ಪ್ರೇಮ ಸಂಬಂಧ ಹೊಂದಿದ್ದ ಕಾರಣಕ್ಕೆ ಪೋಷಕರು ಗದರಿಸಿದ್ದು, ಇದರಿಂದ ಮನನೊಂದು 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ನಂದಪುರ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ರೇಶು ಪಾಸ್ವಾನ್ ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | 29ನೇ ಮಹಡಿಯಿಂದ ಜಿಗಿದು12 ವರ್ಷದ ಬಾಲಕಿ ಆತ್ಮಹತ್ಯೆ
ಈ ಬಗ್ಗೆ ಮಾಹಿತಿ ನೀಡಿದ ಬೈರಿಯಾ ಉಪ ಪೊಲೀಸ್ ವರಿಷ್ಠಾಧಿಕಾರಿ ಫಹೀಮ್ ಖುರೇಷಿ, “ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಪ್ರೇಮ ಸಂಬಂಧ ಹೊಂದಿದ್ದ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಕ್ಕಾಗಿ ಆಕೆಯ ಪೋಷಕರು ಇತ್ತೀಚೆಗೆ ಗದರಿಸಿದ್ದರು” ಎಂದು ತಿಳಿದುಬಂದಿದೆ.
ಶನಿವಾರ ಮಧ್ಯಾಹ್ನ, ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ಬಾಲಕಿಯ ತಾಯಿ ನೋಡಿದಾಗ ಬಾಲಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನೆ ನಡೆದ ಸಮಯದಲ್ಲಿ ಕಟ್ಟಡ ಕಾರ್ಮಿಕರಾದ ಬಾಲಕಿಯ ತಂದೆ ಕೂಲಿ ಕೆಲಸಕ್ಕೆ ಹೋಗಿದ್ದರು ಎಂದು ಹೇಳಲಾಗಿದೆ.
ಪೋಷಕರು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಡಿಎಸ್‌ಪಿ ಖುರೇಷಿ ಹೇಳಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಇದರಿಂದ ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
