ಬಿಜೆಪಿ ಹಿರಿಯ ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್ ಪ್ರಮುಖ ಆರೋಪಿಯಾಗಿರುವ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಎ ಕೆ ಲಹೋಟೆ ಅವರನ್ನು ವರ್ಗಾಯಿಸಲಾಗಿದೆ. ನ್ಯಾಯಾಲಯ ಈ ಪ್ರಕರಣದ ತೀರ್ಪು ನೀಡಲು ಇನ್ನು ಕೆಲವೇ ದಿನಗಳು ಇರುವಾಗ ನ್ಯಾಯಾಧೀಶರ ವರ್ಗಾವಣೆಯಾಗಿದೆ. ಕಳೆದ 17 ವರ್ಷಗಳಲ್ಲಿ ಐದನೇ ಬಾರಿ ಈ ರೀತಿ ನಡೆದಿದೆ.
ಬಾಂಬೆ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್, ಲಹೋಟಿ ಮತ್ತು ಇತರ ನ್ಯಾಯಾಧೀಶರ ವರ್ಗಾವಣೆ ಆದೇಶವನ್ನು ಹೊರಡಿಸಿದೆ. ಜೂನ್ 9ರಂದು ಬೇಸಿಗೆ ರಜೆಯ ನಂತರ ನ್ಯಾಯಾಲಯಗಳು ಮತ್ತೆ ತೆರೆದಾಗ ಈ ಆದೇಶ ಜಾರಿಗೆ ಬರಲಿದೆ. ನ್ಯಾಯಾಧೀಶರನ್ನು ನಾಸಿಕ್‌ಗೆ ವರ್ಗಾಯಿಸಲಾಗಿದೆ.
ಇದನ್ನು ಓದಿದ್ದೀರಾ? ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ; ದ್ವೇಷ ಭಾಷಣದಲ್ಲೇ ಫೇಮಸ್ ಆಗಿದ್ದವರು ಔಟ್!
ಇನ್ನು ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಿಚಾರಣೆ ಮುಕ್ತಾಯವಾಗಿರುವ ಪ್ರಕರಣಗಳು ತೀರ್ಪನ್ನು ಶೀಘ್ರವೇ ನೀಡುವಂತೆ ತಿಳಿಸಲಾಗಿದೆ. ಎಲ್ಲಾ ಭಾಗಶಃ ವಿಚಾರಣೆಗಳ ದಾಖಲೆಗಳನ್ನು ಮುಂದಿನ ನ್ಯಾಯಾಧೀಶರಿಗೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.
17 ವರ್ಷಗಳ ಹಿಂದಿನ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನಾಲ್ವರು ನ್ಯಾಯಾಧೀಶರು ಈಗಾಗಲೇ ವರ್ಗಾವಣೆಯಾಗಿದ್ದಾರೆ. ಇದೀಗ ವರ್ಗಾವಣೆಗೊಳ್ಳುತ್ತಿರುವ ಐದನೇ ನ್ಯಾಯಾಧೀಶರಾಗಿದ್ದಾರೆ.
ಈ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಅವರು ಆರೋಪಿಗಳಾಗಿದ್ದಾರೆ. ಇವರೆಲ್ಲರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ದೂರು ದಾಖಲಾಗಿದ್ದು, 17 ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇದೆ.
ನ್ಯಾಯಾಧೀಶರ ವರ್ಗಾವಣೆಯಿಂದ ಈ ಪ್ರಕರಣದ ವಿಚಾರಣೆ ಇನ್ನಷ್ಟೂ ತಡವಾಗುತ್ತಿದೆ, ನ್ಯಾಯ ಸಿಗುವುದು ವಿಳಂಬವಾಗುತ್ತಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ವಿಶೇಷ ನ್ಯಾಯಾಧೀಶರ ನೇಮಕ ವಿಸ್ತರಣೆಗೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮಾಲೆಗಾಂವ್ ಪ್ರಕರಣ | ವಿಚಾರಣೆಗೆ ಬಾರದಿದ್ದರೆ ಕ್ರಮ; ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್‌ಗೆ ಕೋರ್ಟ್ ಎಚ್ಚರಿಕೆ
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಸಂತ್ರಸ್ತರ ಪರ ವಕೀಲ ಶಾಹಿದ್ ನದೀಮ್, “ನಾವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ತೀರ್ಪು ಬರುವವರೆಗೆ ಅವರ (ನ್ಯಾಯಾಧೀಶರ) ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಕೋರಿ ನಾವು ಈ ಹಿಂದೆ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಸಲ್ಲಿಸಿದ್ದೇವೆ” ಎಂದಿದ್ದಾರೆ.
ಶನಿವಾರ ನಡೆದ ಕೊನೆಯ ವಿಚಾರಣೆಯಲ್ಲಿ, ನ್ಯಾಯಾಧೀಶ ಲಹೋಟಿ ಅವರು ಏಪ್ರಿಲ್ 15ರೊಳಗೆ ಉಳಿದ ವಾದಗಳನ್ನು ಪೂರ್ಣಗೊಳಿಸಲು ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳಿಗೆ ನಿರ್ದೇಶನ ನೀಡಿದರು. ಅದಾದ ಬಳಿಕ ಈ ಪ್ರಕರಣದ ತೀರ್ಪು ನೀಡುವ ಸಾಧ್ಯತೆಯಿತ್ತು. ಆದರೆ ಅದಕ್ಕೂ ಮುನ್ನವೇ ನ್ಯಾಯಾಧೀಶರ ವರ್ಗಾವಣೆಯಾಗಿದೆ. ಈ ಪ್ರಕರಣದ ತನಿಖೆ ನಡೆಸುವವರು ತೀರ್ಪು ನೀಡುವುದಕ್ಕೂ ಮುನ್ನವೇ ವರ್ಗಾವಣೆಯಾಗುವುದು ಸದ್ಯ ಅನುಮಾನ ಹುಟ್ಟಿಸಿದೆ.
ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮುಂಬೈನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಮಾಲೆಗಾಂವ್ ಪಟ್ಟಣದ ಮಸೀದಿ ಬಳಿ 2008ರ ಸೆಪ್ಟೆಂಬರ್ 29ರಂದು ಮೋಟಾರ್ ಸೈಕಲ್‌ಗೆ ಕಟ್ಟಲಾಗಿದ್ದ ಸ್ಪೋಟಕವು ಸ್ಪೋಟಗೊಂಡು ಆರು ಮಂದಿ ಸಾವನ್ನಪ್ಪಿದ್ದರು. ಸುಮಾರು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ವಿಚಾರಣೆಯ ಸಮಯದಲ್ಲಿ ಪ್ರಾಸಿಕ್ಯೂಷನ್ 323 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದರೆ, ಪ್ರತಿವಾದಿ 8 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದರು. 2011ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ವರ್ಗಾಯಿಸುವ ಮೊದಲು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪ್ರಕರಣದ ತನಿಖೆ ನಡೆಸುತ್ತಿತ್ತು.
