ಕಳೆದ ವರ್ಷ ಈ ದೇಶವನ್ನು ಕಾಡಿದ ಬಹುದೊಡ್ಡ ಹವಾಮಾನ ಸವಾಲು ʼಹೀಟ್ ಸ್ಟ್ರೋಕ್ʼ. ಮಳೆ-ಪ್ರವಾಹದಿಂದ ನೊಂದವರ ವಿವರ ಸುಲಭವಾಗಿ ಸಿಗುತ್ತದೆ. ಆದರೆ ಹೀಟ್ ಸ್ಟ್ರೋಕ್ ನಿಂದ ಕಳೆದ ವರ್ಷ ನಮ್ಮ ದೇಶದಲ್ಲಿ 700ಕ್ಕೂ ಅಧಿಕ ಮಂದಿ ಪ್ರಾಣ ತೆತ್ತರು, 40ಸಾವಿರಕ್ಕೂ ಅಧಿಕ ಮಂದಿ ಇದರಿಂದಾಗಿ ಸಮಸ್ಯೆ ಎದುರಿಸಿದರು ಎನ್ನುವ ಮಾಹಿತಿ ನಮ್ಮಲ್ಲಿ ಬಹುತೇಕರಿಗೆ ಇಲ್ಲ. ಹವಾಮಾನ ವೈಪರೀತ್ಯದ ಈ ಸವಾಲು ಈ ಬೇಸಗೆಯಲ್ಲಿ ಮತ್ತೆ ತಲೆದೋರಿದೆ. ಈ ಬಾರಿ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಕೊಡಗು, ಬೆಂಗಳೂರು, ಮೈಸೂರು ಮತ್ತಿತರ ಜಿಲ್ಲೆಗಳು ದಾಖಲೆ ಪ್ರಮಾಣದ ಉಷ್ಣತೆ ದಾಖಲಿಸಿದವು. ಇನ್ನು ಮೇ ತಿಂಗಳಿನಲ್ಲಿ ಮಳೆ ಬಾರದಿದ್ದರೆ ಉಷ್ಣತೆ ಇನ್ನಷ್ಟು ಏರಬಹುದು ಎನ್ನುವ ಭೀತಿ ಎಲ್ಲಡೆ ಇದೆ. ಈ ಹಿನ್ನೆಲೆಯಲ್ಲಿ ಹೀಟ್ ಸ್ಟ್ರೋಕ್ ಸುದ್ದಿಯಲ್ಲಿದೆ.
ಒಂದು ಪ್ರದೇಶದಲ್ಲಿ ಒಂದು ನಿರ್ದಿಷ್ಟವಾದ ಋತುಮಾನದಲ್ಲಿ ಸಾಮಾನ್ಯವಾಗಿ ನಿರೀಕ್ಷಿಸಲಾಗುವ ತಾಪಮಾನ ಅಥವಾ ಆ ಪ್ರದೇಶದಲ್ಲಿ ಕಂಡುಬರುವ ತಾಪಮಾನಕ್ಕಿಂತ, ಅಸಾಧಾರಣವಾಗಿ ಹೆಚ್ಚುವ ತಾಪಮಾನವನ್ನು ʻಬಿಸಿಗಾಳಿʼ (ಹೀಟ್ ವೇವ್ಸ್) ಎಂದು ಕರೆಯಲಾಗುತ್ತದೆ. ಆದರೆ ಈ ಪ್ರದೇಶ ಬಿಸಿಗಾಳಿಗೆ ಒಳಗಾಗಿದೆಯೇ ಎಂದು ನಿರ್ಧರಿಸಲು ಅಗತ್ಯವಿರುವ ನಿಯತಾಂಕಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಾ ಹೋಗುತ್ತದೆ. ಒಂದು ಪ್ರದೇಶದ ಭೌಗೋಳಿಕ ಅಂಶಗಳು, ಆ ಪ್ರದೇಶದ ಗರಿಷ್ಠ ತಾಪಮಾನ ಮತ್ತು ಆರ್ದ್ರತೆ, ಸಮುದ್ರದ ತಾಪಮಾನ, ಇತ್ಯಾದಿಗಳನ್ನು ಆಧರಿಸಿ, ಆ ಪ್ರದೇಶ ಬಿಸಿಗಾಳಿಗೆ ಒಳಗಾಗಿದೆಯೇ ಅಥವಾ ಇಲ್ಲವೇ ಎಂದು ನಿರ್ಧರಿಸಬಹುದು.
ಭಾರತದ ಮಟ್ಟಿಗೆ ಹೇಳುವುದಾದರೆ ಬಯಲು ಪ್ರದೇಶಗಳಲ್ಲಿಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾದರೆ, ಕರಾವಳಿ ಪ್ರದೇಶದಲ್ಲಿನ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಮತ್ತು ಪರ್ವತ ಪ್ರದೇಶಗಳಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ತಲುಪಿದರೆ ಆ ಪ್ರದೇಶ ಬಿಸಿಗಾಳಿಗೆ ತುತ್ತಾಗಿದೆ ಎನ್ನಬಹುದು. ಸಾಮಾನ್ಯವಾಗಿ ಗರಿಷ್ಟ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿದರೆ ಅದನ್ನು ಬಿಸಿಗಾಳಿ ಎಂದು ಮತ್ತು ಈ ತಾಪಮಾನ 47 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿದರೆ ಅದನ್ನು ತೀವ್ರ ಬಿಸಿಗಾಳಿ ಎಂದು ಘೋಷಿಸಲಾಗುತ್ತದೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಜೂನ್ ವೇಳೆಗೆ ಕಾಣಿಸಿಕೊಳ್ಳುವ ಈ ಬಿಸಿಗಾಳಿ ಮೇ ಹೊತ್ತಿಗೆ ತೀವ್ರವಾಗಿರುತ್ತದೆ.
ಸ್ವಾಭಾವಿಕವಾಗಿಯೇ ಭಾರತವು ಹೆಚ್ಚಿನ ತಾಪಮಾನ ಹೊಂದಿರುವ ದೇಶ. ಹೀಗಾಗಿ, ಇಲ್ಲಿ ಪ್ರತಿ ಬೇಸಿಗೆಯ ತಾಪಮಾನವು ಈ ಋತುವಿನ ಎಲ್ಲ ದಿನಗಳು ಅಲ್ಲದಿದ್ದರೂ ಕೆಲವು ದಿನಗಳಾದರೂ ʻಬಿಸಿಗಾಳಿʼಯಿಂದ ತತ್ತರ ಎಂದು ಕರೆಯುವಷ್ಟು ಹೆಚ್ಚಾಗಿರುತ್ತದೆ. ಪ್ರಸ್ತುತ ಜಾಗತಿಕ ತಾಪಮಾನ ಏರಿಕೆಯಿಂದಾಗಿ, ದೇಶದ ತಾಪಮಾನವು ಬಿಸಿಗಾಳಿಯಾಗಿ ಪರಿವರ್ತನೆಯಾಗುವುದು ಸ್ವಾಭಾವಿಕ ಅನ್ನುವಷ್ಟರ ಮಟ್ಟಿಗೆ ಬದಲಾಗಿದೆ. ಇವು ದೀರ್ಘಕಾಲದವರೆಗೂ ಇರುವುದಲ್ಲದೆ ಈ ಹಿಂದೆ ಬಿಸಿಗಾಳಿಗೆ ಒಳಗಾಗದ ಪ್ರದೇಶಗಳಲ್ಲಿಯೂ ಈ ವಿದ್ಯಮಾನ ಸಂಭವಿಸುತ್ತದೆ. ಆದ್ದರಿಂದ, ಭವಿಷ್ಯದಲ್ಲಿ ಬಿಸಿಗಾಳಿಯ ಸ್ಥಿತಿಯನ್ನು ನಾವು ಹೆಚ್ಚಾಗಿ ನಿರೀಕ್ಷಿಸಬಹುದು ಎಂದು ಸಂಶೋಧಕರು ಎಚ್ಚರಿಸುತ್ತಿದ್ದಾರೆ.
ಒಂದು ಪ್ರದೇಶದಲ್ಲಿ ಒಣಗಾಳಿ ಹೆಚ್ಚಿದ್ದಾಗ, ಗಾಳಿಯಲ್ಲಿ ತೇವಾಂಶದ ಪ್ರಮಾಣ ಸಾಕಷ್ಟು ಇಲ್ಲದಿದ್ದಾಗ, ಮತ್ತು ಆ ಪ್ರದೇಶವು ಮೋಡ ರಹಿತವಾಗಿದ್ದಾಗ ಅದು ಬಿಸಿಗಾಳಿಗೆ ಅನುಕೂಲಕರ ವಾತಾವರಣವಾಗಿ ಪರಿಣಮಿಸುತ್ತದೆ. ಭಾರತದಲ್ಲಿ ಈ ಬಿಸಿಗಾಳಿ ಬೀಸುವ ಆವರ್ತನೆ(ಸರದಿ), ಅದು ಬೀಸುವ ಅವಧಿ ಮತ್ತು ಅದರ ತೀವ್ರತೆ ವರ್ಷಕಳೆದಂತೆ ಇನ್ನೂ ಹೆಚ್ಚಾಗಲಿದೆ ಎಂದು ಪುಣೆಯ ಐಎಮ್‌ಡಿಯ ವಿಜ್ಞಾನಿಗಳು ತಮ್ಮ ಸಂಶೋಧನಾ ಪ್ರಬಂಧವೊಂದರಲ್ಲಿ ಉಲ್ಲೇಖಿಸುತ್ತಾರೆ.

ಹೆಚ್ಚುತ್ತಿರುವ ತಾಪಮಾನ ಮತ್ತು ʻನಗರ ಉಷ್ಣ ದ್ವೀಪ ಪ್ರಭಾವʼ
ಹೆಚ್ಚುತ್ತಿರುವ ತಾಪಮಾನವು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದಾಗ ಹೆಚ್ಚಾಗಿ ನಗರ ಕೇಂದ್ರೀಕೃತವಾಗುತ್ತಿದ್ದು ಇದನ್ನು ʻನಗರ ಉಷ್ಣ ದ್ವೀಪ ಪ್ರಭಾವʼ ಎನ್ನಲಾಗುತ್ತದೆ. ನಗರ ನೆಲದ ಮೇಲ್ಮೈಯ ಗುಣಲಕ್ಷಣಗಳು (ಡಾಂಬರು ಮಾರ್ಗ), ಹಸಿರುಮನೆ ಅನಿಲ ಹೊರಸೂಸುವಿಕೆ, ಮತ್ತು ವಾಯು ಮಾಲಿನ್ಯಗಳು ಈ ʻನಗರ ಉಷ್ಣ ದ್ವೀಪ ಪ್ರಭಾವʼ ಕ್ಕೆ ಪ್ರಮುಖ ಕಾರಣೀಭೂತ ಅಂಶಗಳಾಗಿವೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಗಾಜಿನ ಮುಂಭಾಗಗಳನ್ನು ಹೊಂದಿರುವ ಬಹುಮಹಡಿ ಕಟ್ಟಡಗಳು ನಗರ ತಾಪಮಾನವನ್ನು ಹೆಚ್ಚಿಸುತ್ತಿವೆ ಮತ್ತು ತಮ್ಮ ಕಟ್ಟಡದಲ್ಲಿ ಹವಾನಿಯಂತ್ರಣಕ್ಕಾಗಿ ಹತ್ತು ಪಟ್ಟು ಹೆಚ್ಚು ವಿದ್ಯುತ್ ಬಳಸುತ್ತಿವೆ ಎಂಬ ಅಂಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯೂ ಗಮನಿಸಿದೆ.
ದೆಹಲಿಯಂತಹ ನಗರಗಳಲ್ಲಿನ ತಾಪಮಾನ ತುಂಬಾ ಬಿಸಿಯಾಗಿರುವುದರಿಂದ ರಾತ್ರಿಯ ವೇಳೆಯೂ ಅಲ್ಲಿನ ವಾತಾವರಣ ಸಾಕಷ್ಟು ತಣ್ಣಗಾಗುತ್ತಿಲ್ಲ, ನಗರ ಕೇಂದ್ರಗಳಲ್ಲಿ, ವಿಶೇಷವಾಗಿ ರಾತ್ರಿಯ ಸಮಯದಲ್ಲಿ, ಸುತ್ತಮುತ್ತಲಿನ ಪ್ರದೇಶಗಳಿಗಿಂತ ಹಲವಾರು ಡಿಗ್ರಿಗಳಷ್ಟು ಹೆಚ್ಚಿನ ಉಷ್ಣತೆ ಇರುವುದರಿಂದ ಇದು ವಾತಾವರಣ ತಣ್ಣಗಾಗುವ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತಿದೆ ಎಂದು ವರದಿಗಳು ಹೇಳುತ್ತವೆ.
ಬಹುತೇಕ ಭಾರತದ ಎಲ್ಲಾ ನಗರಗಳು ಈ ಬಿಸಿಗಾಳಿಯ ದಾಳಿಗೆ ತುತ್ತಾಗಿವೆ. ಇದರಿಂದಾಗಿ ನಗರದ ಜನರು ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿರುವುದಷ್ಟೇ ಅಲ್ಲದೆ ಅವರ ಕಾರ್ಯ ಕ್ಷಮತೆಯೂ ಕುಂದುತ್ತಿದೆ. ನೀರಿನ ಅಭಾವ ಮತ್ತು ವಾಯು ಮಾಲಿನ್ಯದಂತಹ ಸಮಸ್ಯೆಗಳು ನಗರಗಳಲ್ಲಿ ಉಲ್ಬಣಿಸುತ್ತಿವೆ.
ಬಿಸಿಗಾಳಿ ಮತ್ತು ಹೀಟ್ ಸ್ಟ್ರೋಕ್ (Heat stroke)
ಬಿಸಿಗಾಳಿಯಿಂದಾಗಿ ಹಗಲು ರಾತ್ರಿಗಳೆರಡೂ ಅವಧಿಯಲ್ಲೂ ಹೆಚ್ಚುತ್ತಿರುವ ತಾಪಮಾನವು ಮಾನವನ ದೇಹ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಸಿಗಾಳಿಗೆ ಅಥವಾ ಹೆಚ್ಚಿನ ಪ್ರಮಾಣದ ಶಾಖಕ್ಕೆ ದೇಹವು ಒಡ್ಡಿಕೊಳ್ಳುವುದು ಹಲವು ರೀತಿಯ ಅನಾರೋಗ್ಯ ಹಾಗು ಸಾವಿಗೂ ಕಾರಣವಾಗಬಹುದು. ವ್ಯಕ್ತಿಗಳ ವಯಸ್ಸು ಹೆಚ್ಚಾದಂತೆ ಉಸಿರಾಟಕ್ಕೆ, ಮೂತ್ರಪಿಂಡಕ್ಕೆ ಮತ್ತು ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುವಿಕೆ, ಮಧುಮೇಹ, ಬುದ್ಧಿಮಾಂದ್ಯತೆ, ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಹೀಟ್ ಸ್ಟ್ರೋಕ್ ದೇಹದ ಉಷ್ಣತೆ ಹೆಚ್ಚುವುದರಿಂದ ಕಾಣಿಸಿಕೊಳ್ಳುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಹೆಚ್ಚಿನ ತಾಪಮಾನಕ್ಕೆ ದೇಹವನ್ನು ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಹೀಟ್ ಸ್ಟ್ರೋಕ್ ಸಂಭವಿಸುತ್ತದೆ. ದೇಹದ ಉಷ್ಣತೆಯು 104 ಈ (40 ಡಿಗ್ರಿ ಸೆಲ್ಸಿಯಸ್) ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ಏರಿದಾಗ ಒಬ್ಬ ವ್ಯಕ್ತಿ ಹೀಟ್‌ಸ್ಟ್ರೋಕ್‌ಗೆ ಒಳಗಾಗಿದ್ದಾನೆ ಎನ್ನಬಹುದು. ಬೇಸಿಗೆಯ ತಿಂಗಳುಗಳಲ್ಲಿ ಈ ಹೀಟ್ ಸ್ಟ್ರೋಕ್ ಹೆಚ್ಚಾಗಿ ಕಂಡುಬರುತ್ತದೆ.
ದೇಹದ ಉಷ್ಣತೆ ಹೆಚ್ಚಾದಾಗ, ಹೃದಯವು ವೇಗವಾಗಿ ಬಡಿದುಕೊಳ್ಳಲಾರಂಭಿಸುತ್ತದೆ. ತಲೆನೋವು, ವಾಕರಿಕೆ, ಸನ್ನಿ ಮತ್ತು ಸೆಳೆತದಂತಹ ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮೆದುಳಿನಿಂದ ಹೃದಯ, ಕರುಳು, ಮೂತ್ರಪಿಂಡಗಳು, ಯಕೃತ್ತು, ಶ್ವಾಸಕೋಶ ಮತ್ತು ಮೇದೋಜ್ಜೀರಕ ಗ್ರಂಥಿಯವರೆಗೆ ಪ್ರತಿಯೊಂದು ಮಾನವನ ಅಂಗದ ಮೇಲೆ ಬಿಸಿಗಾಳಿಯು ಪರಿಣಾಮ ಬೀರುತ್ತವೆ. ಈ ಹೀಟ್ ಸ್ಟ್ರೋಕ್ ತುರ್ತು ಆರೈಕೆಯ ಅಗತ್ಯವಿದೆ. ಚಿಕಿತ್ಸೆ ನೀಡದಿದ್ದರೆ, ಇದು ಮೆದುಳು, ಹೃದಯ, ಮೂತ್ರಪಿಂಡಗಳು ಮತ್ತು ಸ್ನಾಯುಗಳನ್ನು ತ್ವರಿತವಾಗಿ ಹಾನಿಗೊಳಿಸುತ್ತದೆ. ಚಿಕಿತ್ಸೆ ವಿಳಂಬವಾದಂತೆ ಈ ಅಂಗಗಳ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ, ಇದು ಗಂಭೀರ ಸಮಸ್ಯೆಗಳನ್ನು ಉಂಟುಮಾಡುವ ಅಥವಾ ಸಾವಿನ ಅಪಾಯವನ್ನು ಹೆಚ್ಚಿಸುವ ಸಂದರ್ಭಗಳು ಹೆಚ್ಚಿರುತ್ತದೆ ಎಂದು ಮಾನವನ ಆರೋಗ್ಯದ ಮೇಲೆ ಹೀಟ್ ಸ್ಟ್ರೋಕ್‌ನ ಪರಿಣಾಮ ಕುರಿತ ಸಂಶೋಧನಾ ಪ್ರಬಂಧದಲ್ಲಿ ಉಲ್ಲೇಖಿಸಲಾಗಿದೆ.

ಹೀಟ್ ಸ್ಟ್ರೋಕ್ ನಲ್ಲಿ ಎರಡು ವಿಧಗಳಿವೆ ಎಂದು ವೈದ್ಯರು ಹೇಳುತ್ತಾರೆ. ಅವುಗಳಲ್ಲಿ ಮೊದಲನೆಯದು ಕ್ಲಾಸಿಕಲ್ (ಪ್ರಮಾಣಭೂತ) ಇದು ಗರ್ಭಿಣಿಯರು, ಈಗಾಗಲೇ ಔಷಧಗಳನ್ನು ಸೇವಿಸುತ್ತಿರುವವರು, ವೃದ್ಧರು ಮತ್ತು ಒಂದಕ್ಕಿಂತ ಹೆಚ್ಚು ಅನಾರೋಗ್ಯ ಸಮಸ್ಯೆಗಳನ್ನು ಹೊಂದಿರುವವರನ್ನು ಒಳಗೊಂಡಿರುತ್ತದೆ ಮತ್ತು ಅವರ ಮೇಲೆ ಪರಿಣಾಮ ಬೀರುತ್ತದೆ. ಎರಡನೆಯದು ದೇಹದ ಒಳಗಿನಿಂದ ಉತ್ಪತ್ತಿಯಾಗುವ ಶಾಖವನ್ನು ಒಳಗೊಂಡಿರುವ ಎಕ್ಸರ್ಶನಲ್ ಅಥವಾ ಶ್ರಮದ/ ಪ್ರಯಾಸದ ಕೆಲಸದಿಂದ ಉಂಟಾಗುವ ಹೀಟ್‌ಸ್ಟ್ರೋಕ್. ಹೆಚ್ಚಿನ ಸಂಖ್ಯೆಯ ಜನರು ಈ ಎರಡನೇ ರೀತಿಯ ಹೀಟ್ ಸ್ಟ್ರೋಕ್‌ನ ಹೊಡೆತದಿಂದ ಬಳಲುತ್ತಿದ್ದಾರೆ. ಹಣ್ಣು ಮಾರಾಟಗಾರರು, ಕಾರ್ಖಾನೆ ಕಾರ್ಮಿಕರು, ಕೂಲಿ ಕಾರ್ಮಿಕರು… ಹೀಗೆ ಹವಾಮಾನದ ವೈಪರೀತ್ಯಗಳ ನಡುವೆಯೇ ಕೆಲಸ ಮಾಡಬೇಕಾದವರನ್ನು ಇದು ಹೆಚ್ಚಾಗಿ ಘಾಸಿಗೊಳಿಸುತ್ತದೆ.
ದೆಹಲಿಯಲ್ಲಿ ಈ ಬಿಸಿಗಾಳಿಯಿಂದಾಗಿ ಬೀದಿ ವ್ಯಾಪಾರಿಗಳು ಹೇಗೆ ಬಳಲುತ್ತಿದ್ದಾರೆ ಎಂದು ಗ್ರೀನ್‌ಪೀಸ್ ಇಂಡಿಯಾ ಮತ್ತು ನ್ಯಾಷನಲ್ ಹಾಕರ್ಸ್ ಫೆಡರೇಶನ್ ನಡೆಸಿದ ಸಮೀಕ್ಷೆಯು ದಿನಕ್ಕೆ ಸರಾಸರಿ 12 ಗಂಟೆಗಳ ಕಾಲ ಹೊರಾಂಗಣದಲ್ಲಿ ಕೆಲಸ ಮಾಡುವ ಬೀದಿ ವ್ಯಾಪಾರಿಗಳು ನಿರ್ಜಲೀಕರಣ, ಹೆಚ್ಚಿದ ತಾಪಮಾನದಿಂದಾಗಿ ಬಳಲಿಕೆ ಮತ್ತು ಬಿಸಿಗಾಳಿಯ ಮಾರಕ ಹೊಡೆತಕ್ಕೆ ಗುರಿಯಾಗುತ್ತಾರೆ ಎನ್ನುತ್ತದೆ.
ಬಿಸಿಗಾಳಿ ಸಂಬಂಧಿತ ವಿಪತ್ತು ನಿರ್ವಹಣೆ
ಕಳೆದ ವರ್ಷ ಬಿಸಿಗಾಳಿಯ ಪರಿಣಾಮದಿಂದಾಗಿ 360 ಕ್ಕೂ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವರದಿಗಳು ಹೇಳುತ್ತವೆ. ಆದರೆ ಲಾಭರಹಿತ ಸ್ವಯಂ ಸೇವಾ ಸಂಸ್ಥೆ ಹೀಟ್‌ವಾಚ್ ಬಿಡುಗಡೆಗೊಳಿಸಿರುವ ʻಶಾಖಕ್ಕೆ ತತ್ತರ: 2024 ರಲ್ಲಿ ಭಾರತದಲ್ಲಿ ಸಂಭವಿಸಿದ ಬಿಸಿಗಾಳಿ ಸಾವಿನ ಸುದ್ದಿಯ ವಿಶ್ಲೇಷಣೆʼ (Struck by Heat: A News Analysis of Heatstroke Deaths in India in 2024)ವರದಿಯು ಈ ಅಧಿಕೃತ ವರದಿಯನ್ನು ಅಲ್ಲಗಳೆಯುತ್ತದೆ. ಭಾರತದಲ್ಲಿ 2024 ರಲ್ಲಿ ಬಿಸಿಗಾಳಿಯಿಂದಾಗಿ ಸಂಭವಿಸಿರುವ ಸಾವುಗಳ ಸಂಖ್ಯೆ 700 ಕ್ಕೂ ಹೆಚ್ಚು ಎನ್ನುತ್ತದೆ. ಈ ವರದಿಯು ಬಿಸಿಗಾಳಿಗೆ 17 ರಾಜ್ಯಗಳಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಒಟ್ಟು 733 ಮತ್ತು ಬಿಸಿಲಿನ ಝಳಕ್ಕೆ 40,000 ಕ್ಕೂ ಹೆಚ್ಚು ಜನರು ಹೀಟ್‌ಸ್ಟ್ರೋಕ್‌ಗೆ ಒಳಗಾಗಿದ್ದಾರೆ ಎಂಬ ಎಂಬ ಆತಂಕಕಾರಿ ಅಂಕಿ ಅಂಶಗಳನ್ನು ಮುಂದಿಡುತ್ತದೆ. 2024ರ ಮಾರ್ಚ್ ಮತ್ತು ಜೂನ್ ನಡುವೆ, ಭಾರತದಲ್ಲಿ ತಾಪಮಾನ ಏರಿಕೆಯು ದಾಖಲೆಯಯನ್ನೇ ಸಾಧಿಸಿದೆ. ದೇಶದ 37 ನಗರಗಳಲ್ಲಿನ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ಮೀರಿದೆ.
ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಬಿಸಿಗಾಳಿಯನ್ನು ರಾಷ್ಟ್ರೀಯ ವಿಪತ್ತು ನಿಧಿ ಪಡೆಯಲು ಅರ್ಹವಾಗಿರುವ ವಿಪತ್ತು ಎಂದು ಘೋಷಿಸುವಂತೆ ಕೋರಿದೆ. ಈ ಹಿಂದೆ, ಇದೇ ರೀತಿಯ ಪ್ರಸ್ತಾವನೆಯನ್ನು 15 ನೇ ಹಣಕಾಸು ಆಯೋಗದ ಮುಂದೆ ಇಡಲಾಗಿತ್ತು. ಆ ಬೇಡಿಕೆಯನ್ನು ತಿರಸ್ಕರಿಸಿದ ಆಯೋಗ, ರಾಜ್ಯ ಸರ್ಕಾರಗಳು ಅಂತಹ ಪರಿಸ್ಥಿತಿಗಳಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿಯ ಶೇಕಡಾ 10ನ್ನು ಬಿಸಿಗಾಳಿ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಬಳಸಲು ಒಪ್ಪಿಗೆ ಸೂಚಿಸಿದೆ.

ಈ ಬಿಸಿಗಾಳಿ-ಸಂಬಂಧಿತ ವಿಪತ್ತುಗಳನ್ನು ನಿಯಂತ್ರಣದಲ್ಲಿಡಲು ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (National Programme on Climate Change & Human Health/NPCCHH)ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಮೂರು ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿವೆ. ಇವುಗಳಲ್ಲಿ 2021 ರ ಬಿಸಿಗಾಳಿಗೆ ಸಂಬಂಧಿಸಿದ ಅಸ್ವಸ್ಥತೆಗಳ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆ ಮತ್ತು 2024ರಲ್ಲಿ ಹೊಸದಾಗಿ ಸೇರಿಸಲಾದ ತುರ್ತು ತಂಪಾಗಿಸುವಿಕೆ ಮತ್ತು ಬಿಸಿಗಾಳಿಯಿಂದ ಉಂಟಾಗಿರುವ ಸಾವುಗಳ ಶವಪರೀಕ್ಷೆಯ ಮಾರ್ಗಸೂಚಿಗಳು ಸೇರಿವೆ. ವರದಿಯ ಪ್ರಕಾರ, ಆರೋಗ್ಯ ಕ್ಷೇತ್ರದಲ್ಲಿರುವ ಅನೇಕರಿಗೆ ಈ ಪ್ರೋಟೋಕಾಲ್‌ಗಳ ಬಗ್ಗೆ ಹೆಚ್ಚಿನ ಅರಿವಿಲ್ಲ ಮತ್ತು ಹೆಚ್ಚುತ್ತಿರುವ ಬಿಸಿಗಾಳಿ ಅಸ್ವಸ್ಥತೆಯ ಪ್ರಕರಣಗಳನ್ನು ನಿಭಾಯಿಸಲು ಆಸ್ಪತ್ರೆಗಳಲ್ಲಿನ ಮೂಲಸೌಕರ್ಯವೂ ಸಮರ್ಪಕವಾಗಿಲ್ಲ.
ಇದನ್ನೂ ಓದಿ ಭೂಮ್ತಾಯಿ | ಹವಾಮಾನ ಬದಲಾವಣೆಯ ಸುಳಿಯೊಳಗೆ ಸಿಲುಕಿರುವ ಆಹಾರ ಭದ್ರತೆ
ಪ್ರತಿ ವರ್ಷವೂ ಬೇಸಿಗೆಯ ಆರಂಭದಲ್ಲಿ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಮತ್ತು ಇತರೆ ಸಂಬಂಧಿತ ಇಲಾಖೆಗಳು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಿಸಿಗಾಳಿ ಮತ್ತು ಹೀಟ್‌ಸ್ಟ್ರೋಕ್‌ನಿಂದ ಹೇಗೆ ಪಾರಾಗಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಕೈಪಿಡಿಯೊಂದನ್ನು ಆರೋಗ್ಯ ಇಲಾಖೆ, ಮಾಧ್ಯಮ ಮುಂತಾದ ಇಲಾಖೆಗಳಿಗೆ ರವಾನಿಸಿ ಕೈತೊಳೆದುಕೊಳ್ಳುತ್ತವೆ. ವರ್ಷಗಳು ಉರುಳಿದಂತೆ ಹೆಚ್ಚುತ್ತಿರುವ ಸಮಸ್ಯೆಯ ತೀವ್ರತೆಗೆ ಇಲಾಖೆಗಳ ಸ್ಪಂದನೆ ಸಾಕಾಗುತ್ತಿಲ್ಲ.
ಹೆಚ್ಚುತ್ತಿರುವ ತಾಪಮಾನವನ್ನು ತಗ್ಗಿಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಕೋವಿಡ್ ಸಂದರ್ಭದಲ್ಲಿ ದುರ್ಬಲ ವರ್ಗದ (Vulnerable population) ಜನಸಂಖ್ಯೆ( ವಯಸ್ಕರು, ಗರ್ಭಿಣಿಯರು, ಅನಾರೋಗ್ಯ ಸಮಸ್ಯೆಯನ್ನು ಹೊಂದಿರುವವರು)ಯನ್ನು ಪಟ್ಟಿ ಮಾಡಲಾಗಿತ್ತು. ಪ್ರಸ್ತುತ ಆರೋಗ್ಯ ಇಲಾಖೆಯ ಸಹಯೋಗದಿಂದ ಈ ದತ್ತಾಂಶವನ್ನು ಮರುಸಂಗ್ರಹಿಸಿ ಈ ವರ್ಗದ ಜನರನ್ನು ಬಿಸಿಗಾಳಿಯಿಂದ ರಕ್ಷಿಸಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ʻನಗರ ಉಷ್ಣ ದ್ವೀಪ ಪ್ರಭಾವʼ ವನ್ನು ತಗ್ಗಿಸಲು ನಗರ ಯೋಜನೆಗಳ ರೂಪುರೇಷೆಯಲ್ಲಿ ಹವಾಮಾನ ಸಹಿಷ್ಣು ನಗರಗಳಿಗೆ ಸಾಕಷ್ಟು ಆದ್ಯತೆ ನೀಡಬೇಕಿದೆ. ಬಿಸಿಗಾಳಿ ಮತ್ತು ಹೀಟ್‌ಸ್ಟ್ರೋಕ್‌ಗಳ ಬಗ್ಗೆ ತಳಮಟ್ಟದಿಂದ ಜನಜಾಗೃತಿ ಆರಂಭಿಸುವುದು ಆರೋಗ್ಯ ಇಲಾಖೆಗೆ ಆದ್ಯತೆಯಾಗಬೇಕಿದೆ.

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ