ಧರ್ಮ ಶಾಲಾ ಕಟ್ಟಡ ತೆರವುಗೊಳಿಸಿ ಅತಿಕ್ರಮಣ ಮಾಡಿರುವವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಎಂ ವಿರೂಪಾಕ್ಷಿ ಒತ್ತಾಯಿಸಿದರು.
ರಾಯಚೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಡಾ. ಬಾಬು ಜಗಜೀವನ್ ರಾಮ್ ಪುತ್ಥಳಿ ಪಕ್ಕದಲ್ಲಿರುವ 2 ಎಕರೆ 16 ಗುಂಟೆ ಸರ್ಕಾರಿ ಭೂಮಿಯಲ್ಲಿ ಪುರಾತನ ಧರ್ಮಶಾಲಾ ಕಟ್ಟಡ ಇದೆ. ಈ ಸರ್ಕಾರಿ ಭೂಮಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ ಭವನ ನಿರ್ಮಿಸಿ ಜಿಲ್ಲೆಯ ದಲಿತ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್, ಪಿಎಸ್‌ಐ ಸೇರಿದಂತೆ ಇತರ ಕೋರ್ಸ್‌ಗಳಿಗೆ ತರಬೇತಿ ಕೇಂದ್ರ ಪ್ರಾರಂಭ ಮಾಡುವ ಆಲೋಚನೆ ಇತ್ತು” ಎಂದು ತಿಳಿಸಿದರು.
“ನಗರದಲ್ಲಿ ಹಲವು ಸರ್ಕಾರಿ ಭೂಮಿಗಳಿಗೆ ನಕಲಿ ದಾಖಲೆ ಸೃಷ್ಠಿಸಿ, ಮೊದಲು ಬೇರೆಯವರ ಹೆಸರಿಗೆ ಮಾಡಿಸಿ, ಕೆಲವು ದಿನಗಳ ನಂತರ ತಮ್ಮ ಹೆಸರಿಗೆ ಮಾಡಿಸಿಕೊಂಡು, ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್ ವಾಣಿಜ್ಯ ಮಳಿಗೆಗಳನ್ನು ಕಟ್ಟಿ ಮಾರಾಟ ಮಾಡುವ ದಂಧೆಯಲ್ಲಿ ಕೆಲವರ ಕೈವಾಡವಿದೆ” ಎಂದು ಆರೋಪಿಸಿದರು.
“ಸುನಿಲ್ ಅಗರವಾಲ್ ಎಂಬುವರು ಕಳೆದ 23 ದಿನಗಳಿಂದ ಡಾ. ಬಾಬು ಜಗಜೀವನ್ ರಾಮ್ ಅವರ ಪುತ್ಥಳಿ ಕಾಣದಂತೆ ಮುಚ್ಚಿ, ಒಳಗೆ ಇರುವ ಧರ್ಮಶಾಲಾ ಕಟ್ಟಡವನ್ನು ಜೆಸಿಬಿ ಯಂತ್ರಗಳಿಂದ ಧ್ವಂಸ ಮಾಡಿ ಅತಿಕ್ರಮಣ ಮಾಡುತ್ತಿದ್ದಾನೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನೀರಿನ ಘಟಕಗಳ ಕಾಮಗಾರಿ ಹಣ ದುರ್ಬಳಕೆ; ಅಧಿಕಾರಿಗಳ ಅಮಾನತು
“ಈ ಜಾಗ ಸಂಪೂರ್ಣ ಸರ್ಕಾರಿ ಭೂಮಿಯಾಗಿದ್ದು, ಕೂಡಲೇ ಅತಿಕ್ರಮಣ ನಿಲ್ಲಿಸಿ, ಅತಿಕ್ರಮಣದಾರ ಸುನೀಲ್ ಅಗರವಾಲ್ ಮತ್ತು ಅವನ ಪಾಲುದಾರನ್ನು ಬಂಧಿಸಿ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ದಲಿತ ಸಂಘಟನೆಗಳು ಬೀದಿಗೆ ಇಳಿದು ತಮಟೆ ಪ್ರತಿಭಟನೆ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಂಚಾಲ ಭೀಮಣ್ಣ, ನರಸಪ್ಪ ಅಶಾಪೂರು, ಶಂಕ್ರಪ್ಪ ತಲಮಾರಿ ಹಾಗೂ ಇತರರು ಇದ್ದರು.