ಶರಣರನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿ ನೋಡಬಾರದು ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.
ಏ.2ರಂದು ನಗರದ ಆಲೂರು ವೆಂಕಟರಾವ್ ಸಾಂಸ್ಕಂತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿದ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ವಚನಕಾರ ದೇವರ ದಾಸಿಮಯ್ಯನವರ ವಚನಗಳು ಪ್ರತಿಯೊಬ್ಬರ ಮನೆಮನೆಗೂ ಮುಟ್ಟುವ ವ್ಯವಸ್ಥೆ ಆಗಬೇಕು. ಶರಣರನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿ ನೋಡಬಾರದು ಎಂದರು.
ಧಾರವಾಡ ಜಿಲ್ಲಾ ದೇವಾಂಗ ಸಂಘ ಅಧ್ಯಕ್ಷ ಡಾ. ಕೆ.ಜಿ. ಬ್ಯಾಕೋಡಿ ಮಾತನಾಡಿ, 10ನೇ ಶತಮಾನದಲ್ಲಿ ಆದ್ಯ ವಚನಕಾರ ದೇವರ ದಾಸಿಮಯ್ಯನವರ ನಂತರ ಸಾಕಷ್ಟು ಶರಣರು ಬರುತ್ತಾರೆ. ಬಸವಣ್ಣನವರು ವಚನಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ. ಆದರೆ ದಾಸಿಮಯ್ಯನವರ ವಚನಗಳು ತಿಳಿಯಬೇಕಾದರೆ; ಕನ್ನಡ, ಹಳಗನ್ನಡದ ಬಗ್ಗೆ ಜ್ಞಾನವಿರಬೇಕಾಗುತ್ತದೆ.
ಜಗದೀಶ ಜವಳಿ ಮಾತನಾಡಿ, ದಾಸಿಮಯ್ಯನವರ ಆಧುನಿಕತೆ ಮತ್ತು ಪ್ರಭಾವವು ನಮ್ಮ ಇಂದಿನ ಸಮಾಜದಲ್ಲೂ ಪ್ರಸ್ತುತವಾಗಿವೆ. ಜಾತಿ-ಮತ ಭೇದ, ಅಸಹಿಷ್ಣುತೆ, ಮತ್ತು ಅಸಮಾನತೆಯನ್ನು ನಿವಾರಿಸಲು ಅವರ ಸಂದೇಶಗಳು ನಮಗೆ ಪಾಠವಾಗಬೇಕು. ಶ್ರಮ ಮತ್ತು ಪ್ರಾಮಾಣಿಕತೆಯಿಂದ ಬದುಕಿದರೆ ದೇವರ ಅನುಗ್ರಹ ದೊರೆಯುತ್ತದೆ ಎಂಬ ಅವರ ತತ್ವ ಸದಾ ಪ್ರೇರಣಾದಾಯಕವಾಗಿದೆ ಎಂದರು.
ರಾಣೆಬೆನ್ನೂರ ನಿವೃತ್ತ ಪ್ರೌಢಶಾಲಾ ಶಿಕ್ಷಕ ಎಸ್.ಕೆ.ದುರ್ಗದಸೀಮಿ ದೇವರ ದಾಸಿಮಯ್ಯ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಇಂಜಿನಗೇರಿ ಕಾರ್ಯಕ್ರಮ ನಿರೂಪಿಸಿದರು. ರವಿ ಡೊಳ್ಳಿ ವಂದಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಅಜಿತ್ ದೇಸಾಯಿ, ಧಾರವಾಡ ದೇವಾಂಗ ಸಂಘ ಅಧ್ಯಕ್ಷ ವಿನೋದ ಹುಲಿಮನಿ, ಬೆಂಗಳೂರು ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಪಾಟೀಲ, ಧಾರವಾಡ ದೇವಾಂಗ ನೇಕಾರ ಅಭಿವೃದ್ದಿ ಸಂಘದ ಅಧ್ಯಕ್ಷ ರವಿ ಲೋಲೆ, ಬನಶಂಕರಿ ದೇವಾಂಗ ಸಂಘದ ಅಧ್ಯಕ್ಷ ಬಸವರಾಜ ಕೊಂಗಿ, ಬಸವರಾಜ ಕುಸುಬಿ, ಸಮಾಜದ ಮುಖಂಡ ರಾಮು ತಾರೆನ್ನವರ ಮತ್ತು ಉಪ್ಪಿನ ಬೆಟಗೇರಿ ಸಮಾಜದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.