ಯಾದಗಿರಿ ಜಿಲ್ಲೆಯ ಬೋನಾಳ ಗ್ರಾಮದ ದಲಿತ ಸಮುದಾಯದ ಶಾಂತಾ ಪರಮಣ್ಣ ದೊಡ್ಡಮನಿ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಸಾಮೂಹಿಕ ದಲಿತ ಸಂಘಟನೆಗಳ ಒಕ್ಕೂಟದಿಂದ ಸುರಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಡಿವೈಎಸ್ಪಿಗೆ ಮನವಿ ಸಲ್ಲಿಸಿದರು.
ಸುರಪುರ ನಗರದ ಡಾ.ಬಿ ಆರ್ ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಪೊಲೀಸ್ ಠಾಣೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಅನೇಕ ಮುಖಂಡರು ಮಾತನಾಡಿದರು.
ಬೋನಾಳ ಗ್ರಾಮದ ದಲಿತ ಸಮುದಾಯದ ಭೀಮಪ್ಪ ಸಾಬಪ್ಪ ದೊಡ್ಡಮನಿ 1987ರಲ್ಲಿ ಜಮೀನು ಖರಿದಿಸಿದ್ದು, ಬಾಚಿಮಟ್ಟಿ ಗ್ರಾಮದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿಯವರು ತಮ್ಮ ರಾಜಕೀಯ ಪ್ರಭಾವ ಬಳಸಿ ಉಪ ನೋಂದಣಾಧಿಕಾರಿಗಳ ಕಚೇರಿ ಮೂಲಕ ಆಕ್ರಮವಾಗಿ ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡಿಕೊಂಡಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದ್ದು, 2024ರ ಡಿಸೆಂಬರ್ 23 ರಂದು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಶಾಂತಾ ಪರಮಣ್ಣ ದೊಡ್ಡಮನಿ ಮತ್ತಿತರರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದರು. ದೂರಿನನ್ವಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಸರಿಯಾಗಿ ವಿಚಾರಣೆ ಮಾಡದೆ ಏಕಾಏಕಿ ದಲಿತರನ್ನು ಬಂಧಿಸಿರುವುದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಜೆಜೆಎಂ ಕಾಮಗಾರಿ ವಿಳಂಬ; ಶಕಲಾಸಪಲ್ಲಿ ಗ್ರಾಮಸ್ಥರ ಆಕ್ರೋಶ
“ಪೋಲಿಸರು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೂಳಗಾಗಿ ದಲಿತರ ಮೇಲೆ ಕ್ರಮ ಕೈಗೊಂಡಿದ್ದು, ಹಲ್ಲೆ ಹಾಗೂ ಜಾತಿ ನಿಂದನೆ ಮಾಡಿದವರ ಮೇಲೆ ಈವರೆಗೆ ಯಾವುದೇ ರೀತಿಯ ಕಾನೂನು ಕ್ರಮ ಕೈಕೊಂಡಿಲ್ಲ. ಕನಿಷ್ಠ ಪಕ್ಷ ಜಾತಿ ನಿಂದನೆ ಮಾಡಿರುವವರನ್ನು ಠಾಣೆಗೆ ಕರೆಸಿ ವಿಚಾರಣೆಯನ್ನೂ ಮಾಡಿಲ್ಲ” ಎಂದು ದಲಿತ ಸಂಘಟನಾಕಾರರು ಆರೋಪಿಸಿದರು.
“ಒಂದು ವೇಳೆ ದಲಿತರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸದಿದ್ದಲ್ಲಿ ಏಪ್ರಿಲ್ 9ರಂದು ಸಂಪೂರ್ಣವಾಗಿ ಸುರಪುರ ಬಂದ್ ಮಾಡುವ ಮೂಲಕ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಹಣಮಂತಪ್ಪ ಕಾಕರಗಲ್, ನಿಂಗಣ್ಣ ಎಂ ಗೋನಾಳ್, ಮಾನಪ್ಪ ಶಳ್ಳಿಗಿ, ನಿಂಗಪ್ಪ ಕನ್ನಳ್ಳಿ, ಭೀಮಣ್ಣ ಅಡ್ಡೂಡಗಿ, ಮಲ್ಲಪ್ಪ ಕೋಟೆ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು, ಮಹಿಳೆಯರು ಇದ್ದರು.