ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬೆಂಗಳೂರು ಪಟ್ಟಣದ ಕಮಲಾನಗರದಲ್ಲಿ ನಡೆದಿದೆ.
ಬಸವೇಶ್ವರ ನಗರ ನಿವಾಸಿ ಚಿರಂಜೀವಿ(32) ಚಾಕು ಇರಿತಕ್ಕೆ ಒಳಗಾದವರು. ಚಿರಂಜೀವಿ ತನ್ನ ಸ್ನೇಹಿತನ ಜತೆ ಬೈಕಿನಲ್ಲಿ ಅತ್ತೆಯ ಮನೆಗೆ ತೆರಳಿದ್ದರು. ಈ ವೇಳೆ ಬೈಕ್ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಕಮಲಾನಗರದ ಕೆರೆ ಅಂಗಳದ ವೀರಭದ್ರೇಶ್ವರ ಚಿತ್ರಮಂದಿರದ ಬಳಿ ಬೈಕ್‌ನಲ್ಲಿ ಬಂದಿದ್ದ ಅಪರಿಚಿತರು, ಇವರಿಗೆ ಡಿಕ್ಕಿ ಹೊಡೆಯುವಂತೆ ವೇಗವಾಗಿ ಹೋಗಿದ್ದರು. ಇದನ್ನು ಕಂಡ ಚಿರಂಜೀವಿ ಅವರು ನಿಧಾನವಾಗಿ ನೋಡಿಕೊಂಡು ಬೈಕ್ ಚಾಲನೆ ಮಾಡುವಂತೆ ಹೇಳಿದ್ದರು. ಅಷ್ಟಕ್ಕೇ ಕೋಪಗೊಂಡ ಆರೋಪಿಗಳು, ‘ನಮ್ಮೆದುರೇ ಎಗರಾಡುತ್ತೀಯಾ’ ಎಂದು ಅವರ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆಂದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅತ್ಯಾಚಾರ ಎಸಗಿ, ನಗ್ನ ಫೋಟೊ ವಿಡಿಯೊ ಚಿತ್ರೀಕರಿಸಿದ್ದ ಬ್ಯಾಡ್ಮಿಂಟನ್ ತರಬೇತುದಾರ ಬಂಧನ
“ಹಲ್ಲೆಯಿಂದ ಗಾಯಗೊಂಡಿದ್ದ ಚಿರಂಜೀವಿಯವರು ಕುಸಿದು ಬಿದ್ದಿದ್ದರು. ಚಿರಂಜೀವಿಯವರ ಸಹೋದರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಚಿಕಿತ್ಸೆ ಪಡೆದು ಚೇತರಿಸಿಕೊಂಡ ಅವರು ಬಸವೇಶ್ವರ ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ” ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ರೌಡಿಶೀಟರ್‌ವೊಬ್ಬ ಇತ್ತೀಚೆಗೆ ಸುಖಾಸುಮ್ಮನೆ ಫೆಬ್ರವರಿ 8ರ ಒಂದೇ ದಿನ ರಾತ್ರಿ ಐವರು ನಾಗರಿಕರಿಗೆ ಪ್ರತ್ಯೇಕ ಸ್ಥಳಗಳಲ್ಲಿ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದಿದ್ದ ಘಟನೆ ಇಂದಿರಾನಗರದಲ್ಲಿ ನಡೆದಿತ್ತು. ಯುವಜನರನ್ನು ಮಾತನಾಡಿಸುವುದು ಅಥವಾ ಬುದ್ಧಿ ಹೇಳುವುದೇ ತಪ್ಪು, ಬುದ್ದಿ ಹೇಳುವವರ ಅಂತ್ಯಕ್ಕೆ ಕಾರಣವಾಗಬಹುದೇ ಎಂಬ ಆತಂಕಕ್ಕೆ ಒಳಗಾಗುವಂತಾಗಿದೆ.