“ಹಾಲು, ಮೊಸರು, ವಿದ್ಯುತ್, ಸಾರಿಗೆ ಇವುಗಳೆಲ್ಲವುದರ ಬೆಲೆ ಏರಿಕೆಯಾಗಿರುವುದನ್ನ ಖಂಡಿಸಿ ಸಿಪಿಐ(ಎಂ) ಪಕ್ಷದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಈ ಬೆಲೆ ಏರಿಕೆಗೆ ಪ್ರತ್ಯಕ್ಷವಾಗಿ ಕಾರಣವಾಗಿರುವುದು ಕೇಂದ್ರ ಸರ್ಕಾರ ಮತ್ತು ಪರೋಕ್ಷವಾಗಿ ಕಾರಣವಾಗಿರುವುದು ರಾಜ್ಯ ಸರ್ಕಾರ. ಈ ಎರಡು ಸರ್ಕಾರಗಳ ನಡೆಯನ್ನ ಖಂಡಿಸುತ್ತಿವೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಕೋಮುವಾದಿ ಬಣ್ಣ ಇಲ್ಲದೇ ಇರೋದನ್ನ ಬಿಟ್ಟರೇ, ಆರ್ಥಿಕ ನೀತಿಯಲ್ಲಿ ಕೇಂದ್ರ ಸರ್ಕಾರಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇದನ್ನು ತನ್ನ ನಡೆಯ ಮೂಲಕ ತೋರಿಸಿ ಕೊಟ್ಟಿದೆ” ಎಂದು ಚಿಂತಕಿ ಡಾ ಮೀನಾಕ್ಷಿ ಬಾಳಿ ಹೇಳಿದರು.
ಹಾಲು, ಮೊಸರು, ವಿದ್ಯುತ್ ದರ ಏರಿಕೆ, ಟೋಲ್, ಮೆಟ್ರೋ – ಸಾರ್ವಜನಿಕ ಸಾರಿಗೆ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಘನತ್ಯಾಜ್ಯ (ಕಸ) ಸಂಗ್ರಹ ಶುಲ್ಕ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಏಪ್ರಿಲ್ 3ರಂದು ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ) ಪ್ರತಿಭಟನೆ ನಡೆಸಿದೆ. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಅವರು, “ಕಳೆದ ಎರಡು – ಮೂರು ವರ್ಷಗಳಲ್ಲಿ ಹಾಲಿನ ದರವನ್ನ ಎರಡು ಮೂರು ಬಾರಿ ಹೆಚ್ಚಳ ಮಾಡಿದ್ದಾರೆ. ಇಲ್ಲಿಯವೆರೆಗೂ 7 ರೂಪಾಯಿ ಹೆಚ್ಚಳವಾಗಿದೆ. ವಿದ್ಯುತ್ ದರ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳವಾಗಿದೆ. ಕೇಂದ್ರದಿಂದ ಜಿಎಸ್‌ಟಿ ಹಣವನ್ನ ತರುವುದಕ್ಕೆ ತಾಕತ್ತು ಇಲ್ಲದ ರಾಜ್ಯ ಸರ್ಕಾರ ಇಲ್ಲಿನ ಬಡ, ದುಡಿಯುವ, ಜನಸಾಮಾನ್ಯ, ಮಧ್ಯಮ ವರ್ಗದವರ ಜನರ ಮೇಲೆ ಹೇರಿಕೆ ಹಾಕುತ್ತಿರುವುದು ಯಾವ ನ್ಯಾಯ” ಎಂದು ಪ್ರಶ್ನಿಸಿದರು.
“ಇನ್ನು ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಯಾವ ನೈತಿಕತೆ ಇಟ್ಟುಕೊಂಡು ಈ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಪ್ರತಿಭಟನೆಗೆ ಬಂದಿರುವ ಎಲ್ಲರಿಗೆ ಹಣ ಕೊಟ್ಟು, ಊಟ ಕೊಟ್ಟು, ತಿಂಡಿ ಕೊಟ್ಟು ಕರಿತಿದ್ದಾರೆ ಎಂಬುದು ಜಗ್ಗಜ್ಜಾಹೀರಾಗಿದೆ. ಹಿಂದು-ಮುಸ್ಲಿಂ ಜಗಳ, ಮೇಲುಜಾತಿ-ಕೆಳಜಾತಿ ಜಗಳ ಹಚ್ಚಿರುವ ಬಿಜೆಪಿ ಅತ್ಯಂತ ಕನಿಷ್ಠವಾದದ್ದು, ಅತ್ಯಂತ ಹೇಯವಾದ ಕೃತ್ಯವನ್ನ ಮಾಡಿದೆ. ಎಲ್ಲ ಕಡೆ ಬೆಲೆ ಹೆಚ್ಚಳ ಮಾಡುವುದಕ್ಕೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಕಾರಣ. ರಾಜ್ಯ ಸರ್ಕಾರಕ್ಕೆ ಕೊಡಬೇಕಾಗಿರುವ ಜಿಎಸ್‌ಟಿ ಪಾಲನ್ನು ಕೊಡುತ್ತಿಲ್ಲ. ಈ ರಾಜ್ಯ ಸರ್ಕಾರ ತನ್ನ ಜಿಎಸ್‌ಟಿ ಪಾಲನ್ನ ತರಬೇಕಿರುವ ಪ್ರಯತ್ನ ಮಾಡುವುದು ಬಿಟ್ಟು ಜನಸಾಮಾನ್ಯರ ಮೇಲೆ ಹೇರಿಕೆ ಹಾಕುತ್ತಿದೆ” ಎಂದರು.
“ರಾಜ್ಯ ಸರ್ಕಾರ ಇದೇ ಸೆಷನ್‌ನಲ್ಲಿ ತನ್ನ ಶಾಸಕರ ಸಂಬಳವನ್ನು ಎರಡು ಪಟ್ಟು ಹೆಚ್ಚಳ ಮಾಡಿಕೊಳ್ಳುತ್ತದೆ. ತಾವೂ ಪಡೆದುಕೊಳ್ಳುವ ಸಂಬಳವನ್ನು ಕಡಿಮೆ ಮಾಡಿದ್ದರೇ, ಹಣವನ್ನು ಉಳಿಸಬಹುದಿತ್ತು. ತಮ್ಮ ಪರ್ಸೆಂಟ್ ಕಡಿತ ಮಾಡಿದರೇ, ಭ್ರಷ್ಟಾಚಾರ ಕಡಿತ ಮಾಡಿದರೇ, ದೇಶದ ಖಜಾನೆ, ರಾಜ್ಯದ ಖಜಾನೆ ಖಾಲಿಯಾಗುವುದಿಲ್ಲ. ಜಸ್ಟ್ ಫ್ರೀಬಿನೇ ಎಲ್ಲದಕ್ಕೂ ಕಾರಣ ಎಂದು ನೆಪ ಹೇಳುತ್ತಿದ್ದಾರೆ. ಫ್ರೀಬಿಯಿಂದ ಸರ್ಕಾರ ನಡೆಸೋದಕ್ಕೆ ಆಗುತ್ತಿಲ್ಲ ಎಂದು ಹೇಳುತ್ತಾರೆ. ಗ್ಯಾರಂಟಿಗಳಿಗೆ ಎಷ್ಟು ಖರ್ಚು ಆಗುತ್ತೆ, ಭ್ರಷ್ಟಾಚಾರ ಎಷ್ಟು ಲಕ್ಷ ಕೋಟಿ ನಡೆಯುತ್ತಿದೆ. ಫ್ರೀ ಬೀ ಎನ್ನುವ ಶಬ್ದವೇ ಖಂಡನೀಯ. ಶ್ರಮಜೀವಿಗಳಿಗೆ ಕೊಡಬೇಕಾಗಿರುವ ಹಕ್ಕನ್ನ ಅವರಿಗೆ ನೇರವಾಗಿ ಸಂಬಳ ಹೆಚ್ಚಳ ಮಾಡಿದರೇ, ಅವರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಟ್ಟರೇ, ಶಾಲಾ ಶುಲ್ಕ ಕಡಿಮೆ ಮಾಡಿದರೆ, ಜನರ ಆರೋಗ್ಯವನ್ನ ಪೂರ್ತಿಯಾಗಿ ಕೊಡುವುದಕ್ಕೆ ಸಾಧ್ಯವಾದರೇ, ಯಾರಿಗೂ ಕೂಡ ಉಚಿತ ಕೊಡುಗೆಗೆಳು ಕೊಡಬೇಕಾದ ಅವಶ್ಯಕತೆ ಇಲ್ಲ. ಬಡಜನರನ್ನ ಬದನಾಮ ಮಾಡೋದಕ್ಕೆ ಈ ರೀತಿಯ ವಾದಗಳನ್ನ ಕೇಂದ್ರ ಬಿಜೆಪಿ ಸರ್ಕಾರ ಹರಿಬಿಡುತ್ತಿದೆ. ರಾಜ್ಯ ಮತ್ತು ಬಿಜೆಪಿ ಏರಿಸಿರುವ ಬೆಲೆಯನ್ನ ಖಂಡಿಸುತ್ತೇವೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಸಾಹಿತಿ ಡಾ. ಪಿ.ವಿ ನಾರಾಯಣ ಇನ್ನಿಲ್ಲ
“ಕೋವಿಡ್ ಸಮಯದಲ್ಲಿ ಜನರು ಆರ್ಥಿಕ ಸಂಕಷ್ಟದಲ್ಲಿದ್ದರು. ಜನರ ಕಷ್ಟಗಳಿಗೆ ದನಿಯಾಗಿದ್ದ ರಾಜ್ಯ ಸರ್ಕಾರ ಐದು ಗ್ಯಾರೆಂಟಿ ಕೊಟ್ಟಿತ್ತು. ಜನರಿಗೆ ಇದರಿಂದ ಆರ್ಥಿಕ ಸಹಕಾರ ನೀಡಿತ್ತು. ಗ್ಯಾರೆಂಟಿಗಳಿಂದ ಜನರು ಕೂಡ ಸ್ವಲ್ಪ ನಿಟ್ಟಿಸುರು ಬಿಟ್ಟಿದ್ದರು. ಆದರೆ, ಈಗ ಮೇಲಿನಿಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದನ್ನ ಸಿಪಿಐಎಂ ಪಕ್ಷ ಖಂಡಿಸುತ್ತದೆ. ಮೆಟ್ರೋ ದರ ಏರಿಕೆ ಮಾಡಿ ಮೆಟ್ರೋವನ್ನು ಸಾಮಾನ್ಯ ಜನರು ಹತ್ತದೇ ಇರುವ ರೀತಿ ಮಾಡಿದರು. ಇದನ್ನ ಕೇಳುವಾಗಲೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮೇಲೆ ಹೊಣೆ ಮಾಡುವುದು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಹೊಣೆ ಮಾಡುವುದು ಮಾಡಿತ್ತು. ಸಾಮಾನ್ಯ ಜನರನ್ನ ಸಂಕಷ್ಟಕ್ಕೆ ದಬ್ಬಿದ್ದರು. ಅದರ ಜತೆಗೆ ಬಸ್, ಹಾಲು, ನೀರು, ಮೆಟ್ರೋ ಎಲ್ಲವೂ ಕೂಡ ಸಾಮಾನ್ಯ ಜನರು ಬಳಸುವ ಪದಾರ್ಥಗಳ ದರ ಏರಿಕೆ ಮಾಡಿದ್ದಾರೆ. ಕಾರ್ಮಿಕ ಸಂಘಟನೆಗಳು ಕನಿಷ್ಠ ಸಂಬಳ ಜಾಸ್ತಿ ಮಾಡಿ ಎಂದು ಕೇಳಿದರೂ ಕೂಡ ಸಂಬಳ ಏರಿಕೆ ಮಾಡಲಿಲ್ಲ. ಸಂಬಳ ಏರಿಕೆ ಮಾಡಲು ಇವರಿಗೆ ಯೋಗ್ಯತೆ ಇಲ್ಲ. ಆದರೆ, ಅಗತ್ಯ ವಸ್ತುಗಳ ದರ ಏರಿಕೆ ಮಾಡುತ್ತಾರೆ. ಶಾಸಕರ ಭತ್ಯೆ ಜಾಸ್ತಿ ಮಾಡುತ್ತಾರೆ. ಆದರೆ, ಆಶಾ ಕಾರ್ಯಕರ್ತೆಯರು, ಬೀದಿ ವ್ಯಾಪಾರಿಗಳು ಸಂಬಳ ಕೇಳಿದಾಗ ಹೆಚ್ಚಳ ಮಾಡುವ ಯೋಗ್ಯತೆ ಇಲ್ಲ. ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಡಿಮೆ ಮಾಡಲೇಬೇಕು” ಎಂದು ಹೇಳಿದರು.
“ಬೆಲೆ ಏರಿಕೆ ಜಾಸ್ತಿಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಇದು ದೊಡ್ಡ ದೊಡ್ಡ ಬಂಡವಾಳಶಾಹಿಗಳಿಗೆ ತೊಂದರೆ ಆಗುತ್ತಿಲ್ಲ. ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಮೆಟ್ರೋ ದರವನ್ನು ಕೂಡ ಇಳಿಕೆ ಮಾಡಲಿಲ್ಲ. ಉದ್ಯೋಗ ಸೃಷ್ಟಿ ಇಲ್ಲ. ಬರೀ ಬೆಲೆ ಏರಿಕೆ ವಿಚಾರವಾಗಿ ಮಾತಾಡುತ್ತಾರೆ. ಸಿಪಿಐಎಂ ಪಕ್ಷ ಇದನ್ನು ಖಂಡಿಸುತ್ತದೆ. ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಬೇಕು. ಕನಿಷ್ಠ ಕೂಲಿ ಬೆಂಬಲವನ್ನು ಕೊಡಬೇಕು” ಎಂದು ಸಿಪಿಐಎಂ ನಂಜೇಗೌಡ ಹೇಳಿದರು.
“ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಸಾಮಾನ್ಯ ಜನರ ಜೀವನ ಕಷ್ಟಕರವಾಗಿದೆ. ಇಂಧನ ಬೆಲೆ ಏರಿಕೆ, ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತು ಇತರ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರು ತತ್ತರಿಸಿದ್ದಾರೆ” ಎಂದರು.