ಬೆಳಗಾವಿ ತಾಲ್ಲೂಕಿನ ಅಂಬೇವಾಡಿ ಗ್ರಾಮದಲ್ಲಿ ಭಾನುವಾರ ಆಸ್ತಿ ವಿವಾದದಿಂದ ಉದ್ಬವವಾದ ಗಲಾಟೆಯಲ್ಲಿ ಇಬ್ಬರು ಸಹೋದರರ ಕುಟುಂಬಗಳು ಪರಸ್ಪರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದಾರೆ.
ಗೋವಿಂದ ರಕ್ಷೆ ಮತ್ತು ಯಲ್ಲಪ್ಪ ರಕ್ಷೆ ಎಂಬ ಸಹೋದರರ ಕುಟುಂಬಗಳು ಈ ಗಲಾಟೆಯಲ್ಲಿ ತೊಡಗಿದ್ದು, ಗಂಭೀರವಾಗಿ ಗಾಯಗೊಂಡ ಮೂವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಪೀಡಿತರು ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸ್ಥಳಕ್ಕೆ ತಕ್ಷಣವೇ ದೌಡಾಯಿಸಿದ ಕಾಕತಿ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಗಲಾಟೆಗೆ ಕಾರಣವಾದ ಆಸ್ತಿ ವಿವಾದದ ಕುರಿತಂತೆ ಅಧಿಕೃತ ಮಾಹಿತಿ ಇನ್ನೂ ನಿರೀಕ್ಷೆಯಲ್ಲಿದೆ.