ಮನುಷ್ಯರೆಲ್ಲರೂ ಭೇದ ಭಾವ ಬಿಟ್ಟು ಒಂದಾಗಿ ಬಾಳಬೇಕು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಹೇಳಿದರು.
ಜಮಾ ಅತೆ ಇಸ್ಲಾಮಿ ಹಿಂದ್, ಸದ್ಭಾವನಾ ಮಂಚ್ ಹಾಗೂ ರಾಬ್ತಾ ಎ ಮಿಲ್ಲತ್ ವೇದಿಕೆ ವತಿಯಿಂದ ರಂಜಾನ್ ಪ್ರಯುಕ್ತ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಈದ್ ಸ್ನೇಹಕೂಟದಲ್ಲಿ ಅವರು ಮಾತನಾಡಿದರು.
‘ದೇಹದಲ್ಲಿ ಹರಿಯುವ ರಕ್ತ, ಉಸಿರಾಡುವ ಗಾಳಿ ಒಂದೇ ಇರುವಾಗ, ಭೇದ ಭಾವ ಇರಬಾರದು. ಮುಸಲ್ಮಾನರು ವೈಯಕ್ತಿಕ, ಸಮುದಾಯದ ಸುಧಾರಣೆ ಜತೆಗೆ ಇತರರ ಸುಧಾರಣೆಗೂ ಪ್ರಯತ್ನಿಸಬೇಕು’ ಎಂದು ಹೇಳಿದರು.
‘ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಒದಗಿಸಲಾಗಿದೆ. ಕಾಮಗಾರಿಗಳ ಉದ್ಘಾಟನೆಗೆ ಏಪ್ರಿಲ್ 16 ರಂದು ಸಿಎಂ ಸಿದ್ದರಾಮಯ್ಯ ಬೀದರ್‌ಗೆ ಬರಲಿದ್ದಾರೆ. ಬೀದರ್‌ನಿಂದ ನಾಗರಿಕ ವಿಮಾನಯಾನ ಸೇವೆಯೂ ಶೀಘ್ರ ಪುನರಾರಂಭವಾಗಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಇಸ್ಹಾಕ್ ಪುತ್ತೂರ ಮಾತನಾಡಿ, ‘ಸಂತೋಷ ಹಾಗೂ ಪ್ರೀತಿ ಪರಸ್ಪರ ಹಂಚಿಕೊಳ್ಳುವುದರಿಂದ ವೃದ್ಧಿಯಾಗುತ್ತದೆ. ಸಮೃದ್ಧ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
‘ಪುಣ್ಯ ಮತ್ತು ಪಾಪದ ಪ್ರತಿಫಲ ಮನುಷ್ಯ ಜೀವಂತ ಇದ್ದಾಗಲಷ್ಟೇ ಅಲ್ಲ, ಸತ್ತ ನಂತರವೂ ಸಿಗುತ್ತದೆ. ಹೀಗಾಗಿ ಒಳ್ಳೆಯ ಕೆಲಸಗಳನ್ನೇ ಮಾಡಬೇಕು. ದ್ವೇಷ ಭಾಷಣ, ವೈರತ್ವ, ಜಗಳ, ಕೊಲೆ, ಸುಲಿಗೆ, ಕ್ಷೋಬೆ ಉಂಟು ಮಾಡುವವರು ಅದರ ಪ್ರತಿಫಲ ಅನುಭವಿಸಲೇಬೇಕಾಗುತ್ತದೆ’ ಎಂದು ಹೇಳಿದರು.
ಮೌಲ್ವಿ ಮಹಮ್ಮದ್ ಫಹೀಮುದ್ದೀನ್ ಮಾತನಾಡಿ, ‘ಭೂಮಿಯಲ್ಲಿ ಮನುಷ್ಯನಿಗೆ ಮಹತ್ವದ ಸ್ಥಾನವಿದೆ. ಅದನ್ನು ತಿಳಿದು ಉತ್ತಮ ವ್ಯಕ್ತಿಯಾಗಿ ಬದುಕಬೇಕು. ಒಳಿತು ಮಾಡುತ್ತ, ಕೆಡಕನ್ನು ತ್ಯಜಿಸಬೇಕು’ ಎಂದರು.
‘ಜೇನಿನ ನೊಣಗಳು ವಿವಿಧ ಹೂವುಗಳಿಂದ ರಸ ಹೀರಿ ಜೇನು ತುಪ್ಪ ನೀಡುವಂತೆ, ಮನುಷ್ಯರು ಬೇರೆಯವರಿಗೆ ಸಿಹಿ ನೀಡಬೇಕೇ ಹೊರತು ವಿಷವನ್ನಲ್ಲ. ನಿಶ್ಚಿತವಾಗಿಯೂ ನಾವು ಅಲ್ಲಾಹನೆಡೆಗೆ ಮರಳಬೇಕಿದೆ. ಮರಣಾನಂತರ ಜೀವನದ ಸ್ಮರಣೆ ನಾವು ಯಾವಾಗಲೂ ಮಾಡುತ್ತಿರಬೇಕು’ ಎಂದರು.
ನೌಬಾದ್‍ನ ಬ್ರಹ್ಮಕುಮಾರಿ ಆಶ್ರಮದ ಜ್ಯೋತಿ ಬಹೆನ್‍ಜಿ ಮಾತನಾಡಿ, ‘ಜಗತ್ತು ಪ್ರವಾಸಿ ತಾಣವೆಂದು ತಿಳಿದು, ನಾವೆಲ್ಲ ಪ್ರವಾಸಿಗರಂತೆ ಜೀವನ ಸಾಗಿಸಬೇಕು. ಆತ್ಮಶಾಂತಿಗಾಗಿ ದೇವರ ಸ್ಮರಣೆ ಮಾಡಬೇಕು’ ಎಂದು ಹೇಳಿದರು.

ಸೆಕ್ರೇಡ್ ಹಾರ್ಟ್ ಚರ್ಚನ್ ಫಾದರ್ ಕ್ಲೇರಿ ಡಿಸೋಜಾ ಮಾತನಾಡಿ, ‘ಇಂದು ಅಧರ್ಮೀಯರು ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ಧರ್ಮ ಅರಿತವರು ಮೌನವಾಗಿದ್ದಾರೆ. ನಾವು ಒಳಿತನ್ನು ಪ್ರೋತ್ಸಾಹಿಸಿ ಕೆಡುಕನ್ನು ವಿರೋಧಿಸುವವರಾಗಬೇಕು’ ಎಂದು ತಿಳಿಸಿದರು.
ಆಣದೂರಿನ ಭಂತೆ ಧಮ್ಮಾನಂದ ಮಹಾಥೆರೋ ಮಾತನಾಡಿ, ‘ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಇಸ್ಲಾಂನ ಶ್ರೇಷ್ಠ ಮಾನವೀಯ ಮೌಲ್ಯಗಳಾಗಿವೆ. ಈದ್ ಸ್ನೇಹಕೂಟಗಳು ಕೋಮು ಸೌಹಾರ್ದ ಕಾಪಾಡಲು ಸಹಕಾರಿಯಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಫಿಜ್ ಸೈಯದ್ ಅತೀಕುಲ್ಲಾರ ಪವಿತ್ರ ಕುರ್‍ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಫುರ್ಖಾನ್ ಪಾಶಾ ಅವರು ಪಠಣದ ಕನ್ನಡ ಅನುವಾದ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಶಿಕ್ಷಕನ ಬಂಧನ
ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್ ನಗರ ಘಟಕದ ಅಧ್ಯಕ್ಷ ಮಹಮ್ಮದ್ ಮೌಝ್ಝಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಮ್ಮದ್ ನಿಜಾಮುದ್ದೀನ್ ಸ್ವಾಗತಿಸಿ, ನಿರೂಪಿಸಿದರು.