ಚಲಿಸುತ್ತಿದ್ದ ರೈಲಿನಲ್ಲಿ ಸಿಗರೇಟ್ ಸೇದುತ್ತಿದ್ದ ವ್ಯಕ್ತಿಯ ಮೇಲೆ ಪ್ರಯಾಣಿಕನೊಬ್ಬ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮೃತಸರ ಮತ್ತು ನಾಂದೇಡ್ ನಡುವೆ ಸಂಚರಿಸುವ ಸಚ್ಖಂಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಘಟನೆ ನಡೆದಿದೆ. ರೈಲಿನಲ್ಲಿ ಸಿಗರೇಟ್ ಸೇದುತ್ತಿದ್ದ ವ್ಯಕ್ತಿ ಮತ್ತು ಓರ್ವ ಪ್ರಯಾಣಿಕನ ನಡುವೆ ವಾಗ್ವಾದ ನಡೆದಿದೆ. ರೈಲು ಮಥುರಾ ಜಂಕ್ಷನ್ ನಿಲ್ದಾಣಕ್ಕೆ ಬಂದಾಗ ವಾಗ್ವಾದ ತೀವ್ರಗೊಂಡಿದೆ. ಧೂಮಪಾನ ಮಾಡುತ್ತಿದ್ದ ವ್ಯಕ್ತಿಗೆ ಪ್ರಯಾಣಿಕ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಸಿಒ ಸುದೇಶ್ ಗುಪ್ತಾ, “ಗಾಯಾಳವನ್ನು ಮಥುರಾದ ಉಪರ್ಕೋಟ್ ಗ್ರಾಮದ ನಿವಾಸಿ ಪವನ್ ಎಂದು ಹೆಸರಿಸಲಾಗಿದೆ. ಆರೋಪಿಯನ್ನು ನಾಂದೇಡ್‌ನ ಮೋಹನ್ ಸಿಂಗ್ ಎಂದು ಗುರುತಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಏಪ್ರಿಲ್ – ದಲಿತ ಇತಿಹಾಸವನ್ನು ಸಂಭ್ರಮಿಸುವ ತಿಂಗಳು
“ಪವನ್ ಧೋಲ್ಪುರದಿಂದ ಮಥುರಾಗೆ ಮತ್ತು ಆರೋಪಿ ಮೋಹನ್ ಸಿಂಗ್ ನಾಂದೇಡ್‌ನಿಂದ ಅಮೃತಸರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನೊಳಗೆ ಪವನ್ ಸಿಗರೇಟ್ ಸೇದುತ್ತಿದ್ದುದ್ದನ್ನು ಮೋಹನ್ ಸಿಂಗ್ ವಿರೋಧಿಸಿದ್ದಾರೆ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. ರೈಲು ಮಥುರಾ ಜಂಕ್ಷನ್‌ಗೆ ಬರುತ್ತಿದ್ದಂತೆಯೇ ಪವನ್ ಮೇಲೆ ಮೋಹನ್ ಸಿಂಗ್ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಪವನ್ ಕೈಗೆ ತೀವ್ರ ಗಾಯಗಳಾಗಿವೆ” ಎಂದು ವಿವರಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಥುರಾ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪೊಲೀಸರು ತನಿಖೆ ನಡೆಸುತ್ತಿದ್ದಾರೆ.