ಕೋಟೆನಾಡು ಚಿತ್ರದುರ್ಗಕ್ಕೆ ಯುಗಾದಿ ಹೊಸ ವರ್ಷಾರಂಭದಲ್ಲಿ ಮಳೆ ಸುರಿದಿದ್ದು, ಬಿಸಿಲಿಗೆ ಬಳಲಿದ್ದ ರೈತರು, ಸಾರ್ವಜನಿಕರಲ್ಲಿ ತುಸು ಸಮಾಧಾನ ತಂದಿದ್ದು, ಹವಾಮಾನ ಬದಲಾವಣೆ ಹರ್ಷ ತಂದಿದೆ. ಯುಗಾದಿ ಹಬ್ಬದ ನಂತರ ಚಿತ್ರದುರ್ಗ ನಗರದಲ್ಲಿ, ಜಿಲ್ಲೆಯ ಹಲವೆಡೆ ಸುರಿದಿರುವ ಮಳೆ ಇಳೆಯನ್ನು ತಂಪಾಗಿಸಿದೆ.
ಚಿತ್ರದುರ್ಗ ನಗರದ ಹಲವೆಡೆ ಅಪರಾಹ್ನ 2 ಗಂಟೆ ಹೊತ್ತಿಗೆ ಶುರುವಾದ ಮಳೆ ಮೂರು ಗಂಟೆವರೆಗೂ ಬಿಡದೇ ಸುರಿದಿದೆ. ಮಳೆಯ ಸೂಚನೆ ಇಲ್ಲದೆ ದಿನನಿತ್ಯದಂತೆ ರಸ್ತೆಯಲ್ಲಿ ಓಡಾಡುತ್ತಿದ್ದವರು ಮಳೆ ಆರಂಭವಾಗುತ್ತಿದ್ದಂತೆ ಸುರಕ್ಷತೆಯ ಸ್ಥಳ ಸೇರಿದರೆ, ಕೆಲವರು ಹಾಗೂ ಕೆಲ ವಾಹನ ಸವಾರರು ಅನಿರೀಕ್ಷಿತ ಮಳೆಯಲ್ಲಿ ನೆನೆದುಕೊಂಡು ಮುಂದೆ ಸಾಗಿದರು.
ಇಂದು ಸುರಿದಿರುವ ಮಳೆಗೆ ಬೇಸಿಗೆಯ ಬಿಸಿಲಿಗೆ ಕಾದು ಹೆಂಚಂತಾಗಿದ್ದ ಭೂಮಿ ತಂಪಾಗಿದೆ. ಚಿತ್ರದುರ್ಗದ ಕೋಟೆ ಕೊತ್ತಲಗಳು, ಮರ, ಗಿಡಗಳು ತೊಳೆದು ಸ್ವಚ್ಛಗೊಳಿಸಿದಂತಾಗಿವೆ. ಹದವಾದ ಮಳೆಯಾಗಿರುವುದರಿಂದ ಹವಾಮಾನ ಬದಲಾವಣೆಯ ಮುನ್ಸೂಚನೆ ರೈತರಿಗೆ ಸಿಕ್ಕಿದಂತಾಗಿದ್ದು, ಮುಂಗಾರಿಗೆ ಮೊದಲೇ ಬಿತ್ತನೆಗೆ ಭೂಮಿ ಹದಮಾಡಿ ಅಣಿಗೊಳಿಸುವ ರೈತರ ಕೆಲಸ ಗರಿಗೆದಲಿದೆ. ನೀರಾವರಿ ಆಶ್ರಿತ ಬೇಸಿಗೆ ಬೆಳೆಗಳಿಗೆ, ತೋಟಗಳಿಗೆ ಮಳೆಯ ಸಿಂಚನವಾಗಿರುವುದು ನೀರಿನ ಬವಣೆ ನೀಗಿಸಲು ವರದಾನವಾಗಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಡಿಕೆ, ತೆಂಗು, ಹನಿ ನೀರಾವರಿ ಉಪಕರಣಗಳು ಬೆಂಕಿಗಾಹುತಿ, ರೈತ ಕಂಗಾಲು.
ಕಳೆದೆರಡು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಮಳೆ ಮೋಡವಾಗುತ್ತಿತ್ತು. ಕೆಲವೆಡೆ ಮಳೆ ಹನಿಗಳು ಉದುರಿದ್ದು ಬಿಟ್ಟರೆ, ಉತ್ತಮ ಮಳೆಯ ನಿರೀಕ್ಷೆ ಎಲ್ಲರಲ್ಲಿತ್ತು. ಅದರಂತೆ ಬುಧವಾರ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿತ್ತು.
ಬಿ.ಜಿ.ಕೆರೆ ಗ್ರಾಮ ಸೇರಿದಂತೆ ಮೊಳಕಾಲ್ಮುರು, ಹಾನಗಲ್, ರಾಯಪುರ, ರಾಂಪುರ, ದೇವಸಮುದ್ರ ಗ್ರಾಮಗಳ ಸುತ್ತ ಮುತ್ತಲಿನ ಪರಿಸರದಲ್ಲಿ ಉತ್ತಮ ಮಳೆ ಸುರಿದಿದೆ.