ಸಂಸತ್ನ ಎರಡೂ ಸದನಗಳಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಅಂಗೀಕಾರಗೊಂಡಿದ್ದ ವಿವಾದಿತ ವಕ್ಫ್ (ತಿದ್ದುಪಡಿ) ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ತಡರಾತ್ರಿ ಅಂಗೀಕರಿಸಿದ್ದಾರೆ.
ವಕ್ಫ್ (ತಿದ್ದುಪಡಿ) ಕಾಯ್ದೆಯು ಏಪ್ರಿಲ್ 5, 2025ರಂದು ರಾಷ್ಟ್ರಪತಿಗಳ ಒಪ್ಪಿಗೆ ಪಡೆದಿದೆ. ಸಾಮಾನ್ಯ ಮಾಹಿತಿಗಾಗಿ ಇಲ್ಲಿ ಪ್ರಕಟಿಸಲಾಗಿದೆ: ವಕ್ಫ್ (ತಿದ್ದುಪಡಿ) ಕಾಯಿದೆ, 2025″ ಎಂದು ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಜೊತೆಗೆ, ರಾಷ್ಟ್ರಪತಿ ಮುರ್ಮು ಅವರು ಮುಸಲ್ಮಾನ್ ವಕ್ಫ್ (ಪುನರಾವರ್ತಿತ) ಮಸೂದೆ-2025ಕ್ಕೂ ಕೂಡ ತಮ್ಮ ಒಪ್ಪಿಗೆ ನೀಡಿದ್ದಾರೆ.
ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರವಾದ ಬಳಿಕ, ರಾಜ್ಯಸಭೆಯಲ್ಲಿ 13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ ಶುಕ್ರವಾರ ಮುಂಜಾನೆ ಈ ಶಾಸನವು ಅನುಮೋದನೆಗೊಂಡಿತ್ತು. ಬಳಿಕ ಸಂಸತ್ತು ಮಸೂದೆಯನ್ನು ಅಂಗೀಕರಿಸಿತ್ತು. ಚರ್ಚೆಯಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಮಸೂದೆಯನ್ನು “ಮುಸ್ಲಿಂ ವಿರೋಧಿ” ಮತ್ತು “ಅಸಂವಿಧಾನಿಕ” ಎಂದು ಟೀಕಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಇನ್‌ಸ್ಟಾ ಹೆಲ್ಪ್’ -ಗೃಹ ಕಾರ್ಮಿಕರನ್ನು ಮತ್ತಷ್ಟು ಅಭದ್ರತೆಗೆ ದೂಡುವ ಅಪಾಯ
ಮಸೂದೆಗೆ ರಾಜ್ಯಸಭೆಯ 128 ಸದಸ್ಯರು ಪರ ಹಾಗೂ 95 ಸದಸ್ಯರು ವಿರೋಧಿಸಿ ಮತ ಚಲಾಯಿಸಿದ್ದರು. ಅದಕ್ಕೂ ಮುನ್ನ ಗುರುವಾರ ಮುಂಜಾನೆ ಲೋಕಸಭೆಯಲ್ಲಿ 288 ಸದಸ್ಯರು ಮಸೂದೆಗೆ ಬೆಂಬಲಿಸಿದರೆ, 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದರು.
ಅಲ್ಲದೆ, ಸಂಸತ್ತು ಮುಸಲ್ಮಾನ ವಕ್ಫ್ (ಪುನರಾವರ್ತಿತ) ಮಸೂದೆಯನ್ನೂ ಸಹ ಅಂಗೀಕರಿಸಿತ್ತು. ಈ ಮಸೂದೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. ಇದೀಗ, ರಾಷ್ಟ್ರಪತಿಗಳು ತಮ್ಮ ಅಂಕಿತ ಹಾಕಿದ ಬಳಿಕ, ಅದೂ ಸಹ ಕಾನೂನಾಗಿ ಮಾರ್ಪಟ್ಟಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳ ಸಲ್ಲಿಕೆ
ವಕ್ಫ್ (ತಿದ್ದುಪಡಿ) ಮಸೂದೆ ಮಸೂದೆಯ ಸಿಂಧುತ್ವವನ್ನು ಪ್ರಶ್ನಿಸಿ, ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಸೂದೆಯು ವಕ್ಫ್ ಆಸ್ತಿಗಳು ಮತ್ತು ಅವುಗಳ ನಿರ್ವಹಣೆಯ ಮೇಲೆ “ಅನಿಯಂತ್ರಿತ ನಿರ್ಬಂಧ” ವಿಧಿಸುತ್ತದೆ. ಹಾಗೂ ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಎಂದು ಜಾವೇದ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.