ತಮ್ಮ ಆಪ್ತ ಸ್ನೇಹಿತ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧ್ಯಕ್ಷರಾದ ಬಳಿಕ ಅಮೆರಿಕಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ‘ಮಗ, ಮಿಗ, ಮೆಗ’ ಎಂದೆಲ್ಲ ಭಾಷಣ ಮಾಡಿದ್ದರು. ಸದ್ಯ, ಅಮೆರಿಕವನ್ನು ಮತ್ತೆ ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ (MAGA) ಮಾಡುತ್ತೇವೆ ಎನ್ನುತ್ತಿರುವ ಟ್ರಂಪ್, ತಮ್ಮ ಮಿತ್ರ ರಾಷ್ಟ್ರಗಳ ಮೇಲೆ ಸುಂಕದ ಪ್ರಹಾರ ನಡೆಸಿದ್ದಾರೆ. ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚು ಆಮದು ಸುಂಕ ವಿಧಿಸುವ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ‘ಪ್ರತಿ ಸುಂಕ’ ವಿಧಿಸಿದ್ದಾರೆ. ಇದೀಗ, ಅವರ ಬಹುನಿರೀಕ್ಷಿತ ‘ಸುಂಕ ನೀತಿ’ಯನ್ನು ಘೋಷಿಸಿದ್ದಾರೆ.
ಬುಧವಾರ, ಸುಂಕ ನೀತಿಯನ್ನು ಘೋಷಿಸಿರುವ ಟ್ರಂಪ್, ಭಾರತದ ಉತ್ಪನ್ನಗಳ ಮೇಲೆ 26% ಆಮದು ಸುಂಕ ವಿಧಿಸಿರುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ತಮ್ಮ ಸ್ನೇಹಿತ ಎಂದು ಹೇಳುತ್ತಲೇ, ಭಾರತದ ಮೇಲೆ ಹೆಚ್ಚು ಸುಂಕದ ಅಸ್ತ್ರ ಪ್ರಯೋಗಿಸಿದ್ದಾರೆ.
ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಟ್ರಂಪ್, ಸುಂಕದ ಪಟ್ಟಿಯನ್ನು ಪ್ರದರ್ಶಿಸಿದ್ದಾರೆ. “2025ರ ಏಪ್ರಿಲ್ 2ನ್ನು ಅಮೆರಿಕದ ಕೈಗಾರಿಕೆಗಳು ಮರುಹುಟ್ಟು ಪಡೆದ ದಿನ ಆಗಲಿದೆ. ಇದು ವಿಮೋಚನಾ ದಿನ, ಬಹುನರೀಕ್ಷಿತ ಕ್ಷಣ. ಅಮೆರಿಕವನ್ನು ಮತ್ತೆ ಸಮೃದ್ಧ ರಾಷ್ಟ್ರವನ್ನಾಗಿ ಮಾಡುವುದನ್ನು ಪ್ರಾರಂಭಿಸಿದ ದಿನ. ಭಾರತ ಮತ್ತು ಚೀನಾ ನಮಗೆ ಹೆಚ್ಚು ಸುಂಕ ವಿಧಿಸುತ್ತಿವೆ. ಆದರೂ, ಅವರಿಗೆ ನಾವು ಅವರು ವಿಧಿಸುವ ಸುಂಕದ ಅರ್ಧದಷ್ಟು ಸುಂಕ ವಿಧಿಸಿ, ದಯೆ ತೋರುತ್ತಿದ್ದೇವೆ” ಎಂದು ಹೇಳಿದ್ದಾರೆ.
LIBERATION DAY RECIPROCAL TARIFFS 🇺🇸 pic.twitter.com/ODckbUWKvO
— The White House (@WhiteHouse) April 2, 2025
“ಭಾರತ, ಚೀನಾ, ಬ್ರಿಟನ್, ಯೂರೋಪಿಯನ್ ಒಕ್ಕೂಟ ಸೇರಿದಂತೆ ವಿವಿಧ ದೇಶಗಳು ಅಮೆರಿಕಗೆ ಭಾರೀ ಸುಂಕ ವಿಧಿಸುತ್ತವೆ. ಅವುಗಳಿಗೆ ಪ್ರತಿಯಾಗಿ ನಾವು ಸುಂಕ ವಿಧಿಸುತ್ತೇವೆ. ನಮ್ಮ ಸುಂಕ ನೀತಿ ಬಹಳ ಸುಲಭ. ಅವರು ನಮಗೆ ಎಷ್ಟು ಸುಂಕ ವಿಧಿಸುತ್ತಾರೆಯೋ, ಅದದಲ್ಲಿ ಅರ್ಧದಷ್ಟು ಸುಂಕವನ್ನು ನಾವು ಅವರಿಗೆ ವಿಧಿಸುತ್ತೇವೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಪ್ರಧಾನಿ ಮೋದಿ ನಿವೃತ್ತರಾಗುತ್ತಾರೆಯೇ? RSS ಕೇಂದ್ರ ಕಚೇರಿ ಭೇಟಿಯ ಉದ್ದೇಶವೇನು?
“ಭಾರತವು ನಮಗೆ 52%ರಷ್ಟು ಸುಂಕ ವಿಧಿಸುತ್ತಿವೆ. ಆ ಸುಂಕಕ್ಕೆ ಪ್ರತಿಯಾಗಿ, ಭಾರತಕ್ಕೆ ಅಮೆರಿಕವು 26% ಸುಂಕ ವಿಧಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ನನ್ನ ಉತ್ತಮ ಸ್ನೇಹಿತ. ಅವರು ಇತ್ತೀಚೆಗೆ ಅಮೆರಿಕಕ್ಕೆ ಬಂದಿದ್ದರು. ಅವರಿಗೆ, ‘ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ವೆಂದು ತಿಳಿಸಿದ್ದೇನೆ. ಭಾರತವು ನಮಗೆ 52% ಸುಂಕ ವಿಧಿಸುತ್ತದೆ. ಆದರೆ, ಅವರು ಈವರೆಗೆ ಅವರಿಗೆ ಯಾವುದೇ ಸುಂಕ ವಿಧಿಸಿಲ್ಲ ಎಂಬುದನ್ನು ಮೋದಿ ಅರ್ಥ ಮಾಡಿಕೊಳ್ಳಬೇಕು” ಎಂದಿದ್ದಾರೆ.
“ಭಾರತವು ಅಮೆರಿಕದ ವಾಹನಗಳ ಮೇಲೆ 70% ಸುಂಕ ವಿಧಿಸುತ್ತದೆ. ಥಾಯ್ಲೆಂಡ್ ಮತ್ತು ಕೆಲವು ದೇಶಗಳು 60% ಸುಂಕ ವಿಧಿಸುತ್ತವೆ. ವಿಯೇಟ್ನಾಂ 75% ಸುಂಕ ವಿಧಿಸುತ್ತದೆ. ಇತರ ಕೆಲವು ದೇಶಗಳು ಇನ್ನೂ ಅಧಿಕ ಸುಂಕ ವಿಧಿಸುತ್ತವೆ. ಆದರೆ, ಅಮೆರಿಕವು ಕೇವಲ 2.4% ಸುಂಕ ವಿಧಿಸುತ್ತದೆ. ಇನ್ನು ಮುಂದೆ ಅಮೆರಿಕವು ಅಧಿಕ ಸುಂಕ ವಿಧಿಸಲಿದೆ” ಎಂದು ಹೇಳಿದ್ದಾರೆ.