ ಚೊಚ್ಚಲ ವಿಶ್ವಕಪ್‌ ಕಿರೀಟ ಮುಡಿಗೇರಿಸಿಕೊಂಡು ಇಂದಿಗೆ 40 ವರ್ಷಗಳು. 1983ರಲ್ಲಿ ಇದೇ ಜೂನ್ 25ರಂದು ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಭಾರತ ತಂಡ ಸತತ ಎರಡು ಬಾರಿ ವಿಶ್ವಕಪ್​ ಜಯಿಸಿದ್ದ ಬಲಿಷ್ಠ ವೆಸ್ಟ್‌ ಇಂಡೀಸ್‌ ವಿರುದ್ಧದ ಫೈನಲ್ ಪಂದ್ಯದಲ್ಲಿ 43 ರನ್‌ಗಳಿಂದ ಗೆಲುವು ಪಡೆದು ಇತಿಹಾಸ ನಿರ್ಮಿಸಿತ್ತು.

ವಿಶ್ವ ಕ್ರಿಕೆಟ್ ರಂಗದಲ್ಲಿ ಭಾರತ ತಂಡವು ಕಳೆದ ಎರಡು ದಶಕಗಳಿಂದ ಬಲಿಷ್ಠ ಪಡೆಯಾಗಿ ಹೊರಹೊಮ್ಮಿದೆ. ಏಕದಿನ, ಟಿ20 ವಿಶ್ವಕಪ್‌, ಟೆಸ್ಟ್‌ ಚಾಂಪಿಯನ್‌ಷಿಪ್‌ ಸೇರಿ ಎಲ್ಲ ಮಾದರಿಯ ಟ್ರೋಫಿಯನ್ನು ಜಯಿಸಿದೆ. ಏಕದಿನ ಮಾದರಿಯಲ್ಲಿ ಭಾರತ ತಂಡ ಎರಡು ಬಾರಿ ಟ್ರೋಫಿ ಜಯಗಳಿಸಿದೆ. ಬಿಸಿಸಿಐ, ಐಪಿಎಲ್ ಸಂಸ್ಥೆಗಳು ವಿಶ್ವದ ಶ್ರೀಮಂತ ಸಂಸ್ಥೆಯಾಗಿ ಬೆಳೆದಿವೆ.

ಆದರೆ ಕಳೆದ ನಾಲ್ಕೈದು ದಶಕಗಳ ಹಿಂದೆ ಭಾರತದ ಕ್ರಿಕೆಟ್ ತಂಡ ಈಗಿನಷ್ಟು ಪ್ರಭಾವಿ ತಂಡವಾಗಿರಲಿಲ್ಲ. ಆ ದಿನಗಳಲ್ಲಿ ಆಸ್ಟ್ರೇಲಿಯ, ವೆಸ್ಟ್‌ ಇಂಡೀಸ್ ತಂಡಗಳು ಕ್ರಿಕೆಟ್‌ ಅನ್ನು ಆಳುತ್ತಿದ್ದವು. ಆಗೇನಿದ್ದರೂ ಭಾರತಕ್ಕೆ ದೊರಕುತ್ತಿದ್ದು ಅಪರೂಪದ ಗೆಲುವು ಮಾತ್ರ. 1970ರ ದಶಕದಲ್ಲಿ ಕ್ರಿಕೆಟನ್ನು ಮತ್ತಷ್ಟು ಜನಪ್ರಿಯಗೊಳಿಸಲು ಐಸಿಸಿ ಟೆಸ್ಟ್‌ ಕ್ರಿಕೆಟ್ ಜೊತೆಗೆ ಏಕದಿನ ಪಂದ್ಯಗಳನ್ನು ಶುರು ಮಾಡಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಸ್ತಿತ್ವವಿಲ್ಲದ ಭಾರತಕ್ಕೆ 60 ಓವರ್‌ನ ಏಕದಿನ ಪಂದ್ಯಗಳು ನಿಜವಾಗಿಯೂ ಸವಾಲಿನದಾಗಿತ್ತು.

Advertisements

1975ರಲ್ಲಿ ಏಕದಿನ ವಿಶ್ವಕಪ್‌ ಟೂರ್ನಿಯನ್ನು ಮೊದಲ ಬಾರಿಗೆ ಆರಂಭಿಸಲಾಗಿತ್ತು. ಇಂಗ್ಲೆಂಡಿನಲ್ಲಿ 1975, 1979ರಲ್ಲಿ ಎರಡು ಬಾರಿಯೂ ವಿಶ್ವಕಪ್ ಟ್ರೋಫಿ ಗೆದ್ದು ಸೋಲಿಲ್ಲದ ಸರದಾರನಾದ ತಂಡ ವೆಸ್ಟ್‌ ಇಂಡೀಸ್. ವಿವಿಯನ್ ರಿಚರ್ಡ್ಸ್, ಆಂಡಿ ರಾಬರ್ಟ್ಸ್, ಮಾಲ್ಕಮ್ ಮಾರ್ಷಲ್ ಅವರಂತಹ ಬಲಿಷ್ಠ ಆಟಗಾರರಿದ್ದ ಈ ತಂಡ ಯಾವುದೇ ದೇಶದ ಯಾವುದೇ ಪಿಚ್‌ನಲ್ಲಿ ಕಣಕ್ಕಿಳಿದರೂ ಗೆಲುವು ದಾಖಲಿಸುತ್ತಿತ್ತು. ಇವೆರೆಡು ವಿಶ್ವಕಪ್‌ಗಳಲ್ಲಿ ಎಸ್‌ ವೆಂಕಟರಾಘವನ್‌ ನೇತೃತ್ವದ ಭಾರತ ತಂಡ ಕೇವಲ ಎರಡು ಪಂದ್ಯಗಳನ್ನು ಜಯಿಸಿ ಲೀಗ್​​ ಹಂತದಲ್ಲೇ ಹೊರಬಿದ್ದಿತ್ತು.

1983ರಲ್ಲಿ ಹೊಸ ಅಧ್ಯಾಯ ಪ್ರಾರಂಭ

ಮೂರನೇ ವಿಶ್ವಕಪ್‌ ಟೂರ್ನಿಯನ್ನು ಕೂಡ ಇಂಗ್ಲೆಂಡಿನಲ್ಲಿ ಆಯೋಜಿಸಲಾಗಿತ್ತು. ಮೊದಲ ಎರಡೂ ವಿಶ್ವಕಪ್‌ಗಳಲ್ಲಿ ಹಿನಾಯ ಸೋಲು ಕಂಡ ಭಾರತ ತಂಡದ ನಾಯಕತ್ವವನ್ನು 1983ರ ವಿಶ್ವಕಪ್‌ ತಂಡದಲ್ಲಿ ಬದಲಾಯಿಸಲಾಗಿತ್ತು. ಎಸ್‌ ವೆಂಕಟರಾಘವನ್‌ ಅವರಿಗೆ ಕೊಕ್‌ ನೀಡಿ 1979ರಲ್ಲಿ ಆಡಿದ್ದ ಮಧ್ಯಮ ವೇಗದ ಬೌಲರ್‌ ಕಪಿಲ್‌ ದೇವ್‌ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಕಪಿಲ್‌ ದೇವ್‌ ಸಾರಥ್ಯದ 14 ಆಟಗಾರರ ತಂಡದಲ್ಲಿ ದಿಲೀಪ್ ವೆಂಗ್‌ಸರ್ಕರ್, ಸೈಯದ್ ಕಿರ್ಮಾನಿ, ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್, ಮದನ್ ಲಾಲ್. ಯಶ್ಪಾಲ್ ಶರ್ಮಾ, ಕೆ. ಶ್ರೀಕಾಂತ್, ಬಲ್ವಿಂದರ್ ಸಂಧು, ರವಿ ಶಾಸ್ತ್ರಿ, ಸಂದೀಪ್ ಪಾಟೀಲ್, ರೋಜರ್ ಬಿನ್ನಿ, ಕೀರ್ತಿ ಆಜಾದ್ ಮತ್ತು ಸುನಿಲ್ ವಲ್ಸನ್ ಇದ್ದರು. ಕರ್ನಾಟಕದಿಂದ ವಿಕೆಟ್ ಕೀಪರ್‌ ಸೈಯದ್ ಕಿರ್ಮಾನಿ ಹಾಗೂ ರೋಜರ್ ಬಿನ್ನಿ ಅವಕಾಶ ಪಡೆದಿದ್ದರು.

ಈ ಸುದ್ದಿ ಓದಿದ್ದೀರಾ? ಕೋಟಿ ಕೊಟ್ಟರೂ ಯಾರಿಗೂ ಬೇಡವಾದ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥನ ಸ್ಥಾನ!

ಈ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್​ ಆಗಿ ಚೊಚ್ಚಲ ಟ್ರೋಫಿ ಗೆಲ್ಲುತ್ತದೆ ಎಂಬುದನ್ನು ಯಾರೊಬ್ಬರೂ ಊಹಿಸಿರಲಿಲ್ಲ. ಟ್ರೋಫಿ ಹಂತದವರೆಗೂ ಇರಲಿ, ಕಳೆದ ಎರಡು ವಿಶ್ವಕಪ್‌ನಂತೆ ಲೀಗ್​​​ನಲ್ಲೇ ತವರಿಗೆ ಮರಳುತ್ತದೆ ಎಂದು ಎಲ್ಲರೂ ಊಹಿಸಿದ್ದರು. ಅದರಲ್ಲೂ ವಿಂಡೀಸ್​ ವಿರುದ್ಧ ಫೈನಲ್​ ಗೆಲ್ಲುತ್ತೆ ಎಂಬುದು ಕನಸಿನ ಮಾತಾಗಿತ್ತು. ಇದೆಲ್ಲ ಲೆಕ್ಕಾಚಾರಗಳನ್ನು ಸುಳ್ಳು ಮಾಡಿತ್ತು ಕಪಿಲ್​ ದೇವ್​ ಸಾರಥ್ಯದ ಭಾರತ ತಂಡ.

ಲೀಗ್‌ನಲ್ಲಿ 4 ಪಂದ್ಯ ಗೆದ್ದಿದ್ದ ಭಾರತ

1983ರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ತಂಡಗಳ ಸಂಖ್ಯೆ 8. ಇದನ್ನೂ 2 ಗುಂಪುಗಳಾಗಿ ವಿಭಜಿಸಲಾಗಿತ್ತು. ಭಾರತದ ಗುಂಪಿನಲ್ಲಿ ಹಿಂದಿನೆರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್, ಆಸ್ಟ್ರೇ ಲಿಯ ಹಾಗೂ ಜಿಂಬಾಬ್ವೆ ತಂಡಗಳಿದ್ದವು. ಲೀಗ್ ಹಂತದಲ್ಲಿ ಎರಡು ಸುತ್ತಿನ ಸ್ಪರ್ಧೆ. ಬಳಿಕ ಸೆಮಿಫೈನಲ್, ಫೈನಲ್. ಲೀಗ್‌ನಲ್ಲಿ ಆಸ್ಟ್ರೇ ಲಿಯ ಮತ್ತು ವೆಂಡೀಸ್‌ ವಿರುದ್ಧ ಸೋತಿದ್ದರೂ 6 ಪಂದ್ಯಗಳಲ್ಲಿ 4 ಪಂದ್ಯ ಜಯಗಳಿಸಿದ ಕಾರಣ ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸಿತ್ತು. ಸೆಮಿಯಲ್ಲಿ ಪ್ರಬಲ ಎದುರಾಳಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ವಿಂಡೀಸ್‌ ವಿರುದ್ಧ ಫೈನಲ್‌ಗೆ ಹೆಜ್ಜೆಯಿಟ್ಟಿತ್ತು.  

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ

ಲಾರ್ಡ್ಸ್ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ವಿಂಡೀಸ್ ಬೌಲರ್​ಗಳ ಮಾರಕ ದಾಳಿಯ ಮುಂದೆ ಭಾರತ 54.4 ಓವರ್‌ಗಳಲ್ಲಿ ಕೇವಲ 183 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ್ದ ಸುನಿಲ್ ಗವಾಸ್ಕರ್ ಕೇವಲ ಎರಡು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಎರಡನೇ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೃಷ್ಣಮಾಚಾರಿ ಶ್ರೀಕಾಂತ್ (38)  ಮತ್ತು ಮೊಹಿಂದರ್ ಅಮರನಾಥ್ 57 ರನ್ ಜೊತೆಯಾಟ ಆಡುವುದರೊಂದಿಗೆ ಉತ್ತಮ ಇನ್ನಿಂಗ್ಸ್ ಕಟ್ಟಿದ್ದರು.

ಒಟ್ಟು ತಂಡದ ಮೊತ್ತ 59 ಇರುವಾಗ ಶ್ರೀಕಾಂತ್ ಅವರನ್ನು ಮಾರ್ಷಲ್ ಔಟ್ ಮಾಡಿದರು. ಆ ನಂತರ 26 ರನ್ ಗಳಿಸಿದ್ದ ಅಮರನಾಥ್ ಕೂಡ ಔಟಾದರು. ಆ ವೇಳೆಗೆ ಭಾರತದ ಸ್ಕೋರ್ 3 ವಿಕೆಟ್‌ಗೆ 90 ರನ್ ಆಗಿತ್ತು. ಇಲ್ಲಿಂದ ಭಾರತ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಹೋಯಿತು. ಎರಡು ರನ್‌ಗಳ ನಂತರ ಯಶಪಾಲ್ ಶರ್ಮಾ 11 ರನ್‌ ಗಳಿಸಿ ಔಟಾದರು. ನಾಯಕ ಕಪಿಲ್ ದೇವ್ ಅವರ ಇನ್ನಿಂಗ್ಸ್ ಕೂಡ 15 ರನ್‌ಗೆ ಮುಕ್ತಾಯವಾಯಿತು. ಕೀರ್ತಿ ಆಜಾದ್​ ಖಾತೆ ತೆರೆಯಲಿಲ್ಲ. ರೋಜರ್ ಬಿನ್ನಿ ಕೇವಲ ಎರಡು ರನ್ ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಸಂದೀಪ್ ಪಾಟೀಲ್ (27) ಮದನ್ ಲಾಲ್ 17, ಸೈಯದ್ ಕಿರ್ಮಾನಿ 14 ಹಾಗೂ ಬಲ್ವಿಂದರ್ ಸಂಧು 11 ರನ್ ಗಳಿಸಿದ್ದರಿಂದ ತಂಡ 183 ರನ್​ ಪೇರಿಸಲು ಸಾಧ್ಯವಾಯಿತು. ವೆಸ್ಟ್ ಇಂಡೀಸ್ ಪರ ರಾಬರ್ಟ್ಸ್ ಮೂರು, ಮಾರ್ಷಲ್, ಹೋಲ್ಡಿಂಗ್, ಲ್ಯಾರಿ ಗೋಮ್ಸ್ ತಲಾ ಎರಡು ವಿಕೆಟ್ ಪಡೆದರು.

ವಿಂಡೀಸ್ ಕೋಟೆ ಛಿದ್ರ ಮಾಡಿದ ಭಾರತದ ಬೌಲರ್​ಗಳು

184 ರನ್‌ಗಳ ಗುರಿ ದೈತ್ಯ ಬ್ಯಾಟಿಂಗ್‌ ಹೊಂದಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಸಣ್ಣದಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳು ಹುಸಿಯಾಯಿತು. ಭಾರತ ತಂಡದ ಬೌಲರ್​ಗಳು ದಿಗ್ಗಜ ತಂಡದ ಬ್ಯಾಟಿಂಗ್ ವಿಭಾಗವನ್ನು ಇನ್ನಿಲ್ಲದಂತೆ ಕಾಡಿದರು. ತಂಡದ ಮೊತ್ತ 5 ಇರುವಾಗ ಗಾರ್ಡನ್ ಗ್ರೀನಿಡ್ಜ್ ಅವರನ್ನು ಬೌಲ್ಡ್ ಮಾಡುವ ಮೂಲಕ ಸಂಧು ಭಾರತಕ್ಕೆ ಮೊದಲ ಯಶಸ್ಸು ನೀಡಿದರು. ನಂತರ ಬ್ಯಾಟಿಂಗ್​ಗೆ ಬಂದ ವಿವಿಯನ್ ರಿಚರ್ಡ್ಸ್ ಬಿರುಸಿನ ಬ್ಯಾಟಿಂಗ್ ಆರಂಭಿಸಿದರು. ಇದೇ ವೇಳೆ ಮದನ್ ಲಾಲ್ ವಿಂಡೀಸ್ ತಂಡ​ 50 ರನ್ ಗಳಿಸಿದ್ದಾಗ ಡೆಸ್ಮಂಡ್ ಹೇನ್ಸ್ ಅವರನ್ನು ಔಟ್ ಮಾಡಿದರು.

ಅದ್ಭುತ ಕ್ಯಾಚ್‌ ಹಿಡಿದ ಕಪಿಲ್

ಬಳಿಕ ಕಪಿಲ್ ದೇವ್ ಹಿಡಿದ ಅದೊಂದು ಅದ್ಭುತ ಕ್ಯಾಚ್ ಪಂದ್ಯದ ದಿಕ್ಕು ಬದಲಾಯಿಸಿತು. ಮದನ್ ಲಾಲ್ ಬೌಲ್ ಮಾಡಿದ ಚೆಂಡನ್ನು ರಿಚರ್ಡ್ಸ್ ಡೀಪ್ ಸ್ಕ್ವೇರ್ ಲೆಗ್‌ ಕಡೆಗೆ ಬೀಸಿದರು. ಸ್ಕ್ವೇರ್ ಲೆಗ್‌ ವೃತ್ತದಲ್ಲಿ ನಿಂತಿದ್ದ ಕಪಿಲ್ ದೇವ್ ಹಿಮ್ಮುಖವಾಗಿ ಓಡಿ ಅದ್ಭುತ ಕ್ಯಾಚ್ ಪಡೆದರು. ಇಲ್ಲಿಂದ ಪಂದ್ಯ ಭಾರತದ ಪರ ವಾಲಲು ಆರಂಭಿಸಿತು. ಲ್ಯಾರಿ ಗೋಮ್ಸ್ ಐದು ರನ್ ಗಳಿಸುವ ಮೂಲಕ ಮದನ್ ಲಾಲ್​ಗೆ ಔಟಾದರು. ರೋಜರ್ ಬಿನ್ನಿ ಎಸೆತದಲ್ಲಿ ವಿಂಡೀಸ್ ನಾಯಕ ಕ್ಲೈವ್ ಲಾಯ್ಡ್ ಕಪಿಲ್ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಜೆಫ್ ಡುಜಾನ್ ಮತ್ತು ಮಾರ್ಷಲ್ ಅಂತಿಮವಾಗಿ ತಂಡವನ್ನು ಗೆಲುವಿನ ದಡ ಸೇರಿಸಲು ಹೋರಾಡಿದರೂ ಸಫಲರಾಗಲಿಲ್ಲ.

ಬಳಿಕ 25 ರನ್​ಗಳ ಇನ್ನಿಂಗ್ಸ್ ಆಡಿದ್ದ ಜೆಫ್ ಡಜನ್ ಅವರನ್ನು ಔಟ್ ಮಾಡುವಲ್ಲಿ ಅಮರನಾಥ್ ಯಶಸ್ವಿಯಾದರು. 18 ರನ್​ ಗಳಿಸಿದ್ದ ಮಾರ್ಷಲ್, ಅಮರನಾಥ್​ಗೆ ಔಟಾದರು. 52ನೇ ಓವರ್‌ನ ಕೊನೆಯ ಎಸೆತದಲ್ಲಿ ಅಮರನಾಥ್ ಅವರು ಹೋಲ್ಡಿಂಗ್ ಅವರನ್ನು ಬೌಲ್ಡ್ ಮಾಡುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು 140 ರನ್‌ಗಳಿಗೆ ಆಲೌಟ್ ಮಾಡಿ ಭಾರತ ವಿಜಯ ಪತಾಕೆ ಮೊಳಗಿಸಿತು. 7 ಓವರ್‌ಗಳಲ್ಲಿ 12 ರನ್‌ನೊಂದಿಗೆ ಪ್ರಮುಖ 3 ವಿಕೆಟ್‌ ಪಡೆದ ಅಮರನಾಥ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮದನ್‌ ಲಾಲ್‌ 31/3, ಬಲ್ವಿಂದರ್ ಸಂಧು 32/2 ವಿಕೆಟ್ ಪಡೆದು ಯಶಸ್ವಿ ಬೌಲರ್‌ಗಳೆನಿಸಿದರು.

1983ರ ವಿಶ್ವಕಪ್‌ನಲ್ಲಿ ಭಾರತ ತಂಡದ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಬಗ್ಗೆ ಹೇಳುವುದಾದರೆ, ಕರ್ನಾಟಕದ ರೋಜರ್ ಬಿನ್ನಿ ಟೂರ್ನಿಯಲ್ಲಿ ಒಟ್ಟು 18 ವಿಕೆಟ್​ಗಳನ್ನು ಪಡೆಯುವುದರೊಂದಿಗೆ ಅತೀ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದರು. ಭಾರತ ಪರ ನಾಯಕ ಕಪಿಲ್ ದೇವ್ ಅತಿ ಹೆಚ್ಚು ರನ್ ಗಳಿಸಿದ್ದರು. ಕಪಿಲ್ 8 ಪಂದ್ಯಗಳಲ್ಲಿ ಒಟ್ಟು 303 ರನ್ ಗಳಿಸಿದ್ದರು.

ಲತಾ ಮಂಗೇಶ್ಕರ್ ಕಾರ್ಯಕ್ರಮದಿಂದ ಆಟಗಾರರಿಗೆ ಹಣ

ಇಂದು ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಆದರೆ, 1983ರ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಹುಮಾನ ನೀಡಲು ಬಿಸಿಸಿಐ ಖಜಾನೆಯಲ್ಲಿ ಹಣವಿರಲಿಲ್ಲ. ಅಂತಹ ಸಂದರ್ಭದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರಿಂದ ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದರಿಂದ ಬಂದಿದ್ದ 20 ಲಕ್ಷ ಹಣ ಸಂಗ್ರಹಿಸಿ ತಂಡದ 11 ಸದಸ್ಯರಿಗೂ ತಲಾ 1 ಲಕ್ಷ ರೂಪಾಯಿ ನಗದು ಪ್ರಶಸ್ತಿ ನೀಡಲಾಗಿತ್ತು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X