19 ವರ್ಷದ ಯುವತಿಯೊಬ್ಬರನ್ನು ಅಪಹರಿಸಿದ 22 ಮಂದಿಯ ತಂಡ ಒಂದು ವಾರಕ್ಕೂ ಹೆಚ್ಚು ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಿದ ಅಮಾನುಷ ಪ್ರಕರಣ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರ ವಾರಾಣಾಸಿಯ ಲಾಲ್‌ಪುರ ಪ್ರದೇಶದ ನಿವಾಸಿಯಾದ ಯುವತಿ ಮಾರ್ಚ್ 29ರಂದು ಸ್ನೇಹಿತೆಯನ್ನು ಭೇಟಿ ಮಾಡಲು ಮನೆಯಿಂದ ಹೋಗಿದ್ದರು.
ಇದಕ್ಕೂ ಮುನ್ನ ಹಲವು ಬಾರಿ ಹೋಗಿ ಬರುತ್ತಿದ್ದರೂ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಆದರೆ ಈ ಬಾರಿ ಮನೆಗೆ ಬಂದಿರಲಿಲ್ಲ. ಆಕೆಯ ಕುಟುಂಬದವರು ಏಪ್ರಿಲ್ 4ರಂದು ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. ಅದೇ ದಿನ ಆಕೆಗೆ ಮಾದಕ ವಸ್ತುಗಳನ್ನು ನೀಡಿದ ಅಪಹರಣಕಾರರು ಆಕೆಯನ್ನು ಪಾಂಡೆಪುರ ಬಳಿ ಬಿಟ್ಟುಹೋಗಿದ್ದರು.
ಈ ಸುದ್ದಿ ಓದಿದ್ದೀರಾ? ಷೇರುಪೇಟೆಯಲ್ಲಿ ಟ್ರಂಪ್ ತಲ್ಲಣ: ಕುಸಿದ 3 ಸಾವಿರಕ್ಕೂ ಅಧಿಕ ಅಂಕ, ಹೂಡಿಕೆದಾರರಿಗೆ 19 ಲಕ್ಷ ಕೋಟಿ ನಷ್ಟ
ನಂತರ ಸ್ನೇಹಿತೆಯ ಮನೆ ತಲುಪಿದ ಆಕೆಯನ್ನು ಮನೆಗೆ ಕರೆದೊಯ್ಯಲಾಗಿತ್ತು. ಮನೆಯಲ್ಲಿ ಆಕೆ ತನ್ನ ತಂದೆಗೆ ಘಟನೆಗಳನ್ನು ವಿವರಿಸಿದ್ದು, ಆ ಬಳಿಕ ಪ್ರಕರಣ ದಾಖಲಿಸಲಾಗಿದೆ. ದಾಳಿಕೋರರು ಆಕೆಯನ್ನು ಹುಕ್ಕಾ ಬಾರ್, ಹೋಟೆಲ್, ವಸತಿಗೃಹ ಮತ್ತು ಲಾಡ್ಜ್’ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಒಟ್ಟು 22 ಮಂದಿಯನ್ನು ದೂರಿನಲ್ಲಿ ಹೆಸರಿಸಲಾಗಿದೆ.
ಪೊಲೀಸರು ತನಿಖೆ ನಡೆಸುತ್ತಿದ್ದು, ಅದೇ ದಿನ ಕೆಲವರನ್ನು ಹುಕುಂಗಂಜ್ ಮತ್ತು ಲಲ್ಲಾಪುರ ಪ್ರದೇಶದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಈ ಪೈಕಿ ಕೆಲವರು ಅಪ್ರಾಪ್ತ ವಯಸ್ಸಿನ ಆರೋಪಿಗಳು ಸೇರಿರುವುದರಿಂದ ಪೊಲೀಸರು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಸ್ಥಳೀಯ ಪೊಲೀಸ್ ಅಧಿಕಾರಿ ಚಂದ್ರಕಾಂತ್ ಮೀನಾ ಹೇಳುವಂತೆ ಸಂತ್ರಸ್ತೆ ಯುವತಿ ಅಥವಾ ಆಕೆಯ ಕುಟುಂಬದವರು ಮೊದಲು ಲೈಂಗಿಕ ಹಲ್ಲೆ ಬಗ್ಗೆ ದೂರು ನೀಡಿರಲಿಲ್ಲ. ಏಪ್ರಿಲ್ 6ರಂದು ಅತ್ಯಾಚಾರದ ಬಗ್ಗೆ ದೂರು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.