ಭಾರತೀಯ ಚಿತ್ರರಂಗದ ಅಪ್ರತಿಮ ಸಂಗೀತ ನಿರ್ದೇಶಕ ಬರ್ಮನ್ ಸಿನಿಮಾ ಸಂಗೀತ ಕ್ಷೇತ್ರಕ್ಕೆ ವಿಶಿಷ್ಟ ಮೆರುಗು ತಂದ, ಬೆಟ್ಟದಷ್ಟು ಸಾಧನೆ ಮಾಡಿದ ಅಪ್ಪಟ ಸೃಜನಶೀಲ ಪ್ರತಿಭೆ. ಜೂನ್ 27 ಅವರ ಜನ್ಮದಿನ. ಅವರು ಸಂಗೀತ ಸಂಯೋಜಿಸಿದ ಹಾಡುಗಳನ್ನು ಕೇಳುತ್ತಾ, ಅವರೊಂದಿಗೆ ಬದುಕೋಣ.
ಅಪ್ಪನಂತೆ ಮಗನಿರಬಹುದು. ಅಪ್ಪನ ಕ್ಷೇತ್ರವನ್ನೇ ಆಯ್ದುಕೊಂಡು ಸಾಧನೆ ಮಾಡಿರಲೂಬಹುದು. ಆದರೆ ಅಪ್ಪನನ್ನು ಅನುಕರಿಸದೆ, ತಾನೇ ಬೇರೆ, ತನ್ನ ಶೈಲಿಯೇ ಬೇರೆ ಎಂಬುದನ್ನು ಬದುಕಿನುದ್ದಕ್ಕೂ ತೋರಿದವರು ಅಪರೂಪ. ಅಂತಹ ಒಂದು ಜೋಡಿ ಕುವೆಂಪು- ತೇಜಸ್ವಿಯದು. ಅಂಥಾದ್ದೆ ಮತ್ತೊಂದು ಜೋಡಿ ಎಸ್.ಡಿ ಬರ್ಮನ್- ಆರ್.ಡಿ ಬರ್ಮನ್‌ದು.
ಎಸ್.ಡಿ. ಬರ್ಮನ್ ಮೂಲತಃ ಬಂಗಾಳದವರು. ಬೆಂಗಾಲಿಯ ಸತ್ವ ಮತ್ತು ಸಾರವನ್ನು ಹಿಂದಿ ಚಿತ್ರರಂಗಕ್ಕೆ ತಂದವರು. ಕಡಿಮೆ ಪರಿಕರಗಳನ್ನು ಬಳಸಿ, ಸ್ವರ ಸಂಯೋಜಿಸಿ, ಕೇಳುಗರ ಕಿವಿಗಳನ್ನು ಇಂಪಾಗಿಸಿದವರು. ಕೋಲ್ಕತ್ತಾದ ಹೂಗ್ಲಿ ನದಿಯ ದೋಣಿ ನಡೆಸುವವರು ಹುಟ್ಟು ಹಾಕುವಾಗ ಹಾಡುವ ಶ್ರಮಿಕ ಸಮುದಾಯದ ಜನಪದ ಗೀತೆಗಳನ್ನು ಸಂದರ್ಭಕ್ಕೆ ತಕ್ಕನಾಗಿ ಚಿತ್ರಗಳಲ್ಲಿ ಅಳವಡಿಸಿ, ಎಲ್ಲರ ಮೆಚ್ಚುಗೆ ಗಳಿಸಿದವರು. ಭಾರತೀಯ ಚಲನಚಿತ್ರ ಸಂಗೀತದಲ್ಲಿ ವಿಶಿಷ್ಟ ಪರಂಪರೆಯ ಉಗಮಕ್ಕೆ ಕಾರಣರಾದವರು. ಸುಜಾತಾ, ಗೈಡ್, ತೇರೆ ಮೇರೆ ಸಪ್ನೆ, ಜ್ಯೂಯೆಲ್ ಥೀಫ್, ಅಭಿಮಾನ್, ಅರಾಧನಾ ಮುಂತಾದ ಚಿತ್ರಗಳ ಮೂಲಕ ಜನಮನ್ನಣೆ ಗಳಿಸಿ, ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದವರು.
ಇಂತಹ ಪ್ರತಿಭಾವಂತ ಎಸ್.ಡಿ ಬರ್ಮನ್ ಅವರ ಪತ್ನಿ ಮೀರಾದೇವ್ ಬರ್ಮನ್. ಇವರು ಗೀತರಚನೆಕಾರ್ತಿಯಾಗಿ ಹೆಸರು ಗಳಿಸಿದ್ದರು. ಇವರ ಪುತ್ರನೇ ಆರ್.ಡಿ ಬರ್ಮನ್. ಜನಿಸಿದ್ದು ಜೂನ್ 27 ರಂದು.
ಕೋಲ್ಕತ್ತಾದಲ್ಲಿ ಹುಟ್ಟಿ ಬೆಳೆದ ಬರ್ಮನ್ ಬಾಲ್ಯದಲ್ಲಿ ಅಳುತ್ತಿದ್ದುದು ಕೂಡ ಪಾ.. ಎಂಬ ರಾಗದಿಂದಲೇ ಶುರುವಾಗುತ್ತಿತ್ತಂತೆ. ಆಗಲೇ ಆತನಿಗೆ `ಪಂಚಮ್’ ಎಂಬ ಹೆಸರು ಕೂಡ ಅಂಟಿಕೊಂಡಿದ್ದಂತೆ. ಬಾಲಕನಾಗಿದ್ದಾಗಲೇ ಸಂಗೀತಕ್ಕೆ ಸಂಬಂಧಿಸಿದ ಪರಿಕರಗಳೊಂದಿಗೆ ಆಟವಾಡುತ್ತಿದ್ದ. ಸದಾ ಮೌತ್ ಆರ್ಗನ್ ನುಡಿಸುತ್ತಿದ್ದ. ರಾಗ-ಸ್ವರಗಳನ್ನು ಬಳಸಿ ಹಾಡುಗಳನ್ನು ಸಂಯೋಜಿಸುತ್ತಿದ್ದ. ಹೊಸ ಮಟ್ಟುಗಳನ್ನು ಹುಟ್ಟು ಹಾಕುವುದರಲ್ಲಿ ನಿಸ್ಸೀಮನಾಗಿದ್ದ. ಆಡಾಡುತ್ತಲೇ ಸಂಯೋಜಿಸಿದ್ದ ಗೀತೆಯನ್ನು ತಂದೆಗೆ ಕೇಳಿಸಿದ್ದ. ಕೇಳಿದ ತಂದೆ ಮೆಚ್ಚಲಿಲ್ಲ, ಪ್ರತಿಕ್ರಿಯಿಸಲೂ ಇಲ್ಲ. ಅದಾದ ಕೆಲವು ತಿಂಗಳ ನಂತರ ಅಂದಿನ ಅಪ್ರತಿಮ ಗಾಯಕ ಮಹಮದ್ ರಫಿ ಕಂಠದಲ್ಲಿ ಪ್ರೇಮಗೀತೆಯೊಂದು ಎಲ್ಲರ ನಾಲಗೆಯ ಮೇಲೆ ನಲಿದಾಡತೊಡಗಿತು. ಬರ್ಮನ್ ಬೆಚ್ಚಿ ಬೆಪ್ಪಾದ. ಅಪ್ಪನ ಬಳಿ ಬಂದು, ‘ಈ ಟ್ಯೂನ್ ನಂದಲ್ವಾ? ಕದ್ದಿದ್ದೀರಲ್ವಾ?’ ಎಂದ. ಅದಕ್ಕವರು ಅಷ್ಟೇ ಕೂಲಾಗಿ, ‘ಮುಂದೆ ನಿನ್ನ ಟ್ಯೂನ್‌ಗಳನ್ನು ಈ ದೇಶವೇ ಕದಿಯುತ್ತೆ, ಹೋಗು’ ಎಂದು ಭವಿಷ್ಯ ನುಡಿದಿದ್ದರು.
ಆದರೆ, ಆರ್ ಡಿ ಬರ್ಮನ್ ಬೇರೆಯವರ ಟ್ಯೂನ್ ಕದಿಯುವುದಿರಲಿ, ಸಂಗೀತ ದಿಗ್ಗಜನ ಮಗನಾದರೂ ತಂದೆಯ ಮಟ್ಟುಗಳನ್ನು ಕೂಡ ಮುಟ್ಟಲಿಲ್ಲ. ಅಪ್ಪನಂತೆ ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕನಾದರೂ ಅಪ್ಪನನ್ನು ಅನುಕರಿಸಲಿಲ್ಲ. ಸಂಗೀತ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಲು, ಸಿನಿಮಾದಿಂದ ಸಿನಿಮಾಗೆ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಂಡರು. ಹಿಂದಿ ಚಿತ್ರರಂಗದಲ್ಲಿ ಅವರು ಹಾಕಿದ ಟ್ಯೂನ್ ಗಳು, ಮಾಡಿದ ಪ್ರಯೋಗಗಳು ಟ್ರೆಂಡ್ ಸೆಟ್ಟರ್ ಎನಿಸಿಕೊಂಡವು. ಹಣ, ಪ್ರಚಾರ ಮತ್ತು ಖ್ಯಾತಿಯನ್ನು ತಂದುಕೊಟ್ಟವು. ಭಾರತದ ವಿವಿಧ ಭಾಷೆಯ ಚಿತ್ರರಂಗಗಳಲ್ಲಿ ಪ್ರತಿಧ್ವನಿಸಿದವು.
ಮೊದಲಿಗೆ ಅಪ್ಪನಿಗೆ ಅಸಿಸ್ಟೆಂಟ್ ಆಗಿ ಕೆಲಸ ಆರಂಭಿಸಿದ ಬರ್ಮನ್, ನಿಧಾನವಾಗಿ ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣತಿ ಗಳಿಸಿದರು. 1959ರಲ್ಲಿ ಮೊಟ್ಟ ಮೊದಲ ಬಾರಿಗೆ ಚಿತ್ರವೊಂದಕ್ಕೆ ಸಂಗೀತ ನಿರ್ದೇಶಕನಾದರೂ, ಆ ಚಿತ್ರ ಬಿಡುಗಡೆಯ ಭಾಗ್ಯ ಕಾಣಲಿಲ್ಲ. ಆನಂತರ 1961ರಲ್ಲಿ `ಛೋಟೆ ನವಾಬ್’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಬರ್ಮನ್, ‘ತೀಸ್ರೀ ಮಂಜಿಲ್’ ಎಂಬ ಹಿಟ್ ಕೊಡುವವರೆಗೂ ಬರ್ಮನ್ ಬುಡ ಅಲ್ಲಾಡುತ್ತಲೇ ಇತ್ತು. ಪ್ರಯೋಗಗಳು ಗೆಲ್ಲಲು ಕಾಲ ಪಕ್ವವಾಗಿರಲಿಲ್ಲ. ಗೆಲ್ಲುವವರೆಗೂ ಬರ್ಮನ್ ತಂದೆಯ ಸಂಯೋಜನೆಗಳಿಗೆ ವಾದ್ಯವೃಂದದ ಕೌಶಲ್ಯ ಅಳವಡಿಸುತಿದ್ದ. ಅಲ್ಲಿ ಪಡೆದುಕೊಂಡ ಅನುಭವ ಮುಂದೆ ಮೂರು ದಶಕ ಚಲನಚಿತ್ರ ಸಂಗೀತಲೋಕವನ್ನೇ ಆಳುವ ಶಕ್ತಿಯನ್ನು ಆತನಿಗೆ ತಂದುಕೊಟ್ಟಿತು. ಅಲ್ಲಿಂದ 1990ರವರೆಗೆ ಹಿಂತಿರುಗಿ ನೋಡದಂತೆ ಮಾಡಿತ್ತು. ಈ ಅವಧಿಯಲ್ಲಿ ಸುಮಾರು 331 ಚಿತ್ರಗಳಿಗೆ, ವಿಭಿನ್ನ ಬಗೆಯ ಸಂಗೀತ ಸಂಯೋಜಿಸಿ, ಹಲವಾರು ಗಾಯಕ-ಗಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.
ಇದನ್ನು ಓದಿದ್ದೀರಾ?: ವಿ ಪಿ ಸಿಂಗ್: ‘ಕಮಂಡಲ’ ರಾಜಕಾರಣ ಮರುಕಳಿಸುತ್ತಿರುವ ಕಾಲದಲ್ಲಿ ‘ಮಂಡಲ್ ಹೀರೋ’ ನೆನಪು
ಅದರಲ್ಲೂ ಲತಾ ಮಂಗೇಶ್ಕರ್, ಆಶಾ ಬೋಂಸ್ಲೆ, ಕಿಶೋರ್ ಕುಮಾರ್ ಅವರನ್ನು ಅವರ ಸಾಮರ್ಥ್ಯಕ್ಕೂ ಮೀರಿ ಪ್ರಯೋಗಗಳಿಗೊಡ್ಡಿದರು. ಆ ಗಾಯಕರಿಗೇ ಗೊತ್ತಿಲ್ಲದ ಪ್ರತಿಭೆಯನ್ನು ಹೊರಗೆಳೆದು ಜಗತ್ತಿಗೇ ಪರಿಚಯಿಸಿದರು. ಅವರನ್ನು ಅತ್ಯುತ್ತಮ ಗಾಯಕರ ಸ್ಥಾನಕ್ಕೇರಿಸಿದರು. ಈ ನಾಲ್ವರೊಂದಿಗೆ ಸ್ವರದಂತೆ ಬೆರೆತುಹೋದವರು ಮತ್ತೊಬ್ಬ ಮಹಾನ್ ಪ್ರತಿಭಾವಂತ ಗುಲ್ಝಾರ್. ಬರ್ಮನ್ ಸಂಗೀತ, ಗುಲ್ಝಾರ್ ಗೀತರಚನೆ, ಮೂವರು ಗಾಯಕರ ಗಾಯನ- ಈ ಐವರು ಮಾಡಿದ ಮೋಡಿಯ ಹಾಡುಗಳನ್ನು ದೇಶದ ಸಂಗೀತಪ್ರೇಮಿಗಳು ಇಂದಿಗೂ ಕೇಳುತ್ತಲೇ ಇದ್ದಾರೆ.
1961ರ `ಛೋಟೆ ನವಾಬ್’ ಚಿತ್ರದಿಂದ ಹಿಡಿದು 1994ರ `1942: ಎ ಲವ್ ಸ್ಟೋರಿ’ವರೆಗೆ ಲೆಕ್ಕವಿಲ್ಲದಷ್ಟು ಚಿತ್ರಗಳಿಗೆ ಸ್ವರ ಬೆರೆಸಿದ ಬರ್ಮನ್, 1942: ಎ ಲವ್ ಸ್ಟೋರಿ ಬಿಡುಗಡೆಯಾಗುವ ಸಮಯಕ್ಕೆ ಬದುಕಿರಲಿಲ್ಲ. ಈ ಚಿತ್ರದ ಹಾಡುಗಳು ಹಿಟ್ ಆಗಿ ಮರಣೋತ್ತರ ಫಿಲಂ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು.
ಇಂತಹ ಬರ್ಮನ್ ಬಗ್ಗೆ ಹಲವು ದಂತಕತೆಗಳೇ ಇವೆ. ಉದೋ ಎಂದು ಸುರಿಯುತ್ತಿದ್ದ ಮಳೆ ಹನಿಯ ಸದ್ದನ್ನೇ ರೆಕಾರ್‍ಡ್ ಮಾಡಿ, ಚಿತ್ರಕ್ಕೆ ಬಳಸಿದ್ದು; ಸಂಗೀತ ಸಂಯೋಜನೆಯ ಸಂದರ್ಭದಲ್ಲಿ ಗಿಟಾರಿಸ್ಟ್ ಗಿಟಾರ್ ಅನ್ನು ಅಕಸ್ಮಾತ್ ಕೆಳಕ್ಕೆ ಬೀಳಿಸಿದ್ದನ್ನೇ, ಮತ್ತೆ ಮತ್ತೆ ಬೀಳಿಸಿ, ಆ ಸದ್ದನ್ನೇ ಒಂದು ಗೀತೆಗೆ ಬಳಸಿಕೊಂಡಿದ್ದು; ಸಂಗೀತ ಸಾಮ್ರಾಟರಾದ ಅಲಿ ಅಕ್ಬರ್ ಖಾನ್, ಸಲೀಲ್ ಚೌಧರಿಗಳನ್ನು ಗುರುಗಳಂತೆ ಸ್ವೀಕರಿಸಿದ್ದು.. ಹೇಳುತ್ತಲೇ ಹೋಗಬಹುದು.
ಭಾರತೀಯ ಚಿತ್ರರಂಗದ ಅಪ್ರತಿಮ ಸಂಗೀತ ನಿರ್ದೇಶಕ ಬರ್ಮನ್ ಬದುಕಿದ್ದು 54 ವರ್ಷಗಳು. ಆ ಅವಧಿಯಲ್ಲಿ ಸಿನಿಮಾ ಸಂಗೀತ ಕ್ಷೇತ್ರಕ್ಕೆ ವಿಶಿಷ್ಟ ಮೆರುಗು ತಂದ, ಬೆಟ್ಟದಷ್ಟು ಸಾಧನೆ ಮಾಡಿದ ಅಪ್ಪಟ ಸೃಜನಶೀಲ ಪ್ರತಿಭೆ ಭೂಮಿಗೆ ಬಂದ ದಿನ, ಜೂನ್ 27. ಅವರು ಸಂಗೀತ ಸಂಯೋಜಿಸಿದ ಹಾಡುಗಳನ್ನು ಕೇಳುತ್ತಾ, ಅವರೊಂದಿಗೆ ಬದುಕೋಣ.

ಲೇಖಕ, ಪತ್ರಕರ್ತ