ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಕೆ. ಅಣ್ಣಾಮಲೈ ಘೋಷಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ಪಕ್ಷದ ನಾಯಕನ ಹುದ್ದೆಗೆ ಸ್ಪರ್ಧಿಸುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಅಧ್ಯಕ್ಷ ಹುದ್ದೆಗೆ ನಾನು ಸ್ಪರ್ಧಿಯಲ್ಲ. ನಾನು ಪಕ್ಷ ಉಜ್ವಲ ಭವಿಷ್ಯ ಹೊಂದುವುದಾಗಿ ಬಯಸುತ್ತೇನೆ. ಹಲವು ಮಂದಿ ಪಕ್ಷದ ಅಭಿವೃದ್ಧಿಗೆ ಪ್ರಾಣ ನೀಡಿದ್ದಾರೆ. ನಾನು ಪಕ್ಷಕ್ಕೆ ಸದಾ ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟ ರಚನೆಯಾಗುವ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ, ಕೆ. ಅಣ್ಣಾಮಲೈ ಬಿಜೆಪಿ ತಮಿಳುನಾಡು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯಿತ್ತು. ಚುನಾವಣೆ ಸಮೀಪಿಸುತ್ತಿರುವ ರಾಜ್ಯದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಜಾತಿ ಸಮೀಕರಣಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಬಿಜೆಪಿಗೆ ಒಂದೇ ಗೌಂಡರ್ ಸಮುದಾಯದ ಎರಡೂ ಮಿತ್ರ ಪಾಲುದಾರರ (ಬಿಜೆಪಿ-ಎಐಎಡಿಎಂಕೆ) ಮುಖಗಳು ಬೇಕಾಗಿಲ್ಲ. ಕೆ ಅಣ್ಣಾಮಲೈ ಮತ್ತು ಕೆ ಪಳನಿಸ್ವಾಮಿ ಇಬ್ಬರೂ ಗೌಂಡರ್ ಸಮುದಾಯಕ್ಕೆ ಸೇರಿದವರು. ಇಬ್ಬರೂ ಗೌಂಡರ್‌ಗಳು ಪ್ರಾಬಲ್ಯ ಹೊಂದಿರುವ ತಮಿಳುನಾಡಿನ ಒಂದೇ ಪಶ್ಚಿಮ ಕೊಂಗು ಪ್ರದೇಶದಿಂದ ಬಂದವರು. ಇಬ್ಬರು ಒಂದೇ ಸಮುದಾಯದವರು ಅಧ್ಯಕ್ಷರಾಗಿ ಮುಂದುವರೆದರೆ ಇತರೆ ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಿದಂತಾಗಿ ಮತಗಳು ಕೈತಪ್ಪುತ್ತವೆ ಎಂಬುದು ಬಿಜೆಪಿ ನಾಯಕರ ಆಲೋಚನೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪತ್ರಿಕೋದ್ಯಮದ ಪಾವಿತ್ರ್ಯವನ್ನು ಪಾತಾಳಕ್ಕಿಳಿಸಿದ ‘ಪತ್ರಕರ್ತರು’!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಣ್ಣಾಮಲೈ ಅವರಿಗೆ ಬಿಜೆಪಿ ತನ್ನ ನಿರ್ಧಾರವನ್ನು ತಿಳಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಮಿತ್ ಶಾ ಅವರು, ಪಳನಿಸ್ವಾಮಿ ಅವರನ್ನು ಭೇಟಿಯಾದ ಸ್ವಲ್ಪ ಸಮಯದ ನಂತರ ಈ ಸಭೆ ಕೂಡ ನಡೆದಿದೆ.
ಅಣ್ಣಾಮಲೈ ಅವರ ಆಕ್ರಮಣಕಾರಿ ಮನೋಭಾವದ ಹೊರತಾಗಿಯೂ ತಮಿಳುನಾಡಿನಲ್ಲಿ ಬಿಜೆಪಿ ಜನಮನ್ನಣೆ ಗಳಿಸಲು ಸಾಧ್ಯವಾಗಿಲ್ಲ. ಹಿಂದಿನ ಯಾವುದೇ ಚುನಾವಣೆಗಳಲ್ಲೂ ಯಾವುದೇ ಸಾಧನೆ ಮಾಡಲಾಗಿಲ್ಲ.