ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯು ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ನ್ಯೂಜಿಲೆಂಡ್, ಹಾಗೂ ಆತಿಥೇಯ ಭಾರತ ಸೇರಿದಂತೆ ಒಟ್ಟು 7 ತಂಡಗಳು ಈಗಾಗಲೇ ಟೂರ್ನಿಗೆ ಅರ್ಹತೆ ಪಡೆದಿವೆ. ಉಳಿದ 3 ಸ್ಥಾನಗಳಿಗಾಗಿ 15 ತಂಡಗಳ ನಡುವೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ.
ಈ ನಡುವೆ ಮಹತ್ವದ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳಿಗೆ, ತಮ್ಮ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಗಸ್ಟ್ 29ರ ಗಡುವನ್ನು ನಿಗದಿಪಡಿಸಿದೆ.
ಪ್ರಕಟಿತ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 5ರಿಂದ ಪ್ರಾರಂಭವಾಗಲಿದೆ. ಹೀಗಾಗಿ ತಂಡವನ್ನು ಅಂತಿಮಗೊಳಿಸಲು 2 ತಿಂಗಳುಗಳ ಅವಧಿ ಬಾಕಿಯಿದೆ. ಆದರೆ ಐಸಿಸಿಗೆ ಸಲ್ಲಿಸಲಾಗುವ ಪಟ್ಟಿಯಲ್ಲಿ, ಪಂದ್ಯಾವಳಿ ಪ್ರಾರಂಭವಾಗುವ ಒಂದು ವಾರ ಮುಂಚಿತವಾಗಿ ಬದಲಾವಣೆ ಮಾಡಿಕೊಳ್ಳಲು, ಅವಕಾಶವಿರುತ್ತದೆ. ಇದಾದ ಬಳಿಕ ಆಟಗಾರರ ಬದಲಾವಣೆಗೆ ಐಸಿಸಿ ತಾಂತ್ರಿಕ ಸಮಿತಿಯ ಒಪ್ಪಿಗೆ ಪಡೆಯುವ ಅಗತ್ಯವಿದೆ.
ಈ ಸುದ್ದಿ ಓದಿದ್ದೀರಾ?: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಐಪಿಎಲ್ ಸ್ಟಾರ್ ಆಟಗಾರರಿಗೆ ಸ್ಥಾನ
ಬಿಸಿಸಿಐಗೆ ತಲೆನೋವು!
ಐಸಿಸಿ ವಿಧಿಸಿರುವ ʻಡೆಡ್‌ಲೈನ್ʼ ಬಿಸಿಸಿಐ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಫೆಬ್ರವರಿಯಲ್ಲಿ ಚೇತನ್ ಶರ್ಮಾ ರಾಜೀನಾಮೆ ನೀಡಿದ ಬಳಿಕ ಹಿರಿಯರ ಆಯ್ಕೆ ಸಮಿತಿಯು ʻಅಧ್ಯಕ್ಷʼರಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ವಿಶ್ವಕಪ್‌ಗೂ ಮುನ್ನ ಭಾರತ ತಂಡ ವೆಸ್ಟ್ ಇಂಡೀಸ್, ಏಷ್ಯಾ ಕಪ್ ಮತ್ತು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನಾಡಲಿದೆ.
ಚೇತನ್ ಶರ್ಮಾ ರಾಜೀನಾಮೆ ನೀಡಿ ಅದಾಗಲೇ ಐದು ತಿಂಗಳು ಕಳೆದಿದೆ. ಸುಬ್ರೋತೊ ಬ್ಯಾನರ್ಜಿ, ಸಲೀಲ್ ಅಂಕೋಲಾ, ಶ್ರೀಧರನ್ ಶರತ್ ಸದ್ಯಸರಾಗಿರುವ ಆಯ್ಕೆ ಸಮಿತಿಯಲ್ಲಿ ಶಿವಸುಂದರ್ ದಾಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಸಿಸಿಐ ಹಿರಿಯರ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲು, ಕನಿಷ್ಠ 24 ಟೆಸ್ಟ್ ಪಂದ್ಯಗಳನ್ನಾಡಿದ ಅನುಭವ ಹೊಂದಿರಬೇಕು ಎಂಬ ನಿಯಮವಿದೆ. ಆದರೆ ಸದ್ಯ ಸಮಿತಿಯಲ್ಲಿರುವವರು ಈ ಅರ್ಹತೆಯನ್ನು ಹೊಂದಿಲ್ಲ. ಹೀಗಾಗಿ ನೂತನ ಅಧ್ಯಕ್ಷರ ನೇಮಕವಾಗಬೇಕಿದೆ. ಆದರೆ ಅನುಭವಿ, ಖ್ಯಾತ ಮಾಜಿ ಆಟಗಾರರು ಯಾರೂ ಸಹ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಉತ್ಸಾಹ ತೋರುತ್ತಿಲ್ಲ. ಇದು ಬಿಸಿಸಿಐಗೆ ಸಂಕಷ್ಟ ತಂದಿಟ್ಟಿದೆ.