ಖದೀಮರು ನ್ಯಾಯಾಧೀಶರ ಮನೆಗೆ ನುಗ್ಗಿ, ಸುಮಾರು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಹಣ ಕದ್ದಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.
ಬೀದರ್‌ನಲ್ಲಿರುವ ನ್ಯಾಯಾಂಗ ವಸತಿ ಸಮುಚ್ಛಯದಲ್ಲಿ ಘಟನೆ ನಡೆದಿದೆ. ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಎರಡನೇ ಜೆಎಂಎಫ್ ಸಿ ಜಿಲ್ಲಾ ನ್ಯಾಯಾಧೀಶ ಎಂ.ಡಿ ಶಾಯಿಜ್ ಅವರ ಮನೆಯಲ್ಲಿ ಕಳ್ಳತನವಾಗಿದೆ ಎಂದು ವರದಿಯಾಗಿದೆ.
ರಂಜಾನ್ ಹಬ್ಬದ ಅಂಗವಾಗಿ ಮಾರ್ಚ್ 29ರಂದು ನ್ಯಾಯಾಧೀಶರು ತಮ್ಮ ಸ್ವಗ್ರಾಮ ಇರುವ ಕೊಪ್ಪಳ ಜಿಲ್ಲೆಗೆ ತೆರಳಿದ್ದರು. ಈ ವೇಳೆ, ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಕಳ್ಳರು ನ್ಯಾಯಾಧೀಶರ ಮನೆಯಲ್ಲಿ ದರೋಡೆ ಮಾಡಿದ್ದಾರೆ.
ನ್ಯಾಯಾಧೀಶರ ಮನೆಯ ಬಾಗಿಲು ಮುರಿದು ಹಾಕಿ, ಕಬೋಡ್‌ನಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಏಪ್ರಿಲ್ 1ರಂದು ಮನೆ ಕೆಲಸದ ಮಹಿಳೆ ಮನೆ ಆವರಣದಲ್ಲಿದ್ದ ಗಿಡಗಳಿಗೆ ನೀರು ಹಾಕಲು ಬಂದಾಗ ದರೋಡೆ ನಡೆದಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಮನೆಗೆ ನುಗ್ಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದೆ. ನ್ಯಾಯಾಧೀಶರು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳ್ಳರ ಪತ್ತೆಗೆ ಶೋಧ ನಡೆಯುತ್ತಿದೆ.