- ಕಚ್ಚಾ ವಸ್ತುಗಳ ಮರುಬಳಕೆ ನಮ್ಮ ಮುಂದಿರು ಸವಾಲು
- ಇ-ತ್ಯಾಜ್ಯ ನಿಯಮಗಳಲ್ಲಿ ವೃತ್ತಾಕಾರದ ಆರ್ಥಿಕತೆ ಆಶಯ
ಭೂಮಿ ಮೇಲಿರುವ ಸೀಮಿತ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಉತ್ತಮ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡಲು ನಮ್ಮ ಮುಂದಿರುವ ಏಕೈಕ ಮಾರ್ಗವೆಂದರೆ ವೃತ್ತಾಕಾರದ ಆರ್ಥಿಕತೆಗೆ (ಸರ್ಕ್ಯುಲರ್ ಎಕಾನಮಿ) ಪ್ರಾಮುಖ್ಯತೆ ನೀಡುವುದು. ಇದರಿಂದ ನಾವು ತ್ಯಾಜ್ಯ ಉತ್ಪಾದನೆಯ ಮೇಲೆ ನಿಯಂತ್ರಣ ಹೇರಬಹುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖಾ ವತಿಯಿಂದ ಏರ್ಪಡಿಸಿದ್ದ ಆರ್ಥಿಕತೆ ಕುರಿತ ದುಂಡುಮೇಜಿನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲಗಳ ಬಳಕೆಯಿಂದ ತ್ಯಾಜ್ಯ ಮಾಲಿನ್ಯ ಮತ್ತು ಜೈವಿಕ ವೈವಿಧ್ಯತೆಯ ನಷ್ಟದಂತಹ ಜಾಗತಿಕ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ ನಾವು ಭೂಮಿಯ ಸಂಪನ್ಮೂಲಗಳನ್ನು ಹೊರತೆಗೆದು ಅದರಿಂದ ಉತ್ಪನ್ನಗಳನ್ನು ತಯಾರಿಸುತ್ತೇವೆ. ನಂತರ ಅವುಗಳನ್ನು ತ್ಯಾಜ್ಯವಾಗಿ ಎಸೆಯುತ್ತೇವೆ. ಈ ಕ್ರಿಯೆಗಳು ಸಂಪನ್ಮೂಲದ ದೀರ್ಘಾಯುಷಕ್ಕೆ ಕುಂದು ತರುತ್ತದೆ. ಇದು ಕೇವಲ ಭೂಮಿಗಷ್ಟೇ ಅಲ್ಲದೇ, ನಮ್ಮ ಆರ್ಥಿಕತೆಯ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದರು.
ಕಚ್ಚಾ ವಸ್ತುಗಳ ಕನಿಷ್ಠ ಬಳಕೆ ಮಾಡುವುದು, ಉತ್ಪನ್ನಗಳು ಮತ್ತು ಘಟಕಗಳ ಗರಿಷ್ಠ ಮರುಬಳಕೆ ಮಾಡುವುದು ಹಾಗೂ ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ ಕಚ್ಚಾ ವಸ್ತುಗಳ ಮರುಬಳಕೆ ಮಾಡುವುದು ನಮ್ಮ ಮುಂದಿರು ಮೂರು ಸವಾಲುಗಳಾಗಿವೆ.
ಈಗ ನಾವು ಉತ್ಪಾದಿಸಿದ ವಸ್ತುಗಳ ಸಂಪೂರ್ಣ ಬಳಕೆಯ ನಂತರ ಮಾಡುತ್ತಿರುವ ಮರುಬಳಕೆಯ ಪ್ರಮಾಣ ಕೇವಲ ಶೇ. 7.2 ಮಾತ್ರ ಎಂಬ ವಿಷಯವನ್ನು ಹಂಚಿಕೊಂಡ ಸಚಿವರು, ಈಗಾಗಲೇ ಭೂಮಿಯ ನೈಸರ್ಗಿಕ ಸಂಪನ್ಮೂಲಗಳನ್ನು ಲಭ್ಯವಿರುವ ಪ್ರಮಾಣಕ್ಕಿಂತ ಹೆಚ್ಚಾಗಿ ಬಳಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ವರದಿಗಳು ಸೂಚಿಸುತ್ತವೆ ಎಂದು ಹೇಳಿದರು.
ಭಾರತ ತನ್ನ ಅಸ್ತಿತ್ವದಲ್ಲಿರುವ ಐಟಿ ಪ್ರಾಬಲ್ಯ ಮತ್ತು ತಾಂತ್ರಿಕ ಪ್ರತಿಭೆಗಳನ್ನು ಸದ್ಬಳಕೆ ಮಾಡಿಕೊಂಡರೆ ಜಾಗತಿಕ ವೃತ್ತಾಕಾರದ ಆರ್ಥಿಕ ಕ್ರಾಂತಿಯು ಮುಂಚೂಣಿಯಲ್ಲಿ ನಿಲ್ಲಬಹುದಾಗಿದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಅತ್ಯಾಧುನಿಕ ಆವಿಷ್ಕಾರಗಳನ್ನು ರೂಪಿಸಲು ಭಾರತವು ಸಕಲ ರೀತಿಯಲ್ಲಿ ಸಿದ್ಧವಾಗಿದೆ. ಕರ್ನಾಟಕ ಸರ್ಕಾರ ವೃತ್ತಾಕಾರದ ಆರ್ಥಿಕತೆಯ ಮಹತ್ವವನ್ನು ಅರ್ಥಮಾಡಿಕೊಂಡಿದ್ದು, ಅದನ್ನು ರಾಜ್ಯದ ಪ್ರಮುಖ ನೀತಿಗಳಲ್ಲಿ ಸೇರಿಸಿದೆ ಎಂದರು.
ಸರ್ಕಾರದ ಸ್ಟಾರ್ಟ್ ಅಪ್ ನೀತಿ, ಕರ್ನಾಟಕ ರಾಜ್ಯ ನಗರ ಘನ ತ್ಯಾಜ್ಯ ನಿರ್ವಹಣಾ ನೀತಿ, ಕರ್ನಾಟಕ ನೋಂದಾಯಿತ ವಾಹನ ಸ್ಕ್ಯಾಪಿಂಗ್ ನೀತಿ ಹಾಗೂ ಇ – ತ್ಯಾಜ್ಯ (ನಿರ್ವಹಣೆ) ನಿಯಮಗಳಲ್ಲಿ ವೃತ್ತಾಕಾರದ ಆರ್ಥಿಕತೆಯ ಆಶಯಗಳನ್ನು ಹೊಂದಾಣಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚು ಆಯಸ್ಸಿಲ್ಲ; ಬಿಜೆಪಿ ಕಿಡಿ
ನಾವು ಹೆಚ್ಚು ಜ್ಞಾನವನ್ನು ಹಂಚಿಕೊಂಡರೆ, ಮುಂದಿನ ಪೀಳಿಗೆಗಾಗಿ ಹೆಚ್ಚಿನದನ್ನು ಉಳಿಸಲು ಸಾಧ್ಯ ಮತ್ತು ಹೆಚ್ಚು ಉಳಿಸಿದರೆ ಹೆಚ್ಚು ಬದುಕಲು ಸಾಧ್ಯ. ಪ್ರಪಂಚದ ಮುಂದಿನ ಭವಿಷ್ಯಕ್ಕೆ ಇದರಿಂದ ಒಳಿತಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಆಸ್ಟ್ರೇಲಿಯಾ, ಕೆನಡಾ, ಡೆನ್ಮಾರ್ಕ್, ಫಿನ್ ಲ್ಯಾಂಡ್, ಜರ್ಮನಿ, ಇಸ್ರೇಲ್, ಜಪಾನ್, ನೆದರ್ ಲ್ಯಾಂಡ್, ಸ್ವಿಟ್ಟರ್ ಲ್ಯಾಂಡ್, ಪೋಲ್ಯಾಂಡ್ , ಯುಕೆ ದೇಶಗಳ ರಾಯಭಾರ ಕಚೇರಿಯ ಪ್ರತಿನಿಧಿಗಳು ಭಾಗವಹಿಸಿದ್ದರು.