ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಇಲ್ಲದ ಇಲ್ಲವೆ
ಆನು ನೀನೆಂಬುದು ತಾನಿಲ್ಲ
ತಾನರಿದ ಬಳಿಕ ಮತ್ತೇನೂ ಇಲ್ಲ ಇಲ್ಲ
ಇಲ್ಲದ ಇಲ್ಲವೆ ಎಲ್ಲಿಂದ ಬಪ್ಪುದೊ?
ಅನುವರಿದು, ತನುವ ಮರೆದು
ಭಾವರಹಿತ ಗುಹೇಶ್ವರಾ!
ಪದಾರ್ಥ:
ಆನು = ನಾನು
ಬಪ್ಪುದೊ = ಬರುವುದೋ
ಅನು = ಸಾಧನೆಯ ರೀತಿ
ತನು = ತನ್ನ ದೇಹ
ಭಾವರಹಿತ = ಭಾವನೆಗಳಿಲ್ಲದ
ವಚನಾರ್ಥ:
ನಾನು ನೀನು ಆನು ತಾನು ಎಂಬ ನಾಲ್ಕರ ಹಂದರದ ಮೇಲೆ ರಚಿತವಾದ ಅಲ್ಲಮನ ಅತ್ಯಂತ ಮಹತ್ವದ ವಚನವಿದು. ನಾನು, ನೀನು, ಆನು ಅಂದರೆ ಸ್ವಯಂ, ತಾನು ಅಂದರೆ ಪರಂ ಇವೆಲ್ಲವನು ಅರಿತ ಬಳಿಕ ಮತ್ತೇನೂ ಇಲ್ಲ. ಎಲ್ಲವೂ ಶೂನ್ಯ. ಭಾವನಾರಹಿತ. ಇದು ಎಲ್ಲಾ ಧರ್ಮಗಳ ದಾರ್ಶನಿಕರು, ಆಧ್ಯಾತ್ಮಿಕ ಚಿಂತಕರು ಕಂಡುಕೊಂಡ ನಿಜದರ್ಶನ. ‘ನಾನು’ ‘ನೀನು’ ‘ಆನು’ ‘ತಾನು’ ನಾಕು ನಾಕೇ ತಂತಿ ಎಂದ ವರಕವಿ ಬೇಂದ್ರೆಯವರ ಜ್ಞಾನಪೀಠ ಪುರಸ್ಕೃತ ಆಧ್ಯಾತ್ಮಿಕ ಚಿಂತನ ಕವನಕ್ಕೆ ಅಲ್ಲಮನ ಈ ವಚನ ಪ್ರೇರಕ ಎಂದು ಕನ್ನಡ ಸಾಹಿತ್ಯ ವಿಮರ್ಶಕರು ವಿಶ್ಲೇಷಿಸಿದ್ದಾರೆ. ನಾನು, ನೀನು, ಸ್ವಯಂ, ಪರಂಗಳ ಚತುರ್ಮುಖವನ್ನು ಹೃದಯ ಗುಹೇಶ್ವರನಲ್ಲಿ ಕಾಣುವುದನ್ನು ಮರೆಯಬಾರದು ಎಂದು ಬೇಂದ್ರೆಯವರೇ ತಮ್ಮ ಲೇಖನವೊಂದರಲ್ಲಿ ಅಲ್ಲಮನನ್ನು ಉಲ್ಲೇಖಿಸಿದ್ದಾರೆ.
ಪದ ಪ್ರಯೋಗಾರ್ಥ:
ಇಲ್ಲದ ಇಲ್ಲವೆ ಎಂಬಲ್ಲಿ ಅತ್ಯುನ್ನತವಾದ ಪದಪ್ರಯೋಗ ಚಮತ್ಕಾರವಿದೆ. ಇಲ್ಲ ಎಂಬುದು ಒಂದು ವಸ್ತು. ಇಲ್ಲದ ಎಂಬುದು ಆ ವಸ್ತುವಿಗೆ ಸಂಬಂಧಿಸಿದ್ದು. ಇಲ್ಲವೆ ಎಂಬುದು ಒಂದು ವಸ್ತುಸ್ಥಿತಿ. ಇಲ್ಲದ ಇಲ್ಲವೆ ಅಂದರೆ ಇಲ್ಲ ಎಂಬ ವಸ್ತುವಿನ ಇರುವಿಕೆ. ಅದು ಇಲ್ಲ ಅಂದರೆ ಅದರ ಇಲ್ಲವೆ ಎಲ್ಲಿಂದ ಬರುತ್ತದೆ ಎಂದು ಅಲ್ಲಮನ ಪ್ರಶ್ನೆ. ಈ “ಇಲ್ಲ” ಎನ್ನುವ ವಸ್ತು ಎಲ್ಲೆಲ್ಲಿ ಇದೆ ಎಂಬ ಪಟ್ಟಿಯನ್ನು ಅಲ್ಲಮನ ಇನ್ನೊಂದು ಮಹತ್ವದ ವಚನದಲ್ಲಿ ಹೀಗೆ ಕಾಣಬಹುದು.”ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. ‘ಇಲ್ಲ’ ಎಂಬುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು.” ಸರ್ವಕಾಲಕ್ಕೂ ಸಲ್ಲುವ ಈ ಶ್ರೇಷ್ಠ ವಚನವನ್ನು ಬಿಜಾಪುರದ ಶ್ರೀ ಸಿದ್ದೇಶ್ವರ ಸ್ವಾಮಿಗಳು ತಮ್ಮ ಮರಣಪತ್ರದಲ್ಲಿ ಅಂತಿಮ ನೆನಹು ಎಂದು ಸ್ಮರಿಸಿ ಪ್ರಣಮಾಂಜಲಿಯನ್ನು ಸಮರ್ಪಿಸಿದ್ದಾರೆ. ಇಲ್ಲದ ಇಲ್ಲವೆ ಎಂಬ ಶೂನ್ಯದ ಪರಿಭಾಷೆಯ ಸಂಕೀರ್ಣ ಕಲ್ಪನೆಯನ್ನು ಕಟ್ಟಿಕೊಡುವುದು ಶೂನ್ಯಸಿಂಹಾಸನಾಧೀಶ್ವರ ಅಲ್ಲಮಪ್ರಭುವಿಗೆ ಮಾತ್ರ ಸಿದ್ದಿಸಿದ್ದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ವಿಷಕ್ಕೆ ರುಚಿ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.
ಈ ವಚನ ಬೇಂದ್ರೆಯವರ ನಾಕು ತಂತಿ ಕವಿತೆಗೆ ಪ್ರಭಾವಿಸರಬಹುದೇ? I mean ಪದ ಪ್ರಯೋಗಗಳಲ್ಲಿ…
ಕ್ಷಮಿಸಿ ಮುಂದೆ ಸರಿಯಾಗಿ ಓದದೇ ಪ್ರತಿಕ್ರಿಯಿಸಿದ್ದ. ಮುಂದಿನ ಓದಿನಲ್ಲಿ ನೋಡಿದೆ.
ಧನ್ಯವಾದಗಳು