ಮಧ್ಯಪ್ರದೇಶದಲ್ಲಿ ಮತ್ತೊಬ್ಬ ನಕಲಿ ವೈದ್ಯ ಪತ್ತೆಯಾಗಿದ್ದು, ಈ ಆರೋಪಿ ಬಿಜೆಪಿ ವೈದ್ಯಕೀಯ ಸೆಲ್‌ನಲ್ಲಿ ಕಾರ್ಯನಿರ್ವಹಿಸಿದ್ದ ಎಂದು ಹೇಳಲಾಗಿದೆ. ಆಯುಷ್ ಪದವಿ ಪಡೆದಿರುವುದಾಗಿ ಸುಳ್ಳು ಹೇಳಿಕೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾನೆ ಎನ್ನಲಾಗಿದೆ.
ದೂರಿನ ನಂತರ ಬಿಜೆಪಿ ಜಬಲ್ಪುರ ಜಿಲ್ಲಾ ವೈದ್ಯಕೀಯ ಕೋಶದ ಸಹ-ಸಂಚಾಲಕನಾಗಿಯೂ ಸೇವೆ ಸಲ್ಲಿಸಿದ್ದ ನಕಲಿ ವೈದ್ಯನ ವಿರುದ್ಧ ವಂಚನೆ ಆರೋಪದ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಶುಭಂ ಅವಸ್ಥಿ ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಹೃದಯ ಶಸ್ತ್ರಚಿಕಿತ್ಸೆ ಮಾಡಿದ ನಕಲಿ ‘ಬ್ರಿಟಿಷ್’ ವೈದ್ಯ; ಏಳು ಮಂದಿ ಸಾವು
ಮಧ್ಯಪ್ರದೇಶದ ದಾಮೋಹ್ ಮಿಷನರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಬ್ರಿಟಿಷ್ ವೈದ್ಯನ ಬಂಧನಕ್ಕೂ ಎರಡು ದಿನ ಮುನ್ನ ಅವಸ್ಥಿ ವಿರುದ್ಧ ಪ್ರಕರಣ ದಾಖಲಾಗಿದೆ. ಜಬಲ್ಪುರ ಜಿಲ್ಲೆಯ ನ್ಯಾಯಾಲಯದ ಆದೇಶದ ನಂತರ ಪೊಲೀಸರು ನಕಲಿ ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
“ನಕಲಿ ಆಯುಷ್ ಪದವಿಯನ್ನು ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಸೇಠ್ ಗೋವಿಂದ್ ದಾಸ್ ಜಬಲ್ಪುರ್ ಜಿಲ್ಲಾ ಆಸ್ಪತ್ರೆಯಲ್ಲಿ (ಹಿಂದೆ ವಿಕ್ಟೋರಿಯಾ ಆಸ್ಪತ್ರೆ ಎಂದು ಕರೆಯಲಾಗುತ್ತಿತ್ತು) ಕೆಲಸ ಮಾಡುತ್ತಿದ್ದ ಆರೋಪ ಹೊತ್ತಿರುವ ಶುಭಂ ಅವಸ್ಥಿ ವಿರುದ್ಧ ವಂಚನೆ ಆರೋಪದ ಎಫ್ಐಆರ್ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ” ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನೆಹರು ಸಿಂಗ್ ಖಾಂಡೇಟ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಬಿಜೆಪಿ ಜಬಲ್ಪುರ್ ಮುಖ್ಯಸ್ಥ ರತ್ನೇಶ್ ಸೋಂಕರ್, “ಪ್ರಕರಣದ ಅಧಿಕೃತ ದೃಢೀಕರಣ ದೊರೆತ ಬಳಿಕ ಬಿಜೆಪಿ ಮಾರ್ಗಸೂಚಿ ಪ್ರಕಾರ ಅವಸ್ಥಿ ವಿರುದ್ಧ ಕ್ರಮಕೈಗೊಳ್ಳಲಾಗುವುದು” ಎಂದು ಪ್ರತಿಪಾದಿಸಿದ್ದಾರೆ.
ಇನ್ನು ಆಡಳಿತರೂಢ ಬಿಜೆಪಿ ಆರೋಪಿ ಕಾರ್ಯಕರ್ತ ಎಂಬುದನ್ನು ಒಪ್ಪಿಕೊಂಡಿದೆ. ಆದರೆ ಎರಡು ವರ್ಷಗಳ ಹಿಂದೆ ಬಿಜೆಪಿ ಜಬಲ್ಪುರ ಜಿಲ್ಲಾ ವೈದ್ಯಕೀಯ ಕೋಶದ ಸಹ-ಸಂಚಾಲಕ ಹುದ್ದೆಯಿಂದ ತೆಗೆದು ಹಾಕಲಾಗಿದೆ ಎಂದು ಬಿಜೆಪಿ ವೈದ್ಯಕೀಯ ಸೆಲ್‌ನ ಸಹ-ಸಂಚಾಲಕಿ ಮತ್ತು ದಂತವೈದ್ಯೆ ಅಶ್ವಿನಿ ತ್ರಿವೇದಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಮಮಂದಿರಕ್ಕೆ ಮುಸ್ಲಿಮರ ಹೆಸರಲ್ಲಿ ಬಾಂಬ್ ಬೆದರಿಕೆ: ಇಬ್ಬರು ಹಿಂದೂ ಯುವಕರ ಬಂಧನ
ಪೊಲೀಸರು ಬರೀ ದೂರು ದಾಖಲಿಸಿಕೊಂಡು ಯಾವುದೇ ಕ್ರಮಕೈಗೊಂಡಿಲ್ಲ. ಈ ಕಾರಣದಿಂದಾಗಿ ದೂರುದಾರರು ಅವಸ್ಥಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಎಫ್‌ಐಆರ್ ದಾಖಲಾಗಿದೆ.
ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಮತ್ತೋರ್ವ ನಕಲಿ ವೈದ್ಯರು ಪತ್ತೆಯಾಗಿದ್ದರು. ಮಧ್ಯಪ್ರದೇಶದ ದಾಮೋಹ್ ನಗರದ ಖಾಸಗಿ ಮಿಷನರಿ ಆಸ್ಪತ್ರೆಯಲ್ಲಿ ನಕಲಿ ‘ಬ್ರಿಟಿಷ್’ ವೈದ್ಯ ರೋಗಿಗಳಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದ್ದು, ಈವರೆಗೆ ಏಳು ಮಂದಿ ಈ ನಕಲಿ ವೈದ್ಯನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ತಾನು ಹೃದ್ರೋಗ ತಜ್ಞ ಎಂದು ಹೇಳಿಕೊಂಡಿದ್ದ ನಕಲಿ ವೈದ್ಯ ರೋಗಿಗಳಿಗೆ ಹೃದಯ ಶಸ್ತ್ರಚಿಕಿತ್ಸೆಗಳನ್ನೂ ಮಾಡಿದ್ದನು. ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ತನಿಖೆಯ ನಂತರ ಆರೋಪಿಯ ನಿಜವಾದ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂದು ತಿಳಿದುಬಂದಿದೆ.
