ಬಳ್ಳಾರಿ ನಗರದ ರಾಣಿತೋಟ ಪ್ರದೇಶದಲ್ಲಿ ವೆಂಕಟೇಶ್ ಎಂಬುವವರ ಕೊಲೆ ಪ್ರಕರಣ ಸಂಬಂಧ ಆತನ ಪತ್ನಿ ಹಾಗೂ ಪತ್ನಿಯ ಪ್ರಿಯಕರ ಸೇರಿದಂತೆ 11 ಮಂದಿಯನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ ಜೆ ಶೋಭಾರಾಣಿ ಮಾತನಾಡಿ, “ಏಪ್ರಿಲ್ 4ರಂದು ವೆಂಕಟೇಶ್ ಪತ್ನಿ ನೀಲವೇಣಿ, ʼದುಷ್ಕರ್ಮಿಗಳು ನನ್ನ ಪತಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆʼ ಎಂದು ದೂರು ಕೊಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಕೈಗೊಂಡಾಗ ವೆಂಕಟೇಶ್ ಕೊಲೆಯಲ್ಲಿ ಪತ್ನಿ ನೀಲವೇಣಿಯ ಕೈವಾಡ ಇರುವುದೂ ತಿಳಿದುಬಂದಿದೆ” ಎಂದರು.
“ನೀಲವೇಣಿ ಮತ್ತು ಈ ಪ್ರಕರಣದ ಎರಡನೇ ಆರೋಪಿ ಆನಂದ್ ಸೇರಿ ಶಾಮಿಯಾನದ ವ್ಯವಹಾರ ನಡೆಸುತ್ತಿದ್ದರು. ಇಬ್ಬರ ನಡುವೆ ಆಪ್ತ ಸಂಬಂಧ ಇತ್ತು. ಹೀಗಾಗಿ ಇಬ್ಬರ ಮೇಲೆ ವೆಂಕಟೇಶ್ಗೆ ಅನುಮಾನವಿದ್ದು, ಪದೇ ಪದೆ ಈ ವಿಚಾರವಾಗಿ ಜಗಳ ನಡೆಯುತ್ತಿತ್ತೆಂದು ಮಾಹಿತಿ ಬಂದಿದೆ. ಏಪ್ರಿಲ್ 3ರಂದು ವೆಂಕಟೇಶ್ ಮನೆಯಲ್ಲಿ ಕಾರ್ಯಕ್ರಮವಿತ್ತು. ಅಂದು ಅವರು ಸಂಬಂಧಿಕರ ಮುಂದೆ ಈ ವಿಚಾರವಾಗಿ ಗಲಾಟೆ ಮಾಡಿದ್ದರು. ನಂತರ ನೀಲವೇಣಿ ಮತ್ತು ಆನಂದ್ ಸೇರಿ ಕೃತ್ಯ ಎಸಗಿರುವುದಾಗಿ ತನಿಖೆಯಲ್ಲಿ ಗೊತ್ತಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಾನೂನು ಬಾಹಿರ ಚಟುವಟಿಕೆ : ಮಾರ್ಚ್ ತಿಂಗಳಲ್ಲಿ 189 ಪ್ರಕರಣ; 431 ಆರೋಪಿಗಳ ಬಂಧನ
“ಈ ಪ್ರಕರಣದಲ್ಲಿ ನೀಲವೇಣಿ, ಆನಂದ್, ಮೊಹಮ್ಮದ್ ಗೌಸ್, ಶಿವಶಂಕರ್ ಅಲಿಯಾಸ್ ಚಿರು, ಮೊಹಮ್ಮದ್ ಶಾಯಿದ್ ಅಲಿಯಾಸ್ ಜಂಗ್ಲಿ, ದೂದ್ದ, ಮೊಹಮ್ಮದ್ ಶರೀಫ್, ಮೊಹಮ್ಮದ್ ಆಸೀಫ್ ಮತ್ತು ಮೊಹಮ್ಮದ್ ಸೊಹೇಲ್ ಎಂಬುವರನ್ನು ಬಂಧಿಸಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಎರಡು ಬೈಕ್, ಒಂದು ಸ್ಕೂಟರ್, ಐದು ಮೊಬೈಲ್, ಎರಡು ಮಚ್ಚು ಸೇರಿದಂತೆ ಕೃತ್ಯಕ್ಕೆ ಬಳಸಿದ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದರು.