- ಬಿಎಂಆರ್‌ಸಿಎಲ್ ಪ್ರಸ್ತಾವನೆಯನ್ನು ಅನುಮೋದಿಸಿದ ಮಂಡಳಿ
- ಮೆಟ್ರೋ ಮಾರ್ಗಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಆರ್ಥಿಕ ನೆರವು
ಕೇಂದ್ರದ ಇಂಧನ ಸಚಿವಾಲಯದ ಅಧೀನದಲ್ಲಿನ ಸಾರ್ವಜನಿಕರ ವಲಯದ ಗ್ರಾಮೀಣ ವಿದ್ಯುದೀಕರಣ ನಿಗಮ (ಆರ್‌ಇಸಿ) ನಮ್ಮ ಮೆಟ್ರೋ ಯೋಜನೆಯ ಹಂತ-2ರ ಮೆಟ್ರೋ ಮಾರ್ಗಗಳ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ₹3,045 ಕೋಟಿ ಆರ್ಥಿಕ ನೆರವು ನೀಡಲು ಒಪ್ಪಿಗೆ ಸೂಚಿಸಿದೆ.
ಜೂನ್ 24ರಂದು ಬೆಂಗಳೂರಿನಲ್ಲಿ ನಡೆದ ಆರ್‌ಇಸಿಯ ಮಂಡಳಿ ಸಭೆಯಲ್ಲಿ ಸಹಾಯ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಬಿಎಂಆರ್‌ಸಿಎಲ್‌ನ ಪ್ರಸ್ತಾವನೆಯನ್ನು ಮಂಡಳಿಯು ಅನುಮೋದಿಸಿದೆ.
ನಮ್ಮ ಮೆಟ್ರೋದ ಹಂತ-2ರ ಯೋಜನೆಯು ಹಂತ-1ರ ಎರಡು ಕಾರಿಡಾರ್‌ಗಳ ವಿಸ್ತರಣೆಯನ್ನು ಒಳಗೊಂಡಿದೆ. ಯೋಜನೆಯಡಿ ಪೂರ್ವ-ಪಶ್ಚಿಮ ಕಾರಿಡಾರ್ ಮತ್ತು ಉತ್ತರ-ದಕ್ಷಿಣ ಕಾರಿಡಾರ್ ಹಾಗೂ ಎರಡು ಹೊಸ ಮಾರ್ಗಗಳ ನಿರ್ಮಾಣವಾಗಲಿದೆ. ಒಂದು ಮಾರ್ಗವು ಆರ್.ವಿ ಬೊಮ್ಮಸಂದ್ರಕ್ಕೆ ಹಾಗೂ ಇನ್ನೊಂದು ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ನಿರ್ಮಾಣವಾಗಲಿದೆ.
ಈ ಸುದ್ದಿ ಓದಿದ್ದೀರಾ? ಬಕ್ರೀದ್ ಹಬ್ಬ | ಈದ್ಗಾ ಮೈದಾನದಲ್ಲಿ ಭರ್ಜರಿ ವ್ಯಾಪಾರ
“ಹಂತ-2ರ ಯೋಜನೆಯು ಸಂಪರ್ಕವನ್ನು ವರ್ಧಿಸುತ್ತದೆ ಮತ್ತು ಜನನಿಬಿಡ ನಗರದಲ್ಲಿ ದಟ್ಟಣೆಯನ್ನು ಸುಲಭಗೊಳಿಸುತ್ತದೆ. ಹಂತ-2 (72.09 .ಮೀ) ಪೂರ್ಣಗೊಂಡಾಗ, ನಮ್ಮ ಮೆಟ್ರೋ ಜಾಲವು 101 ನಿಲ್ದಾಣಗಳೊಂದಿಗೆ 114.39 ಕಿಮೀ ಸಂಚಾರವನ್ನು ಹೊಂದಿರುತ್ತದೆ”ಎಂದು ನಿಗಮ ತಿಳಿಸಿದೆ.