ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತು ದೆಹಲಿಯಲ್ಲಿ ಕರ್ನಾಟಕದ ಸಂಸದರನ್ನು ಭೇಟಿ ಮಾಡಲಾಗಿದ್ದು, ಕರ್ನಾಟಕದ ಯಾವ ಸಂಸದರಲ್ಲಿಯೂ ರಾಯಚೂರಿಗೆ ಏಮ್ಸ್ ಮಂಜೂರಾಗುವಲ್ಲಿ ಅಸಮಧಾನವಿಲ್ಲ. ಎಲ್ಲಾ ಸಂಸದರಿಂದಲೂ ಸಕರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು.
ಅವರಿಂದು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಯಾಗಬೇಕೆಂದು ನಡೆಯುತ್ತಿರುವ ಸುದೀರ್ಘ ಹೋರಾಟದ ಭಾಗವಾಗಿ ಇತ್ತೀಚೆಗೆ ಹೋರಾಟ ಸಮಿತಿಯ 11 ಜನರು ದೆಹಲಿಗೆ ನಿಯೋಗ ತೆರಳಿದ್ದು, ದೆಹಲಿಯಲ್ಲಿ 28 ಜನ ಕರ್ನಾಟಕದ ಲೋಕಸಭಾ ಸದಸ್ಯರು ಹಾಗೂ 14 ಜನ ರಾಜ್ಯಸಭಾ ಸದಸ್ಯರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಬಹುತೇಕ ಎಲ್ಲಾ ಸಂಸದರನ್ನು ಭೇಟಿ ಮಾಡಲಾಗಿದ್ದು, ಎಲ್ಲಾ ಸಂಸದರೂ ಕೂಡ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿರುವುದು ಆಶಾಭಾವನೆಯನ್ನು” ಮೂಡಿಸಿದೆ ಎಂದರು.
“ಈ ಕುರಿತು ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿಯವರು ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸಲು ಪ್ರಯತ್ನಿಸುವೆ ಎಂದ ಮರುದಿನವೇ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದಿರುವುದು ಸಂತಸದ ವಿಚಾರವಾಗಿದೆ. ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರನ್ನೂ ಭೇಟಿ ಮಾಡಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಮನವಿ ಮಾಡುತ್ತೇನೆ” ಎಂದು ಬೊಮ್ಮಾಯಿಯವರು ಹೇಳಿದ್ದಾರೆ ಎಂದರು.
ಇದನ್ನೂ ಓದಿ: ರಾಯಚೂರು | ಮೊಲ ಬೇಟೆ ಪ್ರಕರಣ; ಶಾಸಕನ ಪುತ್ರ, ಸಹೋದರನ ವಿರುದ್ಧ ದೂರು ದಾಖಲು
ಈ ವೇಳೆ ಏಮ್ಸ್ ಹೋರಾಟ ಸಮಿತಿಯ ಪ್ರಮುಖ ಅಶೋಕ ಕುಮಾರ ಜೈನ್, ಬೆಂಜಮನ್ ಥಾಮಸ್, ವಿನಯಕುಮಾರ ಚಿತ್ರಗಾರ, ಎಂ.ಆರ್ ಭೇರಿ, ಸಂತೋಷ ಕುಮಾರ ಮಿರ್ಜಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.