ನಾರಾಯಣಪುರ ಬಲದಂಡೆ ಕಾಲುವೆಗೆ ಏಪ್ರಿಲ್ 15 ರವರಗೆ ನೀರು ಹರಿಸಲು ಸರಕಾರ ಮುಂದಾಗಬೇಕೆಂದು ಒತ್ತಾಯಿಸಿ ಗಬ್ಬೂರು ಪಟ್ಟಣದಿಂದ ರಾಯಚೂರು ಜಿಲ್ಲಾ ಕೇಂದ್ರದವರಗೆ ನಡೆದ ಎರಡನೇ ದಿನದ ಪಾದಯಾತ್ರೆಯಲ್ಲಿ ನೂರಾರು ರೈತರು ಭಾಗವಹಿಸಿ ಪ್ರತಿಭಟಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ, “ಮಾ.14 ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಏ.1ರಿಂದ 6 ರವರೆಗೆ ನೀರು ಹರಿಸುವುದಾಗಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ ಅಧಿಕಾರಿಗಳೇ ಸೇರಿಕೊಂಡು ಶಾಸಕರ ಗಮನಕ್ಕೆ ತರದೇ ಒಂದೆರಡು ದಿನ ನೀರು ಹರಿಸಿ ಏಕಾಏಕಿ ಬಂದ್ ಮಾಡಿದ್ದಾರೆ. ನೀರು ಹರಿಸದೇ ಇದ್ದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕೂಡಲೇ ನಿರ್ಧಾರ ಬದಲಿಸಿ ಕಾಲುವೆಗೆ ನೀರು ಹರಿಸಬೇಕು” ಎಂದು ಆಗ್ರಹಿಸಿದರು.
“ದೇವೇಗೌಡರು ಈ ಭಾಗದ ರೈತರಿಗೆ ಅನುಕೂಲವಾಗಲೆಂದು ನೀರಾವರಿ ಯೋಜನೆಯನ್ನು ಜಾರಿಗೊಳಿಸಿದ್ದರು. ಇದೀಗ ಅದೆ ನೀರಾವರಿ ಯೋಜನೆಯ ಅಧಿಕಾರಿಗಳು ನೀರು ಕೊಟ್ಟರೆ ಸಾಕಾಗಿದೆ. ಕಡ್ಡಾಯವಾಗಿ ನಾಲೆಗೆ ನೀರು ಹರಿಸುವಂತೆ 30 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಯಾವ ಅಧಿಕಾರಿಯೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿಲ್ಲ. ಇವರ ನಿರ್ಲಕ್ಷಕ್ಕೆ ಸಮಸ್ಯೆ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಲಾಕಪ್ ಡೆತ್ ಪ್ರಕರಣ; ಸಿಪಿಐ, ಪಿಎಸ್ಐ ಅಮಾನತು
ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ಪಾಟೀಲ್ ಅತ್ತನೂರು, ಎನ್.ಶಿವಶಂಕರ, ಸಣ್ಣ ನರಸಿಂಹ ನಾಯಕ, ಗಾಣದಾಳ, ರಾಮಕೃಷ್ಣ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.
