ವಚನಯಾನ | ಮಾಯಾವಾದವನ್ನು ಅಲ್ಲಗಳೆದ ಶರಣರು

Date:

Advertisements

ತಮ್ಮನ್ನು ತಾವು ಮಹಾನ್ ಪಂಡಿತರೆಂದು ಭ್ರಮಿಸಿರುವ ವೇದ, ಶಾಸ್ತ್ರ, ಉಪನಿಷತ್ತಿನ ಮೇಲೆ ಸುಲಲಿತವಾಗಿ ಪ್ರವಚನ ಮಾಡುವ ಪಂಡಿತರನ್ನು ಬಸವಣ್ಣನವರು ಹಿರಿಯರಲ್ಲವೆಂದು ಖಂಡತುಂಡವಾಗಿ ಹೇಳುತ್ತಾರೆ. ಇವರು ಹೇಗೆ ಹಿರಿಯರಾದರು ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ. ಇವರಿಗಿಂತ ಜೀವನ್ಮುಖಿ ಚಿಂತನೆ ಮಾಡುವ ಶರಣರೇ ದೊಡ್ಡವರು ಎಂದು ಅಧಿಕಾರಯುತವಾಗಿ ಬಸವಣ್ಣ ಸಾರುತ್ತಾರೆ. ಗೀತೆಯ ಬಗ್ಗೆ ಪ್ರವಚನ ಮಾಡುವವರನ್ನು ಬಸವಣ್ಣನವರು ಮಾಯಾಭ್ರಾಂತಿ ಕವಿದ ಗೀತಜ್ಞರು ಎಂದು ವಿಡಂಬಿಸುತ್ತಾರೆ.

ಈ ದೇಶದಲ್ಲಿ ಅತ್ಯಂತ ಸುಲಭ ಮಾರ್ಗದಲ್ಲಿ ಹಣ ಗಳಿಸಬಹುದಾದ ಹಾಗೂ ಬಂಡವಾಳರಹಿತ ಉದ್ಯಮ ಯಾವುದೆಂದರೆ ಭಕ್ತಿ ಮತ್ತು ಅಧ್ಯಾತ್ಮ ಎಂದು ಯಾವ ಅಳುಕಿಲ್ಲದೆ ಹೇಳಬಹುದು. ವರ್ತಮಾನದ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳು ಕೂಡ ಯಾವ ರೀತಿಯಲ್ಲಿ ವಾಣಿಜ್ಜೀಕರಣಗೊಂಡಿವೆ ಎಂದರೆ ಅವು ದಿನ ಬೆಳಗಾದರೆ ಸಾಕು ದೇವಾಲಯಗಳು, ಸಂಖ್ಯಾಶಾಸ್ತ್ರದವರು, ಪಂಚಾಂಗ ಮತ್ತು ಜೋತಿಷ್ಯದವರು, ವಾಸ್ತು ಇತ್ಯಾದಿ ಗಿಳಿ ಶಾಸ್ತ್ರದ ಸುಲಿಗೆಕೋರರನ್ನು ಪ್ರಚಾರ ಮಾಡುತ್ತಿವೆ. ಸರಳ ವಾಸ್ತು ಎಂಬ ಪರಿಕಲ್ಪನೆಯನ್ನು ಸಮ್ಮೋಹನಗೊಳಿಸಿ ದೊಡ್ಡ ಮಟ್ಟದ ವ್ಯಾಪಾರ ಮಾಡುತ್ತಿದ್ದ ಚಂದ್ರಶೇಖರ ಗುರೂಜಿ ಎಂಬ ವ್ಯಕ್ತಿಯು ಹೇಗೆಲ್ಲ ಭೀಕರವಾಗಿ ಕೊಲೆಗೀಡಾದ ಎನ್ನುವ ಸಂಗತಿ ನಿಮಗೆಲ್ಲರಿಗೂ ತಿಳಿದಿದೆ. ಹತ್ಯೆಯಾದಾಗ ಸರಳ ವಾಸ್ತುವಿನ ಹೆಸರಿನಲ್ಲಿ ಈತ ಸಾವಿರಾರು ಕೋಟಿ ಬೇನಾಮಿ ಆಸ್ತಿ ಗಳಿಸಿದ್ದನೆಂದು ಈತನಿಗೆ ಸಾಕಷ್ಟು ಪ್ರಚಾರ ಕೊಟ್ಟಿದ್ದ ಅದೇ ಮಾಧ್ಯಮಗಳು ಹೇಳುತ್ತಿದ್ದವು. ಚಂದ್ರಶೇಖರನ ಸರಳ ವಾಸ್ತುವಿನ ಪ್ರಯೋಜನ ಪಡೆದು ನಿಜವಾಗಿಯೂ ಒಳಿತು ಕಂಡವರು ಎಷ್ಟು ಜನ ಎನ್ನುವ ಸಂಗತಿಯ ವಿವರಗಳು ನಮಗೆ ತಿಳಿಯದು. ಆದರೆ ಸರಳ ವಾಸ್ತು ವಿದ್ಯೆ ಮಾತ್ರ ಈತನಿಗೆ ಅತ್ಯಂತ ತ್ವರಿತವಾಗಿ ಶ್ರೀಮಂತನನ್ನಾಗಿಸಿದ್ದು ಸುಳ್ಳಲ್ಲ. ಅಧ್ಯಾತ್ಮದ ಉದ್ಯಮವು ಇಂದು ಅತ್ಯಂತ ಸ್ಪರ್ಧಾತ್ಮಕವಾಗಿ ಬೆಳೆದಿದೆ.

ಬಾಗಲಕೋಟೆ ಮೂಲದ ಚಂದ್ರಶೇಖರ ಗುರೂಜಿ ಮೂಲದಲ್ಲಿ ಚಂದ್ರಶೇಖರ ಅಂಗಡಿ ಎಂಬ ಲಿಂಗಾಯತ ಬಣಜಿಗ(ವ್ಯಾಪಾರಿ). ಈತ ಒಬ್ಬ ಸಿವಿಲ್ ಎಂಜಿನಿಯರ್ ಪದವೀಧರನಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮರೆತು ಅಜ್ಞಾನದ ಹಿಂದೆ ಬಿದ್ದು ಅಗರ್ಭ ಶ್ರೀಮಂತನಾಗಿ ಬೆಳೆದದ್ದನ್ನು ನಾವೆಲ್ಲ ಕಣ್ಣಾರೆ ನೋಡಿದ್ದೇವೆ. ಚಂದ್ರಶೇಖರನಿಗಿಂತಲೂ ಹೆಚ್ಚು ಆಸ್ತಿ ಗಳಿಸಿದ ಅನೇಕ ಬ್ರಾಹ್ಮಣ ಜ್ಯೋತಿಷಿಗಳು ಸಾರ್ವಜನಿಕರ ಕಣ್ಣಿಗೆ ಬೀಳದಿರುವುದು ಸೋಜಿಗದ ಸಂಗತಿ. ಈತ ಬ್ರಾಹ್ಮಣೇತರನಾಗಿರುವುದು ಸಹ ಈತನ ಸಾವಿಗೆ ಕಾರಣವಾಗಿರುವ ಸಾಧ್ಯತೆಗಳಿವೆ. ಈತನ ಕೊಲೆಗೆ ಆಸ್ತಿಯ ವಿವಾದದ ಜೊತೆಗೆ ವೃತ್ತಿ ಮಾತ್ಸರ್ಯದ ಕೈವಾಡವೂ ಅಲ್ಲಗಳೆಯಲಾಗದು. ಈ ದೇಶದಲ್ಲಿ ಬ್ರಾಹ್ಮಣ್ಯಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಬ್ರಾಹ್ಮಣೇತರರು ಎತ್ತರಕ್ಕೆ ಬೆಳೆದಾಗಲೆಲ್ಲಾ ಇಂತಹ ದುರಂತಗಳು ಸಹಜ. ಈ ದೇಶದಲ್ಲಿ ಭಕ್ತಿ, ಅಧ್ಯಾತ್ಮ, ಮಂದಿರಗಳು ಇವೆಲ್ಲವೂ ಕೇವಲ ಉದ್ಯಮಗಳು. ಭಕ್ತರು ದೇವರಿಗೆ ಅರ್ಪಿಸುವ ಸೀರೆ, ರವಿಕೆ, ಬಳೆ ಮುಂತಾದ ವಸ್ತುಗಳು ಆವೃತ್ತ ರೂಪದಲ್ಲಿ ಮಂದಿರದ ಹೊರಗಿನ ಅಂಗಡಿಯಿಂದ ಗರ್ಭಗುಡಿ ತಲುಪಿ ಮತ್ತೆ ಅಂಗಡಿಗೆ ಮರಳಿ ತಲುಪುತ್ತ ಭಕ್ತರ ಕೈ ಬದಲಾಯಿಸುವುದನ್ನು ನಾವೆಲ್ಲರೂ ನೋಡಿದ್ದೇವೆ. ಈ ದೇಶದ ಪ್ರತಿ ಗ್ರಾಮದಲ್ಲಿ ಕನಿಷ್ಠ ನಾಲ್ಕಾರು ದೇವಾಲಯಗಳು ಕಾಣಸಿಗುತ್ತವೆ ಹೊರತು ಶಾಲೆˌ ಗ್ರಂಥಾಲಯ ಅಥವಾ ಕ್ರೀಡಾಂಗಣಗಳು ಸಿಗುವುದಿಲ್ಲ.

Advertisements
chandrashekarguruji 2 1722661446

ಇವತ್ತಿದ ಗಡಿಬಿಡಿಯ ಯುಗದಲ್ಲೂ ಸಹ ಗ್ರಾಮದಿಂದ ಪಟ್ಟಣದವರೆಗೆ ವರ್ಷದ ಎಲ್ಲಾ ಋತುಗಳಲ್ಲಿ ಪ್ರಕಾಂಡ ಪಂಡಿತರಿಂದ ಪುರಾಣ ಹಾಗೂ ಪ್ರವಚನಗಳು ಏರ್ಪಡಿಸುವುದು ವಾಡಿಕೆ. ನಮ್ಮ ನಡುವೆ ಇರುವ ಹಾಗೂ ಆಗಿಹೋಗಿರುವ ಪ್ರವಚನಕಾರರು ಮೇಲ್ನೋಟಕ್ಕೆ ನಮಗೆ ಸಾತ್ವಿಕರು,ಸಜ್ಜನರು, ಸಂತರಂತೆ ತೋರುತ್ತಾರಾದರೂ ಇವರಲ್ಲಿ ಬಹುತೇಕರು ಕೋಮುವಾದಿಗಳು, ಬಹುತ್ವವನ್ನು ವಿರೋಧಿಸುವ ಬಲಪಂಥೀಯ ಹುಸಿ ವಾಗ್ಮಿಗಳು ಹಾಗೂ ಮಾಯಾವಾದದ ಪ್ರತಿಪಾದಕರಾಗಿದ್ದಾರೆ. ಇವರು ಸ್ವಂತಕ್ಕೆ ಸರಳ ಸಜ್ಜನರೆಂದು ಜನಪ್ರಿಯತೆ ಗಳಿಸಿದಾಗ್ಯೂ ಇವರ ಪ್ರವಚನಗಳು ದುಬಾರಿಯಾಗಿಸುವಲ್ಲಿ ಇವರ ಹಿಂಬಾಲಕರ ಪಾತ್ರ ಅಲ್ಲಗಳೆಯಲಾಗದು. ಈ ಖ್ಯಾತನಾಮ ಪ್ರವಚನಕಾರರ ಪ್ರವಚನಕ್ಕೆ ಒಪ್ಪಿಗೆ ಮುಕ್ತವಾಗಿ ಎಲ್ಲರಿಗೂ ಲಭ್ಯವಾಗುವುದಿಲ್ಲ. ಈ ಪ್ರವಚನಗಳ ದಿನಾಂಕˌ ವೆಚ್ಚ ಮುಂತಾದ ಸಂಗತಿಗಳು ಇವರ ಹಿಂಬಾಲಕರೇ ನಿರ್ಧರಿಸುತ್ತಾರೆ. ಇವರ ಪ್ರವಚನಗಳಲ್ಲಿ ವರ್ತಮಾನದ ತಲ್ಲಣಗಳಾಗಲಿ, ಸಮಸ್ಯೆಗಳಾಗಲಿ, ಇತಿಹಾಸದ ದುರ್ಘಟನೆಗಳಾಗಲಿ, ಭವಿಷ್ಯದ ಭರವಸೆಗಳಾಗಲಿ ಕಾಣಸಿಗುವುದಿಲ್ಲ. ಸರಕಾರದ ಜನವಿರೋಧಿ ನಿರ್ಧಾರಗಳಾಗಲಿ, ಜನರ ದೈನಂದಿನ ಸಮಸ್ಯೆಗಳ ಕುರಿತಾಗಲಿ ಪ್ರವಚನಕಾರರು ಮಾತನಾಡುವುದಿಲ್ಲ. ಜನರ ಬದುಕಿಗೆ ಆಸರೆಯಾಗುವ ಯಾವ ಪರಿಹಾರಗಳೂ ಅಲ್ಲಿ ಚರ್ಚೆಯಾಗುವುದಿಲ್ಲ. ಅಲ್ಲಿ ನಡೆಯುವ ಮಾತುಗಳು ಕೇವಲ ಪಾಶ್ಚಾತ್ಯ ತತ್ವಜ್ಞಾನಿಗಳ ಹಳೆಯ ಸರಕುಗಳು.

ಇವರಲ್ಲಿ ಅನೇಕ ಪ್ರವಚನಕಾರರು ನಿಸರ್ಗದ ಸುಂದರತೆಯನ್ನು ಮಾರ್ಮಿಕವಾಗಿ ವರ್ಣಿಸುತ್ತಾರೆ. ಕರ್ಮ ಸಿದ್ಧಾಂತˌ ಸ್ವರ್ಗ-ನರಕˌ ಪಾಪ-ಪುಣ್ಯಗಳ ಮಿತ್ಯೆಗಳು, ಧರ್ಮದ ಹೆಸರಿನಲ್ಲಿನ ಹಿಂಸೆ, ಹಾಗೂ ಯುದ್ದೋನ್ಮಾದ, ಪ್ರಚೋದನೆಗಳು ಹಾಗು ಮನುಷ್ಯನ ಇಂದಿನ ಬದುಕಿಗೆ ಯಾವುದೆ ಸ್ಪಷ್ಟ ಗುರಿಯನ್ನು ತೋರದ ದೈವೆಚ್ಚೆಯ ಕುರುಡು ನಂಬಿಕೆಗಳ ಕುರಿತು ಈ ಪ್ರವಚನಕಾರರು ಸಾಕಷ್ಟು ಮಾತನಾಡುತ್ತಾರೆ. ನೀನು ಯಾವ ಫಲಾಪೇಕ್ಷೆಯೂ ಇಟ್ಟುಕೊಳ್ಳದೆ ಕೇವಲ ಕರ್ಮವನ್ನು ಮಾಡು ಎನ್ನುವ ಗತಕಾಲದ ಕರ್ಮಸಿದ್ಧಾಂತವೆ ಈ ಪ್ರವಚನಕಾರರ ಸಿದ್ಧಾಂತವಾಗಿದೆ. ಈ ಪ್ರವಚನಕಾರರಿಗೆ ಇಂದಿನ ಜಾಗತಿಕ ಸ್ಪರ್ಧಾತ್ಮಕ ಯುಗದ ಬದುಕಿನ ಕುರಿತು ಕನಿಷ್ಟ ಪ್ರಜ್ಞೆಯೂ ಇರುವುದಿಲ್ಲ. ಗುರಿ ಅಥವಾ ಉದ್ದೇಶಗಳಿಲ್ಲದೆ ಮಾಡುವ ಕಾರ್ಯಗಳು ನಿರರ್ಥಕ. ವರ್ತಮಾನದ ಸ್ಪರ್ಧಾತ್ಮಕ ಯುಗದಲ್ಲಿ ಕರ್ಮಸಿದ್ಧಾಂತವು ಒಂದು ಪೊಳ್ಳುವಾದ. ಯಾವ ಫಲಾಪೇಕ್ಷೆಯೂ ಇರದೆ ಮಾಡುವ ಕಾರ್ಯವು ನಮ್ಮ ನವ ಪೀಳಿಗೆಯ ಭವಿಷ್ಯವನ್ನು ನುಂಗಿಹಾಕಬಲ್ಲುದು ಎನ್ನುವುದರ ಕುರಿತು ಈ ಪ್ರವಚನಕಾರರು ಯೋಚಿಸುವುದಿಲ್ಲ. ತುಂಬಾ ಹಿಂದೆ ಓದಿದ ತತ್ವಶಾಸ್ತ್ರದ ಔಟ್‌ ಡೇಟೆಡ್ ಸಿದ್ಧಾಂತಗಳನ್ನು ಆಂಗ್ಲ ಹಾಗೂ ಸಂಸ್ಕೃತದ ಅಲಂಕಾರದಿಂದ ಪ್ರಸ್ತುತಪಡಿಸುವ ಇವರು ಬಡವರ ಬದುಕು ಕಟ್ಟಿಕೊಳ್ಳಲು ಬೇಕಾಗುವ ಯಾವ ಸಲಹೆಗಳನ್ನೂ ನೀಡಲಾರರು.

Sri siddharoodharu 1200x630xt
ಸದ್ಗುರು ಸಿದ್ಧಾರೂಢರು

ಇನ್ನೂ ಸೋಜಿಗದ ಸಂಗತಿ ಏನೆಂದರೆ ಈ ಬಗೆಯ ಸಜ್ಜನರು ಹಾಗೂ ಸರಳ ಬದುಕಿನ ಪ್ರವಚನಕಾರರು ತಾವು ನೇರವಾಗಿ ಹೇಳಲಾಗದ ಅನೇಕ ವಿವಾದಾತ್ಮಕ ಸಂಗತಿಗಳನ್ನು ತಮ್ಮ ಪಟ್ಟ ಶಿಷ್ಯಂದಿರಿಂದ ಹೇಳಿಸುವುದು. ತಾವು ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೆ ಅಡ್ದ ಗೋಡೆಯ ಮೇಲೆ ಕುಳಿತುಕೊಳ್ಳುವುದು ಹಾಗೂ ತಮ್ಮ ವಿರುದ್ಧದ ವಸ್ತುನಿಷ್ಠ ವಿಮರ್ಶೆಗೆ ಪ್ರತಿಕ್ರಿಯಿಸದೆ ತಮ್ಮ ಶಿಷ್ಯರಿಂದ ಹಾರಿಕೆಯ ಸಮಜಾಯಷಿ ನೀಡಿಸಿ ತಪ್ಪಿಸಿಕೊಳ್ಳುವುದು. ರಾಜ್ಯದ ಉತ್ತರ ಭಾಗದಲ್ಲಿ ಸದ್ಗುರು ಸಿದ್ಧಾರೂಢರು ಪ್ರತಿಪಾದಿಸಿದ ಆರೂಢ ತತ್ವ ಅಥವಾ ವೇದಾಂತ ಬೋಧಿಸುವ ಅನೇಕ ಮಠಗಳಿವೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಬ್ರಾಹ್ಮಣೇತರ ಚಳುವಳಿಯ ಸಮ್ಮೇಳನದಲ್ಲಿ ಅಂದು ಕಂಬಳಿ ಸಿದ್ಧಪ್ಪನವರೊಂದಿಗೆ ಗುರುತಿಸಿಕೊಂಡವರು ಕೊಲ್ಹಾಪುರದ ಶಾಹು ಮಹಾರಾಜರು ಮತ್ತು ಸಿದ್ಧಾರೂಢರು. ಬ್ರಾಹ್ಮಣೇತರ ಚಳವಳಿ ಬೆಂಬಲಿಸಬಾರದೆಂದು ಸಿದ್ಧಾರೂಢರ ಮೇಲೆ ಅನೇಕ ಸನಾತನಿಗಳು ಒತ್ತಡ ಹೇರುವ ವಿಫಲ ಯತ್ನ ಮಾಡಿದ್ದರು. ಅದ್ವೈತ ಮತ್ತು ವೇದಾಂತ ಬೋಧಿಸುವ ಆರೂಢ ಪರಂಪರೆಯ ಮಠಗಳಿಗೆ ಇಂದು ಹಿಂದೂ ಕೋಮುವಾದಿಗಳು ಮಠಾಧೀಶರಾಗಿರುವುದು ದುರಂತದ ಸಂಗತಿಯಾಗಿದೆ. ರಾಜ್ಯದ ಉತ್ತರ ಭಾಗದಲ್ಲಿ ಯುವಕರಲ್ಲಿ ಹಿಂದುತ್ವದ ವಿಷವನ್ನು ಬಿತ್ತುವಲ್ಲಿ ಈ ಆರೂಢಾನಂದರುಗಳ ಪಾತ್ರ ಬಹಳ ದೊಡ್ಡದಿದೆ.

ವೈಜ್ಞಾನಿಕವಾಗಿ ಚಿಂತಿಸುವ ಪ್ರಗತಿಪರರನ್ನು ಹೀಗಳೆಯುವ ಹಾಗೂ ಬಸವ ಅನುಯಾಯಿಗಳನ್ನು ಬಸವ ತಾಲಿಬಾನಿಗಳೆಂದು ಟೀಕಿಸುವ ಹಿಂದುತ್ವವಾದಿ ಗೂಂಡಾಪಡೆ ಸನಾತನ ಮೌಢ್ಯಗಳನ್ನು ಧಾರಾಳವಾಗಿ ನಾಡಿನಾದ್ಯಂತ ಪಸರಿಸುತ್ತಿದೆ. ಆರೂಢ ಪರಂಪರೆಯ ಆನಂದ ಎಂದು ಕೊನೆಗೊಳ್ಳುವ ಹೆಸರಿನ ಮಠಾಧೀಶನೊಬ್ಬ ವಚನ ಚಳವಳಿಯನ್ನು ಸನಾತನ ಸಂಸ್ಕೃತಿಯ ಭಾಗವೆಂದು ಪ್ರತಿಪಾದಿಸುವ ಒಂದು ಪ್ರಕ್ಷುಬ್ಧ ಅಭಿಯಾನವನ್ನೆ ಮಾಡಿದ ಉದಾಹರಣೆಗಳು ನಮಗೆ ಸಿಗುತ್ತವೆ. ಅಸಲಿಗೆ ಆರೂಢಾನಂದನಿಗೆ ವೇದಾಂತವಾಗಲಿ, ಅದ್ವೈತವಾಗಲಿ ಸರಿಯಾಗಿ ಗೊತ್ತಿಲ್ಲ. ಬಸವಾದಿ ಶರಣರ ವೈಚಾರಿಕˌ ಪ್ರಗತಿಪರ, ಜೀವಪರ ಚಿಂತನೆಗಳನ್ನು ತಿರುಚುವುದೆ ಇವರ ದೈನಂದಿನ ಕಾರ್ಯವಾಗಿದೆ. ಈ ಮಠಾಧೀಶರು ಹಾಗೂ ಪ್ರಸಿದ್ಧ ಪ್ರವಚನಕಾರರು ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳ ಕುರಿತು ಮಾತನಾಡದೆ, ಸನಾತನ ಕರ್ಮಸಿದ್ಧಾಂತ ಮತ್ತು ಭಗವದ್ಗೀತೆಯ ಕುರಿತು ಪ್ರವಚನಗಳು ಮಾಡುತ್ತಾರೆ. ಗೀತೆ, ಉಪನಿಷತ್ ಮತ್ತು ಅದ್ವೈತದ ಮಾಯಾವಾದವನ್ನು ಶರಣರು ಬಹಳ ತೀವ್ರವಾಗಿ ಅಲ್ಲಗಳೆಯುತ್ತಾರೆ. ವೇದ-ಶಾಸ್ತ್ರಗಳನ್ನು ಓದಿದವರು ಮತ್ತು ವೇದಾಂತದ ಮಾಯಾವಾದಿಗಳ ಕುರಿತು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೀಗೆ ವ್ಯಾಖ್ಯಾನಿಸುತ್ತಾರೆ:

“ವೇದಶಾಸ್ತ್ರದವರ ಹಿರಿಯರೆನ್ನೆ,
ಮಾಯಾಭ್ರಾಂತಿ ಕವಿದ ಗೀತಜ್ಞರ
ಹಿರಿಯರೆನ್ನೆ, ಇವರು ಹಿರಿಯರುಗಳೇ?
ಯಾಗನಟ್ಟು ವಿಗಪಾಣರು, ಇವರಿಂದಧಿಕವ ಸಾಧಿಸುವರೇನು [ಕಿ]ರಿಯರೆ?
ಇಂತು ವಿದ್ಯೆ ಗುಣ ಜ್ಞಾನ ಧರ್ಮ
ಆಚಾರ ಶೀಲಂಗಳ, ನಮ್ಮ ಕೂಡಲಸಂಗನ
ಶರಣರು ಸಾಧಿಸಿದ ಸಾಧನೆಯನೆ ಸಾಧಿಸುವುದು.”
– ಬಸವಣ್ಣ

ಭಾವಾರ್ಥ

ತಮ್ಮನ್ನು ತಾವು ಮಹಾನ್ ಪಂಡಿತರೆಂದು ಭ್ರಮಿಸಿರುವ ವೇದ, ಶಾಸ್ತ್ರ, ಉಪನಿಷತ್ತಿನ ಮೇಲೆ ಸುಲಲಿತವಾಗಿ ಪ್ರವಚನ ಮಾಡುವ ಪಂಡಿತರನ್ನು ಬಸವಣ್ಣನವರು ಹಿರಿಯರಲ್ಲವೆಂದು ಖಂಡತುಂಡವಾಗಿ ಹೇಳುತ್ತಾರೆ. ಇವರು ಹೇಗೆ ಹಿರಿಯರಾದರು ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ. ಇವರಿಗಿಂತ ಜೀವನ್ಮುಖಿ ಚಿಂತನೆ ಮಾಡುವ ಶರಣರೇ ದೊಡ್ಡವರು ಎಂದು ಅಧಿಕಾರಯುತವಾಗಿ ಬಸವಣ್ಣ ಸಾರುತ್ತಾರೆ. ಗೀತೆಯ ಬಗ್ಗೆ ಪ್ರವಚನ ಮಾಡುವವರನ್ನು ಬಸವಣ್ಣನವರು ಮಾಯಾಭ್ರಾಂತಿ ಕವಿದ ಗೀತಜ್ಞರು ಎಂದು ವಿಡಂಬಿಸುತ್ತಾರೆ. ಹಾಗಾಗಿ, ವೇದ, ಶಾಸ್ತ್ರ , ಆಗಮ, ಉಪನಿಷತ್ತು , ಪುರಾಣ, ಭಗವದ್ಗೀತೆಗಳು ಬಲ್ಲೆವೆಂದು ಅವುಗಳ ಬಗ್ಗೆ ಪುಂಖಾನುಪುಂಖ ಪ್ರವಚನ ಮಾಡುವವರು ಪಂಡಿತಲ್ಲ , ಹಿರಿಯರೂ ಅಲ್ಲ ಎನ್ನುವ ಮಾತು ವಿಚಾರವಾದಿ ಹಾಗು ಶ್ರೇಷ್ಠ ದಾರ್ಶನಿಕ ಬಸವಣ್ಣನವರು ಒಂಬತ್ತುನೂರು ವರ್ಷಗಳ ಹಿಂದೆಯೆ ಸಾರಿ ಹೇಳಿದ್ದಾರೆ. ಕೂಡಲಸಂಗನ ಶರಣರು ಈ ವೇದಾಂತಿಗಳಿಗಿಂತ ಯಾವ ರೀತಿಯಲ್ಲೂ ಕಿರಿಯರಲ್ಲ ಎನ್ನುವ ಮೂಲಕ ಶರಣರ ಹಾಗೂ ಶರಣ ತತ್ವದ ಹಿರಿಮೆಯನ್ನು ಬಸವಣ್ಣನವರು ಇಲ್ಲಿ ಎತ್ತಿ ಹಿಡಿದಿದ್ದಾರೆ. ವಿಶೇಸವಾಗಿ ಭಗವದ್ಗೀತೆಯ ಮೇಲೆ ಪ್ರವಚನ ಮಾಡುವ ಪ್ರಕಾಂಡ ಪಂಡಿತರನ್ನು ಬಸವಣ್ಣನವರು ಈ ವಚನದಲ್ಲಿ ಮಯಾಭ್ರಾಂತಿ ಕವಿದ ಗೀತಜ್ಞರು ಎಂದು ಹೀನಾಯವಾಗಿ ವಿಡಂಬಿಸಿದ್ದಾರೆ.

karnataka government declares social reformer basavanna as its cultural leader 106958095

ಟಿಪ್ಪಣಿ

ಶರಣರು ವೇದ, ಆಗಮ, ಶಾಸ್ತ್ರಗಳನ್ನು ಮಾತ್ರ ತಿರಸ್ಕರಿಸಲಿಲ್ಲ. ಅವರು ವೇದಾಂತ ಅಥವಾ ಉಪನಿಷತ್ತುಗಳನ್ನೂ ಸಹ ತಿರಸ್ಕರಿಸಿದ್ದಾರೆ. ವಚನಗಳು ಉಪನಿಷತ್ತಿನ ಕನ್ನಡ ಅವತರಣಿಕೆಗಳು ಎಂದು ವಾದಿಸುವ ಪಂಡಿತೋತ್ತಮರ ಮೊಂಡು ವಾದವನ್ನು ನಾವು ಸಾರಾಸಗಟಾಗಿ ಅಲ್ಲಗಳೆಯಬೇಕಿದೆ. ಉಪನಷತ್ತಿನ ಮುಂದುವರೆದ ಭಾಗವಾದ ಶಂಕರನ ಮಾಯಾವಾದ ಈ ಜಗತ್ತನ್ನು ಮಿತ್ಯ ಎಂತಲು, ಬ್ರಹ್ಮ ಮಾತ್ರ ಸತ್ಯವೆಂತಲು ಹೇಳುತ್ತದೆ. ಕಣ್ಣಿಗೆ ಕಾಣುವ ಜಗತ್ತನ್ನು ಮಿತ್ಯ ಹಾಗೂ ಕಣ್ಣಿಗೆ ಕಾಣದ ಬ್ರಹ್ಮನನ್ನು ಸತ್ಯವೆಂದು ಹೇಳುವ ವೇದಾಂತವಾಗಲಿ, ದ್ವೈತವಾಗಲಿ ಶರಣರು ಒಪ್ಪಿಕೊಳ್ಳುವುದಿಲ್ಲ. ಶರಣರು ಕಣ್ಣಿಗೆ ಕಾಣುವ ಈ ಜಗತ್ತನ್ನು ಮಾತ್ರ ಸತ್ಯವೆಂದು ನಂಬುತ್ತದೆ. ಕಣ್ಣಿಗೆ ಯಾವುದೆಲ್ಲ ಕಾಣುವದಿಲ್ಲವೊ ಅದನ್ನು ಶರಣರು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ, ದೇವರು ಮತ್ತು ಧರ್ಮಗಳ ಹೆಸರಿನಲ್ಲಿ ನಡೆಯವ ಅನ್ಯಾಯ, ಅನಾಚಾರ ಹಾಗೂ ಶೋಷಣೆಗಳಿಗೆ ಬ್ರೆಕ್ ಹಾಕುವ ಸಾಮರ್ಥ್ಯ ಇರುವುದು ಇಲ್ಲಿ ಕೇವಲ ಬುದ್ಧ, ಬಸವ, ಗಾಂಧಿ, ಪೆರಿಯಾರ್ ಮತ್ತು ಅಂಬೇಡ್ಕರ್ ವಾದಗಳಿಗೆ ಮಾತ್ರವೆ ಹೊರತು ಸನಾತನ ಕರ್ಮಠ ಸಿದ್ಧಾಂತಗಳಿಗಲ್ಲ ಎನ್ನುವುದು ಸೂರ್ಯ-ಚಂದ್ರರಷ್ಟೆ ಸತ್ಯವಾಗಿದೆ. ವರ್ತಮಾನದ ಬಿಕ್ಕಟ್ಟುಗಳಿಗೆ ಪರಿಹಾರವನ್ನು ಬುದ್ದ-ಬಸವವಾದಗಳಲ್ಲಿ ಹುಡುಕುವ ಅನಿವಾರ್ಯತೆ ಇಂದು ನಮ್ಮೆಲ್ಲರ ಮುಂದಿದೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X