ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಬೀದರ್ ತಾಲ್ಲೂಕಿನ ಚಿಂತಲಗೇರಾ ಗ್ರಾಮದ ಪುಂಡಲಿಕ ಖಂಡೆನೋರ್ (52) ಮೃತರು ಎಂದು ಗುರುತಿಸಲಾಗಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ಕೃಷಿಕರಾಗಿದ್ದ ಪುಂಡಲಿಕ ಅವರು ಮೆಡಿಕಲ್‌ನಲ್ಲಿ ಔಷಧಿ ಖರೀದಿಸುವುದಕ್ಕಾಗಿ ಪತ್ನಿಯೊಂದಿಗೆ ಮನ್ನಳ್ಳಿಗೆ ಬೈಕ್ ಬರುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಪುಂಡಲಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹಿಂಬದಿ ಕುಳಿತ್ತಿದ್ದ ಪುಂಡಲಿಕ ಅವರ ಪತ್ನಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೈಕ್‌ಗೆ ಡಿಕ್ಕಿ ಹೊಡೆದ ಚಾಲಕ ಘಟನಾ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಮನ್ನಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು,ಈ ಕುರಿತು ಮನ್ನಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.