ಕಾಂಗ್ರೆಸ್‌ಗೆ ಮೂಲ ಬಂಡವಾಳವೇ ಮುಸ್ಲಿಮರು. ಇತ್ತೀಚಿನ ವರ್ಷಗಳಲ್ಲಿ ಮೂಲ ಬಂಡವಾಳಿಗರನ್ನೇ ಕಾಂಗ್ರೆಸ್ ಮರೆಯುತ್ತಿದೆ. ಕಾಂಗ್ರೆಸ್‌ನಲ್ಲಿ ಮುಸ್ಲಿಮರನ್ನು ಮೂರನೇ ದರ್ಜೆ ನಾಗರಿಕರನ್ನಾಗಿ ಮಾಡಲಾಗಿದೆ. ಈ ನಿರ್ಲಕ್ಷ್ಯ ಸರಿಯಲ್ಲ ಎಂದು ಮುಸ್ಲಿಂ ಮುಖಂಡರು ಆರೋಪ ಮಾಡಿದ್ದಾರೆ.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಸ್ಲಿಂ ಮುಖಂಡರು “ಮುಂಬರುವ ವಿಧಾನ ಪರಿಷತ್‌ಗೆ ಸದಸ್ಯರ ಆಯ್ಕೆ ವೇಳೆ ಜಿಲ್ಲಾ ಕಾಂಗ್ರೆಸ್, ಅಲ್ಪಸಂಖ್ಯಾತ ಮುಖಂಡರಿಗೆ ಅವಕಾಶ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಅಬ್ದುಲ್ ಹಮೀದ್ ಮುಶ್ರೀಫ್, ಎಸ್. ಎಂ.ಪಾಟೀಲ ಗಣಿಹಾರ, ಮಹಮ್ಮದ್ ರಫೀಕ್ ಟಪಾಲ್, ಎಂ.ಸಿ.ಮುಲ್ಲಾ, ಫಯಾಜ್ ಕಲಾದಗಿ, ನಸೀಂ ರೋಜಿನದಾರ ಸೇರಿದಂತೆ ಹಲವು ಸಮುದಾಯದ ಮುಖಂಡರು, “ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಮುಸ್ಲಿಂ ಮತದಾರರು ಕಾರಣ. ಹೀಗಾಗಿ ಅವಕಾಶ ಹಾಗೂ ಪ್ರಾಮುಖ್ಯತೆ ಕೇಳುವ ಹಕ್ಕು ನಮಗಿದೆ. ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಪಗಾರ ಕೇಳುತ್ತಿದ್ದೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ರಾತ್ರಿ-ಹಗಲು ಕೆಲಸ ಮಾಡಿದ್ದೇವೆ. ಆದರೆ, ಜಿಲ್ಲೆಯ ಮುಸ್ಲಿಂ ಮುಖಂಡರಿಗೆ ನಿಗಮ, ಮಂಡಳಿ, ವಿಧಾನ ಪರಿಷತ್‌ಗೆ ನೇಮಕವಾಗುವಾಗ ಪರಿಗಣಿಸುತ್ತಿಲ್ಲ. ದಕ್ಷಿಣ ಕರ್ನಾಟಕದ ಮುಸ್ಲಿಮರಿಗೆ ಅವಕಾಶ ಲಭಿಸುತ್ತಿದೆ. ಉತ್ತರ ಕರ್ನಾಟಕದವರಿಗೆ ಲಭಿಸುತ್ತಿಲ್ಲ” ಎಂದರು.
ಇದನ್ನೂ ಓದಿ: ವಿಜಯಪುರ | ʼಏತ ನೀರಾವರಿ ಪೂರ್ಣಗೊಳಿಸಿ ರೈತರ ಹಿತ ಕಾಪಾಡಿʼ
ವಿಜಯಪುರ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಲ್ಪಸಂಖ್ಯಾತ ಸಮುದಾಯವಿದೆ. ನಮ್ಮ ಜಿಲ್ಲೆಯ ನಾಯಕರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಕೂದಲೆಳೆ ಅಂತರದಿಂದ ಎರಡು ಸಮುದಾಯದ ಮುಖಂಡರು ವಿಧಾನಸಭೆ ಚುನಾವಣೆ ಯಲ್ಲಿ ಆಯ್ಕೆಯಾಗಲಿಲ್ಲ. ಈ ಕೊರತೆಯನ್ನು ಜಿಲ್ಲೆಯ ಅಲ್ಪಸಂಖ್ಯಾತ ಮುಖಂಡರೊಬ್ಬರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಮೂಲಕ ನೀಗಿಸಬಹುದಾಗಿದೆ ಎಂದು ಮನವಿ ಮಾಡಿದರು.