ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ತುಳಿತಕ್ಕೆ ಒಳಗಾಗಿರುವ ಬಡ, ದುರ್ಬಲ ಜನರಿಗೆ ವರದಾನವಾಗಿದೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಪ್ರತಿಪಾದಿಸಿದರು.
ರಾಜ್ಯಸಭೆಯಲ್ಲಿ ಗುರುವಾರ ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಅವರು, “ದೇಶದಲ್ಲಿರುವ ವಕ್ಫ್ ಬೋರ್ಡ್ ಗಳ ಆಸ್ತಿ ಸುಮಾರು ₹1.2 ಲಕ್ಷ ಕೋಟಿ ಬೆಲೆ ಬಾಳುತ್ತದೆ. ಇಂತಹ ಬೆಲೆ ಬಾಳುವ ಆಸ್ತಿಯನ್ನು ದಾನಿಗಳು ನೀಡಿದ್ದಾರೆ. ಈ ಆಸ್ತಿಯನ್ನು ರಕ್ಷಣೆ ಮಾಡಿ ಬಡ ಮುಸ್ಲಿಮರಿಗೆ ಅನುಕೂಲ ಆಗುವ ಕೆಲಸವನ್ನು ಈ ವಿಧೇಯಕ ಮಾಡುತ್ತಿದೆ” ಎಂದರು.
“ಈ ಮಸೂದೆಯು ವಕ್ಫ್ ಮಂಡಳಿಗಳ ಅಡಿಯಲ್ಲಿರುವ ಆಸ್ತಿಗಳ ಆಡಳಿತವನ್ನು ನಿಯಂತ್ರಿಸುತ್ತದೆ. ಇದು ಪ್ರಸ್ತುತ ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ಇರುವ ಒಟ್ಟು 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತದೆ ಹಾಗೂ ಅದರ ಮೌಲ್ಯ ₹1.2 ಲಕ್ಷ ಕೋಟಿ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಈ ಆಸ್ತಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.
“ನಾವು ಜಾತ್ಯತೀತ ಎಂದು ಹೇಳಿಕೊಂಡವರು ಮುಸ್ಲಿಮರಿಗೆ ಕಳೆದ ಎಪ್ಪತ್ತೈದು ವರ್ಷಗಳಿಂದ ಅನ್ಯಾಯ ಮಾಡುತ್ತಲೇ ಇದ್ದಾರೆ. ವಕ್ಫ್ ಆಸ್ತಿ ದುರ್ಬಳಕೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ವಿಧೇಯಕವೂ ಆರ್ಥಿಕ ಮತ್ತು ಸಾಜಿಕವಾಗಿ ದುರ್ಬಲವಾಗಿರುವ ಮುಸ್ಲಿಮರನ್ನು ಮೇಲೆತ್ತುತ್ತದೆ. ಆದರೆ, ಎಲ್ಲಿಯೂ ಅವರ ಧಾರ್ಮಿಕ ನಂಬಿಕೆಗಳಲ್ಲಿ ಮೂಗು ತೂರಿಸುವುದಿಲ್ಲ. ಇದನ್ನು ಈ ವಿಧೇಯಕದ ಟೀಕಾಕಾರರು ಅರ್ಥ ಮಾಡಿಕೊಳ್ಳಬೇಕು. ಈ ಮಸೂದೆ ಕೇವಲಕಂದಾಯ ಮತ್ತು ಆಡಳಿತ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸುತ್ತದೆ” ಎಂದು ಹೇಳಿದರು.
“ತುಳಿತಕ್ಕೆ ಒಳಗಾದ ದುರ್ಬಲರ ಪರವಾಗಿ ನಾನು ವಕ್ಫ್ ಮಸೂದೆ ಮತ್ತು ಮೋದಿ ಅವರ ಸರ್ಕಾರವನ್ನು ಬೆಂಬಲಿಸುತ್ತೇನೆ. ಕರ್ನಾಟಕದಲ್ಲಿ ನಾನು ಮುಖ್ಯಮಂತ್ರಿ ಆಗಿ ಅಲ್ಪಸಂಖ್ಯಾತರ ರಕ್ಷಣೆಗೆ ಸಾಕಷ್ಟು ನಿರ್ಧಾರಗಳನ್ನು ಮಾಡಿದ್ದೇನೆ. ಅವರ ಒಳ್ಳೆಯದಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದೇನೆ. ಹಾಗಂತ ನಾನು ಯಾವುದೇ ಸಿದ್ಧಾಂತಕ್ಕೆ ಜೋತು ಬಿದ್ದಿಲ್ಲ. ನಾನೊಬ್ಬ ರೈತ. ರೈತರಿಗೂ ಒಳ್ಳೆಯದು ಮಾಡಿದ್ದೇನೆ” ಎಂದರು.
“ನಾನು ಯಾವುದೇ ಸಿದ್ಧಾಂತದವನಲ್ಲ, ನಾನು ರೈತ. ಮುಸ್ಲಿಂ ಮಾತ್ರವಲ್ಲ ಬಹಳಷ್ಟು ಸಮುದಾಯಕ್ಕೆ ಮೀಸಲಾತಿ ನೀಡಿದ್ದೇನೆ. ಸಣ್ಣಪುಟ್ಟ ಸಮುದಾಯಗಳಿಗೆ ಮೀಸಲು ಸೌಲಭ್ಯ ನೀಡಿ ಅವರ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಅನೇಕ ಹೋರಾಟ, ಸಂಘರ್ಷಗಳನ್ನು ಮಾಡಿದ್ದೇನೆ. ಆದರೆ, ಯಾವತ್ತೂ ನಾನು ಸಭಾಧ್ಯಕ್ಷರ ಪೀಠಕ್ಕೆ ಅಪಮಾನ ಮಾಡಿಲ್ಲ. ಮಾಡುವುದೂ ಇಲ್ಲ. ಆದರೆ, ಇಲ್ಲಿ ನಡೆಯುತ್ತಿರುವುದು ನೋಡಿ ಬೇಸರ ಆಗುತ್ತದೆ” ಎಂದು ದೇವೇಗೌಡರು ಅತೃಪ್ತಿ ವ್ಯಕ್ತಪಡಿಸಿದರು.