ಮುಂಗಾರು ಮಳೆಯಾಗಿಲ್ಲ. ಕೆರೆ-ಕಟ್ಟೆಗಳಲ್ಲಿ ನೀರಿಲ್ಲ. ಪಂಪ್‌ಸೆಟ್‌ನಲ್ಲಿ ನೀರು ಬರುತ್ತಿಲ್ಲ. ಬೆಳೆಗಳು ಒಣಗುತ್ತಿವೆ. ಇಳುವರಿ ಕಡಿಮೆಯಾಗುತ್ತಿದೆ. ಇದರಿಂದಾಗಿ, ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕೋಲಾರ ಎಪಿಎಂಸಿಯಲ್ಲಿ 15 ಕೆ.ಜಿ ತೂಕದ ಟೊಮೆಟೊ ಬಾಕ್ಸ್ ಬರೋಬ್ಬರಿ 1,000 ರೂಪಾಯಿಗೆ ಮಾರಾವಾಗುತ್ತಿದೆ.
ನೀರಿನ ಕೊರತೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಅಲ್ಲದೆ, ಬಕ್ರಿದ್ ಹಬ್ಬ ಕೂಡ ಸಮೀಪಿಸುತ್ತಿದೆ. ಹೀಗಾಗಿ, ರಾಜ್ಯದ ಟೊಮೆಟೊಗೆ ಆಂಧ್ರಪ್ರದೇಶ, ತಮಿಳುನಾಡು ಮಾತ್ರವಲ್ಲದೆ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಆಂಧ್ರ ಮತ್ತು ತಮಿಳುನಾಡಿನ ಗಡಿ ಜಿಲ್ಲೆಯಾದ ಕೋಲಾರ ಮಾರುಕಟ್ಟೆಗಳ ವಿವಿಧ ರಾಜ್ಯಗಳ ವ್ಯಾಪಾರಿಗಳು ಟೊಮೆಟೊಗಾಗಿ ಬರುತ್ತಿದ್ದಾರೆ. ವ್ಯಾಪಾರ ಕುದುರುತ್ತಿದ್ದು, ಬೆಲೆ ಸಾವಿರದ ಗಡಿ ದಾಟಿದೆ.
ಕಳೆದ ತಿಂಗಳು 15 ಕೆ.ಜೆ ಟೊಮೆಟೊ ಬಾಕ್ಸ್ 200 ರೂ.ಗೆ ಮಾರಾಟವಾಗಿತ್ತು. ಈ ತಿಂಗಳು ಬರೋಬ್ಬರಿ ನಾಲ್ಕು ಪಟ್ಟು ಏರಿಕೆಯಾಗಿದೆ.
“ಟೊಮೆಟೊ ಫಸಲು ಕಡಿಮೆಯಾಗಿದೆ. ಇತರ ರಾಜ್ಯಗಳಲ್ಲೂ ಟೊಮೆಟೊ ಶೇಖರಣೆಯಿಲ್ಲ. ಹೀಗಾಗಿ, ವಿವಿಧ ರಾಜ್ಯಗಳ ವರ್ತಕರು ಕೋಲಾರ ಎಪಿಎಂಸಿಗೆ ಬರುತ್ತಿದ್ದಾರೆ. ರೈತರಿಗೆ ಉತ್ತಮ ಲಾಭ ದೊರೆಯುತ್ತಿದೆ” ಎಂದು ಎಪಿಎಂಸಿ ಅಧಿಕಾರಿ ತಿಳಿಸಿದ್ದಾರೆ.