- ‘ಅನ್ನಭಾಗ್ಯ ಯೋಜನೆ ಜಾರಿಯ ಹಿಂದಿನ ತಮ್ಮ ಅನುಭವ ಹಂಚಿಕೊಂಡ ಸಿದ್ದರಾಮಯ್ಯ
- ಸಂವಾದ ಕಾರ್ಯಕ್ರಮದಲ್ಲಿ ನೂತನ ಶಾಸಕರೊಂದಿಗೆ ಅನುಭವ ಹಂಚಿಕೊಂಡ ಸಿಎಂ
ಬಡಜನರು ತುತ್ತು ಅನ್ನವನ್ನು ಇನ್ನೊಬ್ಬರ ಮನೆಯಿಂದ ಕೇಳಿ ಪಡೆಯುತ್ತಿದ್ದ ಕಷ್ಟದ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದೆ. ತುತ್ತು ಅನ್ನಕ್ಕಾಗಿ ಬಡಜನರು ಇನ್ನೊಬ್ಬರ ಮನೆ ಬಾಗಿಲಿಗೆ ಹೋಗದಂತೆ ಮಾಡಬೇಕೇಂದು ಪಣತೊಟ್ಟೆ. ಬಡಜನರಿಗೂ ಅನ್ನ ನೀಡುವ ಸಾರ್ಥಕ ಉದ್ದೇಶದಿಂದಲೇ ‘ಅನ್ನಭಾಗ್ಯ’ ಯೋಜನೆ ರೂಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
16ನೇ ವಿಧಾನಸಭಾ ಅಧಿವೇಶನಕ್ಕೆ ಆಯ್ಕೆ ಆಗಿರುವ ನೂತನ ಶಾಸಕರಿಗೆ ಇಂದು ಹಮ್ಮಿಕೊಳ್ಳಲಾಗಿದ್ದ ತರಬೇತಿ ಶಿಬಿರದಲ್ಲಿ ನಡೆದ ಸಂವಾದ ಕಾರ್ಯಕ್ರಮದ ವೇಳೆ, ‘ಅನ್ನಭಾಗ್ಯ’ ಯೋಜನೆ ಜಾರಿಯ ಹಿಂದಿನ ತಮ್ಮ ಅನುಭವವನ್ನು ಹಂಚಿಕೊಂಡರು.
“ಹಳ್ಳಿಗಳಲ್ಲಿ ಕೇವಲ ಶೇ. 25ರಷ್ಟು ಮಾತ್ರ ಅನ್ನ ಬಳಸುತ್ತಿದ್ದು, ಇನ್ನುಳಿದ ಶೇ.75 ರಷ್ಟು ಮನೆಗಳಲ್ಲಿ ರಾಗಿ ಅಥವಾ ಜೋಳ ಬಳಸುತ್ತಿದ್ದರು. ಹಬ್ಬ-ಹರಿದಿನಗಳಲ್ಲಿ ಮಾತ್ರ ಅನ್ನ ಬಳಸುತ್ತಿದ್ದರು. ಬಡವರು ಮತ್ತು ಜಮೀನುರಹಿತ ಜನರು, ಆರೋಗ್ಯ ಹಾಳಾದರೆ ಅನ್ನ ಬಳಸುತ್ತಿದ್ದ ಮನೆಗಳಿಗೆ ಹೋಗಿ ಅನ್ನ ನೀಡುವಂತೆ ಕೋರುತ್ತಿದ್ದರು. ಪ್ರಣಾಳಿಕೆ ರಚನಾ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದ ಸಂದರ್ಭದಲ್ಲಿ, ನನ್ನ ಅನುಭವದ ಹಿನ್ನೆಲೆಯಲ್ಲಿ’ಅನ್ನಭಾಗ್ಯ’ ಕಾರ್ಯಕ್ರಮವನ್ನು ರೂಪಿಸಿದೆ” ಎಂದು ಸಿಎಂ ತಿಳಿಸಿದರು.

“ಬಡವರು, ದೀನದಲಿತರು, ಆಟೋ ಚಾಲಕರು, ಕೂಲಿಕಾರರು ಹೀಗೆ ಅರ್ಹರಿಗೆ ಅನುಕೂಲವಾಗಲೆಂದೇ ‘ಇಂದಿರಾ ಕ್ಯಾಂಟೀನ್’ ಅನ್ನು ಸ್ಥಾಪಿಸಲಾಯಿತು. ಕಲಿಕೆಯ ಸಮಯದಲ್ಲಿ ಹಾಸ್ಟೆಲ್ ವ್ಯವಸ್ಥೆ ದೊರೆಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾಸಿರಿ ಕಾರ್ಯಕ್ರಮ ರೂಪಿಸಿ 1,500 ರೂ. ನೀಡಲಾಯಿತು. ಮಳೆಯನ್ನು ಆಶ್ರಯಿಸಿ ಬದುಕುವ ರೈತರ ಅನುಕೂಲಕ್ಕಾಗಿ ‘ಕೃಷಿಭಾಗ್ಯ’, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಎಲ್ಲ ಮಕ್ಕಳಿಗೂ ಸಮವಸ್ತ್ರ ಹಾಗೂ ಶೂಗಳನ್ನು ನೀಡುವ ‘ಶೂ ಭಾಗ್ಯ’ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು” ಎಂದು ತಾವು ರೂಪಿಸಿದ ಯೋಜನೆಗಳ ಹಿಂದಿನ ಉದ್ದೇಶವನ್ನು ತಿಳಿಸಿದರು.
“ನಾನು ರಾಜ್ಯದ ಏಳು ಕೋಟಿ ಜನರಿಗೂ ಮುಖ್ಯಮಂತ್ರಿ. ಯಾವುದೇ ತಾರತಮ್ಯವಿಲ್ಲದೇ ಎಲ್ಲ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಡಾ.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಜಾತ್ಯತೀತ, ಧರ್ಮಾತೀತವಾದುದು. ಸಹಿಷ್ಣುತೆ, ಸಹಬಾಳ್ವೆ ಅದರ ಪ್ರಮುಖ ಅಂಶ. ಜನರ ನಡುವೆ ಇದ್ದು, ಅವರ ಕಷ್ಟಸುಖಗಳಿಗೆ ಸ್ಪಂದಿಸಿ, ಜನರ ಧ್ವನಿಯಾಗಿ ದುಡಿದರೆ ಜನ ನಮ್ಮನ್ನು ಕೈಹಿಡಿಯುತ್ತಾರೆ. ಇದು ನನ್ನ ಕಡೆಯ ಚುನಾವಣೆಯಾಗಿದ್ದರೂ, ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಸೇವೆಗೆ ಸದಾ ಇರುತ್ತೇನೆ” ಎಂದು ನುಡಿದರು.
ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಪ್ರೇರಣೆಯಾದವರ ಬಗ್ಗೆ ಮಾತಾಡಿದ ಸಿದ್ದರಾಮಯ್ಯ. “ನಾನು ಕಾನೂನು ವಿದ್ಯಾರ್ಥಿಯಾಗಿದ್ದಾಗ, ರೈತ ಸಂಘದ ಅಧ್ಯಕ್ಷರಾಗಿದ್ದ ನಂಜುಂಡಸ್ವಾಮಿಯವರ ಸಂಪರ್ಕ ಒದಗಿಬಂದಿತು. ಅವರಿಂದ ದೇಶ, ಜಗತ್ತಿನ ರಾಜಕಾರಣದ ಬಗ್ಗೆ ಅರಿವು ಮೂಡಿತು. ರಾಜಕೀಯ ಹಿನ್ನೆಲೆ ಇರದ ಕುಟುಂಬದಿಂದ ಬಂದವನು ನಾನು. ನಾನು ರಾಜಕೀಯಕ್ಕೆ ಬರಲು ಪ್ರೊ.ನಂಜುಂಡಸ್ವಾಮಿಯವರೇ ಪ್ರೇರಣೆ” ಎಂದು ತಮ್ಮ ಹಳೆಯ ನೆನಪುಗಳನ್ನು ನೂತನ ಶಾಸಕರೊಂದಿಗೆ ಹಂಚಿಕೊಂಡು.
ರೈತ ಸಂಘದ ಕಾರ್ಯದರ್ಶಿಯಾಗಿ, ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿ, ಸಮಾಜದಲ್ಲಿನ ಅಸಮಾನತೆಯನ್ನು ನಿವಾರಿಸುವ ಗುರಿಯೇ ರಾಜಕೀಯ ಜೀವನದ ಪ್ರವೇಶಕ್ಕೆ ನಾಂದಿಯಾಯಿತು ಎಂದು ಹೇಳಿದರು.