ಸೇಡಂ ತಾಲೂಕು ವ್ಯಾಪ್ತಿಯಲ್ಲಿ ಇರುವ ವಿಕಾಟ ಸಾಗರ ಸಿಮೆಂಟ್ ಕಂಪೆನಿಗೆ ಜಮೀನು ನೀಡಿದ್ದ ಕುಟುಂಬಕ್ಕೆ ಉದ್ಯೋಗ ನೀಡದೆ ವಂಚಿಸುತ್ತಿರುವ ಕಂಪೆನಿಯ ಆಡಳಿತ ಮಂಡಳಿ ಧೋರಣೆ ಖಂಡಿಸಿ ಅನ್ಯಾಯಕ್ಕೊಳಗಾದ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಯತ್ನಸಿದ ಘಟನೆ ನಡೆದಿದೆ.
ʼಚಿಂಚೋಳಿ ತಾಲೂಕಿನ ಚಿತ್ರಸಾಲಿ ಗ್ರಾಮದ ಈರಪ್ಪ ಮಲ್ಲಪ್ಪ ಬೈಕೋರ್ ಎಂಬುವವರು ಕಂಪೆನಿಗೆ 8 ಎಕರೆ ಕೃಷಿ ಭೂಮಿ ನೀಡಿದ್ದರು. ಭೂಮಿ ನೀಡಿದ ಮಾಲೀಕರಿಗೆ ಪರಿಹಾರದ ಜೊತೆಗೆ ಕುಟುಂಬದ ಒಬ್ಬ ಸದಸ್ಯನಿಗೆ ಖಾಯಂ ನೌಕರಿ ಕೊಡಬೇಕೆಂದು ಕಂಪೆನಿಯೊಂದಿಗೆ ಒಪ್ಪಂದವಾಗಿತ್ತು. ಆದರೆ ಜಮೀನು ನೀಡಿದ್ದ ಮಾಲೀಕ ಈರಪ್ಪ ಅವರು ಮೃತಪಟ್ಟ ಹಿನ್ನೆಲೆ ಕಂಪೆನಿಯ ಆಡಳಿತ ಮಂಡಳಿಯವರ ಕುಟುಂಬದ ಯಾವುದೇ ಸದಸ್ಯರಿಗೆ ನೌಕರಿ ನೀಡದೆ ಅನ್ಯಾಯ ಎಸಗಿದ್ದಾರೆ ʼಎಂದು ಮೃತ ಈರಪ್ಪನವರ ಪತ್ನಿ ಲಕ್ಷ್ಮೀ ಬೈಕೋರ್ ಆರೋಪಿಸಿದ್ದಾರೆ.
ಈ ಕಂಪೆನಿಯು ಸೇಡಂ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಗಮನಕ್ಕೆ ತರಲಾಗಿತ್ತು. ಸಚಿವರು ಕಂಪೆನಿ ಆಡಳಿತ ಮಂಡಳಿಯೊಂದಿಗೆ ಮಾತನಾಡಿ, ‘ನಿಯಮಗಳ ಪ್ರಕಾರ ಕುಟುಂಬಕ್ಕೆ ಒಂದು ಉದ್ಯೋಗ ಕಡ್ಡಾಯವಾಗಿ ನೀಡಲೇಬೇಕಾಗುತ್ತದೆ’ ಎಂದು ತಿಳಿಸಿದರು. ಆದರೆ ಕಂಪೆನಿ ಆಡಳಿತ ಮಂಡಳಿ ಮುಖ್ಯಸ್ಥ ಕೊದಂಡರಾಮರೆಡ್ಡಿ ಅವರು ಸಚಿವರ ಮಾತಿಗೂ ಬೆಲೆ ಕೊಡದೆ ಕಂಪೆನಿಗೆ ಅಲೆದಾಡಿಸುತ್ತಿರವುದರಿಂದ ಬೇಸತ್ತು 22 ವರ್ಷ ವಯಸ್ಸಿನ ಮಗ, ಮಗಳೊಂದಿಗೆ ಕಂಪೆನಿ ಎದುರುಗಡೆ ಪ್ರತಿಭಟನೆ ನಡೆಸಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಚಿಂಚೋಳಿ ಪಿಎಸ್ಐ ಗಂಗಮ್ಮ ಅವರು ಪ್ರತಿಭಟನಾಕಾರರಿಂದ ಪೆಟ್ರೋಲ್ ಡಬ್ಬಿ ಕಸಿದುಕೊಂಡು ಅನಾಹುತ ತಪ್ಪಿಸಿದರು.
ಸಚಿವರ ತವರು ಕ್ಷೇತ್ರದಲ್ಲಿ ಬಡ ಕುಟುಂಬಕ್ಕೆ ಅನ್ಯಾಯವಾಗುತ್ತಿದ್ದು, ಕೃಷಿ ಭೂಮಿ ಕಳೆದುಕೊಂಡು ಉಪಜೀವನಕ್ಕಾಗಿ ಪರಿತಪ್ಪಿಸುತ್ತಿರುವ ಕುಟುಂಬಕ್ಕೆ ಜನಪ್ರತಿನಿಧಿಗಳು ನೆರವಿಗೆ ಬಾರದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ನಾರಾಯಣಪುರ ಎಡ-ಬಲದಂಡೆ ಕಾಲುವೆಗಳಿಗೆ ನೀರು ಹರಿಸಲು ರೈತರ ಬೃಹತ್ ಪ್ರತಿಭಟನೆ
ಮುಖಂಡರಾದ ಮಾರುತಿ ಗಂಜಗಿರಿ, ಗೋಪಾಲ ಗಾರಂಪಳ್ಳಿ, ದಸ್ತಪ್ಪ ಮರಪಳ್ಳಿ ಅವರು ಸ್ಥಳಕ್ಕೆ ತೆರಳಿ ಕುಟುಂಬಕ್ಕೆ ಬೆಂಬಲವಾಗಿ ನಿಂತು ನ್ಯಾಯಕ್ಕಾಗಿ ದನಿ ಎತ್ತಿದರು.
ವರದಿ: ವಾಲಿಂಟರ್ ವೆಂಕಟೇಶ