ಗುಜರಾತ್(Gujarat) ಹತ್ಯಾಕಾಂಡ ಹೋಲುವ ಕೆಲವು ದೃಶ್ಯಗಳನ್ನು ಹೊಂದಿದೆ ಎಂಬ ಕಾರಣ ಬಲಪಂಥೀಯರ ಟೀಕೆಗೆ ಒಳಗಾದ ಎಲ್2: ಎಂಪುರಾನ್(L2: Empuraan) ಸಿನಿಮಾ ಈಗ ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಸಿದ ಮಲಯಾಳಂ ಸಿನಿಮಾವಾಗಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಗಳಿಸಿದೆ.
ಮಾರ್ಚ್ 27ರಂದು ಸಿನಿಮಾ ಬಿಡುಗಡೆಯಾಗಿದ್ದು, ಗುಜರಾತ್ ಗಲಭೆ ಹೋಲುವ ಚಿತ್ರಣವಿದ್ದ ಕಾರಣ ಕೆಲವು ದೃಶ್ಯಗಳು ಕಾಲ್ಪನಿಕ ಎಂದು ಉಲ್ಲೇಖಿಸಿದೆ. ಆದರೆ ಬಲರಾಜ್ ಪಟೇಲ್ ಯಾನೆ ಬಾಬಾ ಬಜರಂಗಿ ಎಂಬ ಪಾತ್ರವು ಬಾಬುಭಾಯಿ ಪಟೇಲ್ ಅಲಿಯಾಸ್ ಬಾಬು ಬಜರಂಗಿಗೆ ಹೋಲುವ ಕಾರಣದಿಂದಾಗಿ ಬಲಪಂಥೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ‘ಎಂಪುರಾನ್’ ಸಿನಿಮಾ ನಿರ್ಮಾಪಕರ ಮನೆ, ಕಚೇರಿ ಮೇಲೆ ಇಡಿ ದಾಳಿ
ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ 2002ರ ಗುಜರಾತ್ ಗಲಭೆಯಲ್ಲಿ ಪ್ರಮುಖ ಅಪರಾಧಿ. ವಿಶೇಷವಾಗಿ 97 ಮುಸ್ಲಿಮರನ್ನು ಕೊಂದ ನರೋಡಾ ಪಾಟಿಯಾ ಹತ್ಯಾಕಾಂಡದ ನೇತೃತ್ವವನ್ನು ವಹಿಸಿದ್ದ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಲಾಗಿದೆ.
ಈ ಸಿನಿಮಾದಲ್ಲಿರುವ ಕೆಲವು ದೃಶ್ಯಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ 17 ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಅದಾದ ಬಳಿಕ ರಾಜಕೀಯ ದ್ವೇಷ ಎಂಬಂತೆ ಜಾರಿ ನಿರ್ದೇಶನಾಲಯ (ಇಡಿ) ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲಂ ಅವರ ಕಚೇರಿ ಮೇಲೆ ದಾಳಿ ನಡೆಸಿದೆ. ಆದಾಯ ತೆರಿಗೆ ಇಲಾಖೆಯು ಮತ್ತೊಬ್ಬ ನಿರ್ಮಾಪಕ ಆಂಥೋನಿ ಪೆರುಂಬವೂರ್ ಮತ್ತು ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಇವೆಲ್ಲವುದರ ನಡುವೆಯೂ ಪ್ರೇಕ್ಷಕರು ಈ ಸಿನಿಮಾವನ್ನು ಗೆಲ್ಲಿಸಿದ್ದಾರೆ.
ಈಗ, ಈ ಎಲ್ಲಾ ವಿವಾದಗಳ ನಡುವೆಯೂ ನಿರ್ಮಾಪಕ ಆಂಥೋನಿ ಅವರು ಪೃಥ್ವಿರಾಜ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇಬ್ಬರ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇಬ್ಬರು ನಗುಮುಖದಲ್ಲಿ ಮಾತನಾಡುತ್ತಿರುವ ಚಿತ್ರ ಮತ್ತು ಆಂಥೋನಿ ಅವರು ಪೃಥ್ವಿರಾಜ್ ಅವರ ಕೆನ್ನೆಗೆ ಮುತ್ತಿಕ್ಕುವ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ.
ಪೃಥ್ವಿರಾಜ್ ಅವರನ್ನು ಟ್ಯಾಗ್ ಮಾಡಿರುವ ಆಂಥೋನಿ ಅವರು, ಮಲಯಾಳಂನಲ್ಲಿ “ಎಲ್ಲವೂ ಓಕೆ ಅಲ್ವ ಅಣ್ಣಾ?” ಎಂದು ಬರೆದಿದ್ದಾರೆ. ಇದಕ್ಕೆ ಮಲಯಾಳಂನಲ್ಲೇ ಪ್ರತಿಕ್ರಿಯಿಸಿರುವ ಪೃಥ್ವಿರಾಜ್ “ಹೌದು, ನಿಜಕ್ಕೂ” ಎಂದು ನಗು ಮುಖದ, ಹೃದಯದ ಇಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.
ಎಲ್ಲಾ ವಿವಾದಗಳ ನಡುವೆಯೂ ಉತ್ತಮ ಪ್ರದರ್ಶನ ಕಂಡಿರುವ ಎಲ್2 ಎಂಪುರಾನ್ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭಾನುವಾರದವರೆಗೆ 250 ಕೋಟಿ ರೂಪಾಯಿಗೂ ಅಧಿಕ ಸಂಗ್ರಹಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ.
