ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್, ಸಾಹಿತಿ ಕುಂ.ವೀರಭದ್ರಪ್ಪ ಮತ್ತು ಹಿಂದೂಸ್ತಾನಿ ಗಾಯಕ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರು ವಿಜಯನಗರದ ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ‘ನಾಡೋಜ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಈ ಕುರಿತು ಕನ್ನಡ ವಿಶ್ವವಿದ್ಯಾಲಯ ತನ್ನ 33ನೇ ಘಟಿಕೋತ್ಸವದ ಪ್ರಯುಕ್ತ ಕುಲಪತಿ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಾಡೋಜ ಗೌರವ ಪದವಿಗೆ ಆಯ್ಕೆಯಾದ ಮೂವರ ಹೆಸರನ್ನು ಪ್ರಕಟಿಸಿದರು. ನಂತರ ಮಾತನಾಡಿ, ವಿಶ್ವವಿದ್ಯಾಲಯದ 33ನೇ ನುಡಿಹಬ್ಬ ಶುಕ್ರವಾರ ಸಂಜೆ ವಿದ್ಯಾರಣ್ಯ ಕ್ಯಾಂಪಸ್‌ನ ‘ನವರಂಗ’ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನಾಡೋಜ ಪದವಿ ಪ್ರದಾನ ಮಾಡುವರು ಎಂದು ತಿಳಿಸಿದರು.
ಕೊಟ್ಟೂರಿನವರಾದ ಕುಂ.ವೀ. ಅವರಿಗೆ ಕಳೆದ ವರ್ಷವೇ ನಾಡೋಜ ಗೌರವ ನೀಡಲು ಶಿಫಾರಸು ಮಾಡಲಾಗಿತ್ತು. ಈ ವರ್ಷ ಅದಕ್ಕೆ ಸಮ್ಮತಿ ಸಿಕ್ಕಿದೆ. ಶಿವರಾಜ ಪಾಟೀಲ್ ರಾಯಚೂರು ಜಿಲ್ಲೆಯವರು ಹಾಗೂ ವೆಂಕಟೇಶ್ ಕುಮಾರ್ ಅವರು ಸಂಡೂರು ಮೂಲದವರು. ಮೂರು ವೈವಿಧ್ಯಮಯ ಕ್ಷೇತ್ರಗಳ ಸಾಧಕರನ್ನು ಗುರುತಿಸಿದ ಹೆಮ್ಮೆ ವಿಶ್ವವಿದ್ಯಾಲಯಕ್ಕೆ ಇದೆ. ಇದುವರೆಗೆ 98 ಮಂದಿ ನಾಡೋಜ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.
ಇದನ್ನೂ ಓದಿ: ವಿಜಯನಗರ | 27ನೇ ವಾರ್ಷಿಕ ವಿಚಾರ ಸಂಕಿರಣದ ಸರ್ವಾಧ್ಯಕ್ಷರಾಗಿ ಡಾ.ಡಿ ವಿ ಪರಮಶಿವಮೂರ್ತಿ ಆಯ್ಕೆ
ಪ್ರೊ.ರಾಜಾಸಾಬ್ ಎ.ಎಚ್. ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಬೆಂಗಳೂರಿನ ರಾಮಯ್ಯ ತಾಂತ್ರಿಕ ಸಂಸ್ಥೆ, ಮತ್ತಿಕೆರೆ ಇದರ ಮುಖ್ಯ ಸಂಶೋಧನಾ ಸಲಹೆಗಾರರು ಇವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.