- ‘ಬಿಜೆಪಿ ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸ ನಾನು ಮಾಡಿಲ್ಲ’
- ‘ಸೌಹಾರ್ದಯುತವಾಗಿ ಮನೆಗೆ ಬರುವವರನ್ನು ಬೇಡವೆನ್ನಲು ಆಗಲ್ಲ’
“ರಾಜಕಾರಣದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಸೌಹಾರ್ದಯುತವಾಗಿ ಮನೆಗೆ ಬರುವವರನ್ನು ಬೇಡವೆನ್ನಲು ಆಗಲ್ಲ. ಮನೆಗೆ ಹೋಗದೆ ಕೆಲವರು ರಾಜಿ ಮಾಡಿಕೊಂಡಿದ್ದಾರೆ. ಆ ವಿಷಯ ನಾನಿಲ್ಲಿ ಮಾತನಾಡಲ್ಲ. ಬಿಜೆಪಿ ನನಗೆ ತಾಯಿ ಸಮಾನ, ಕಾರ್ಯಕರ್ತರು ಅಣ್ಣತಮ್ಮಂದಿರ ಸಮಾನ. ಬಿಜೆಪಿ ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸವನ್ನು ಮಾಡಿಲ್ಲ” ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಭಾನುವಾರ ಬೆಳಗಾವಿ ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, “ವಿಧಾನಸಭೆ ಚುನಾವಣೆ ಸೋಲಿಗೆ ನಾನೇ ಹೊಣೆ ಹೊರುವೆ. ಪ್ರಾಮಾಣಿಕ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. 5,000 ಕೋಟಿ ರೂಪಾಯಿ ಅನುದಾನದವನ್ನು ಉತ್ತರ ಕರ್ನಾಟಕ ನೀರಾವರಿಗೆ ಕೊಟ್ಟಿದ್ದೇನೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಘೋಷಣೆ ಮಾಡಿದ್ದೇನೆ. ನಮ್ಮ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿಸುವುದರಲ್ಲಿ ನಾವು ವಿಫಲ ಆಗಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯಲ್ಲಿ ದಲಿತರು ರಾಜ್ಯ ಘಟಕದ ಅಧ್ಯಕ್ಷ ಆಗಬಾರದೇ: ಸಂಸದ ರಮೇಶ್ ಜಿಗಜಿಣಗಿ ಪ್ರಶ್ನೆ
“ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆಸಿದ ಸಭೆಯಲ್ಲಿ ವಿಪಕ್ಷಗಳ ನಾಯಕರು ದೇಶ ಉದ್ಧಾರ ಮಾಡುವ ಬಗ್ಗೆ ಚರ್ಚೆ ನಡೆಸಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮೋದಿ ಸೋಲಲ್ಲ, ರಾಹುಲ್ ಗಾಂಧಿಗೆ ಮದುವೆ ಆಗಲ್ಲ” ಎಂದು ಲೇವಡಿ ಮಾಡಿದರು.
“ಲೋಕಸಭೆ, ವಿಧಾನಸಭೆಯೇ ಬೇರೆ ಬೇರೆ ಆಗಿದೆ. ಮಗದೊಮ್ಮೆ ಮೋದಿ ಅವರನ್ನ ಪ್ರಧಾನಿ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು. ನರೇಂದ್ರ ಮೋದಿ ಅವರು ಸ್ವಚ್ಛ, ದಕ್ಷ ಆಡಳಿತ ನೀಡಿದ್ದಾರೆ. ದೇಶದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಗೆ ನೀರನ್ನು ಕೊಡುವ ಬಗ್ಗೆ ಪ್ರಧಾನಿ ಹೇಳಿದ್ದರು. ಅದರಂತೆ 40 ಲಕ್ಷ ಮನೆಗಳಿಗೆ ರಾಜ್ಯದಲ್ಲಿ ನೀರು ಕೊಡಲಾಗಿದೆ” ಎಂದರು.