ಈ ವರ್ಷ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಹೇಳಿದೆ. ಅದರ ಅನುಭವ ನಮಗೆ ಶುರುವೂ ಆಗಿದೆ. ನೀರು ಕುಡಿದಷ್ಟೂ ಬಾಯಾರಿಕೆ ಹೆಚ್ಚು. ನಿರ್ಜಲೀಕರಣ, ಸುಸ್ತು, ತಲೆ ಸುತ್ತು, ಮೈ ತುರಿಕೆ, ಬೆವೆತ ದೇಹಕ್ಕೆ ನೀರಿನ ತಂಪು ಅನುಭವಿಸುವ ದಾಹ- ಇವೆಲ್ಲವೂ ಧಗೆ ಏರಿದ ಈ ವಾತಾವರಣದ ಪ್ರಭಾವ. ಇದರೊಂದಿಗೆ ನೀರಿನ ಅಭಾವವೂ ಬೇಸಿಗೆಕಾಲ ನಮಗೆ ನೀಡುವ ಉಡುಗೊರೆ. ಈ ಕ್ಲಿಷ್ಟ ಕಾಣಿಕೆ ನಿರ್ವಹಿಸಲಾಗದಂತೆ ನಮ್ಮನ್ನು ತಡೆದು ನಿಲ್ಲುವವರು ಟ್ಯಾಂಕರ್ ದೊರೆಗಳು!
ದೇಶದಲ್ಲಿ ಅದರಲ್ಲೂ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಶಿಕ್ಷಣ, ಆರೋಗ್ಯ ಎಲ್ಲವೂ ವ್ಯಾಪಾರವಾಗಿದೆ, ಮಾರುಕಟ್ಟೆ ಸರಕಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬಂತೆ ಬೆಂಗಳೂರಿನಲ್ಲೂ ಎಲ್ಲವೂ ಬದಲಾಗುತ್ತಿದೆ, ಮುಂದೆಯೂ ಈ ಮಾರ್ಪಾಡು ಸಾಗುತ್ತದೆ. ಜನರ ದೌರ್ಬಲ್ಯವನ್ನು ತನ್ನ ಉಪಯೋಗಕ್ಕೆ ಬಳಸುವುದು ಮಾನವೀಯ ಮತ್ತು ಕಾನೂನಾತ್ಮಕವಾಗಿ ತಪ್ಪು. ಆದರೂ ಕೂಡಾ ಪ್ರಸ್ತುತ “ಸುಲಿಗೆ ಮಾಡಪ್ಪ, ಆದರೆ ಕೊಂಚ ಕಡಿಮೆ ಮಾಡು” ಎಂದು ಜನರು ವಿನಂತಿಸಿಕೊಳ್ಳುವ ಸ್ಥಿತಿ ಎದುರಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಟ್ಯಾಂಕರ್ ನೀರಿಗೆ ದರ ನಿಗದಿ ಮಾಡಿದ ಜಿಲ್ಲಾಡಳಿತ
ಬೆಂಗಳೂರು, ಮಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಬೇಸಿಗೆಕಾಲದಲ್ಲಿ ನೀರಿನ ಅಭಾವ ಸಾಮಾನ್ಯವೆಂಬಂತಾಗಿದೆ. ಅದರಲ್ಲೂ ಕೆಲವೆಡೆ ಕುಡಿಯುವ ನೀರು ಪ್ರಮುಖ ಸಮಸ್ಯೆಯಾಗಿದೆ. ಇವೆಲ್ಲವುದರ ಅನುಕೂಲವನ್ನು ಪಡೆಯುವವರು ಟ್ಯಾಂಕರ್ ಮಾಲೀಕರುಗಳು. ಕಳೆದ ವರ್ಷ ಈ ಟ್ಯಾಂಕರ್ ಹಾವಳಿಗೆ ಕಡಿವಾಣ ಹಾಕುವ ಪ್ರಯತ್ನವನ್ನು ಸರ್ಕಾರ ಮಾಡಿತ್ತು. ದರ ನಿಗದಿ ಪಡಿಸಿತ್ತು. ಆದರೆ ಅದರ ಪಾಲನೆ ಮಾತ್ರ ಸರಿಯಾಗಿ ನಡೆಯಲೇ ಇಲ್ಲ. ನೀರಿನ ಹಾಹಾಕಾರದ ನಡುವೆ ಎಷ್ಟು ಹಣವಾದರೂ ಪರವಾಗಿಲ್ಲ ಪಾಲಿಗೆ ಬಂದದ್ದು ಪಂಚಾಮೃತ ಎಂಬ ಮನಸ್ಥಿತಿಯೂ ಕೆಲವು ಜನರಿಗಿತ್ತು.
ಇವೆಲ್ಲವುದರ ನಡುವೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿಗರು ಉರಿಯುವ ಬೆಂಕಿಗೆ ತುಪ್ಪ ಸುರಿದು ಖುಷಿ ಪಟ್ಟಿದ್ದರು. ಈ ಅನುಭವದ ಭಾಗವಾಗಿ ಈ ಬಾರಿ ಬೇಸಿಗೆಯ ತಯಾರಿಯನ್ನು ಸ್ವಲ್ಪಮಟ್ಟಿಗೆ ಮಾಡುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಅದರ ಭಾಗವೇ ‘ಸಂಚಾರಿ ಕಾವೇರಿ’ ಎಂಬ ನೀರಿನ ವ್ಯವಸ್ಥೆ. ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ತೀವ್ರ ಪ್ರಮಾಣದಲ್ಲಿ ಅಧಿಕವಾಗುತ್ತಾ ಸಾಗುತ್ತದೆ. ಅದಕ್ಕೂ ಮುನ್ನವೇ ಈ ನೀರಿನ ವ್ಯವಸ್ಥೆಯನ್ನು ಜಾರಿ ಮಾಡುವುದು ಮುಖ್ಯ.
ಸಂಚಾರಿ ಕಾವೇರಿ; ಟ್ಯಾಂಕರ್ ಮೂಲಕ ಮನೆಬಾಗಿಲಿಗೆ ನೀರು
ಖಾಸಗಿ ಟ್ಯಾಂಕರ್‌ಗಳ ಹಾವಳಿಗೆ ಕಡಿವಾಣ ಹಾಕಿ, ಜನರಿಗೆ ಕಾವೇರಿ ನೀರು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ‘ಸಂಚಾರಿ ಕಾವೇರಿ’ (ಕಾವೇರಿ ಆನ್ ವೀಲ್ಸ್) ಯೋಜನೆಯನ್ನು ಅನುಷ್ಠಾನಗೊಳಿಸಲು ಸಜ್ಜಾಗಿದೆ. ಆನ್‌ಲೈನ್ ಮೂಲಕವೇ ಬುಕ್ ಮಾಡಿ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಮನೆ ಬಾಗಿಲಿಗೆ ಸರಬರಾಜು ಮಾಡಿಸಿಕೊಳ್ಳಬಹುದಾಗಿದೆ. ಈ ಸೇವೆ ಒದಗಿಸಲು ಇಚ್ಛಿಸುವ ಖಾಸಗಿ ಟ್ಯಾಂಕರ್‌ಗಳು ಮಂಡಳಿಯ ಸಂಚಾರಿ ಕಾವೇರಿ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು, ಇದಕ್ಕೆ ಏಪ್ರಿಲ್ 10ರವರೆಗೆ ಅವಕಾಶವಿದೆ. ಆದರೆ ಒಂದು ಟ್ಯಾಂಕರ್ ನೀರಿಗೆ ಎಷ್ಟು ದರ ನಿಗದಿಪಡಿಸಲಾಗುತ್ತದೆ ಎಂಬುದನ್ನು ಕಾದುನೋಡಬೇಕು. ಕಳೆದ ವರ್ಷವೇ ಟ್ಯಾಂಕರ್‌ಗೆ ಮೂರು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿವರೆಗೂ ಪಡೆದಿರುವ ನಿದರ್ಶನಗಳಿವೆ. ಸರ್ಕಾರ ನಿಗದಿಪಡಿಸಿದ ಬೆಲೆಗೆ ಖಾಸಗಿ ಟ್ಯಾಂಕರ್ ಮಾಲೀಕರು ಕ್ಯಾರೇ ಅನಲಿಲ್ಲ.
ಮಂಗಳೂರು ಸೇರಿ ಹಲವು ನಗರಗಳಲ್ಲೂ ಇದೇ ಸ್ಥಿತಿ
ಬೆಂಗಳೂರು ಮಾತ್ರವಲ್ಲ ಮಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕಳೆದ ವರ್ಷ ಬಿಸಿಗಾಲದಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿತ್ತು. ಬಾವಿಗಳ ಆಶ್ರಯ ಪಡೆದಿರುವವರು ಅದರ ನೀರು ಬತ್ತಿದ್ದಂತೆ ಟ್ಯಾಂಕರ್ ನೀರಿನ ಮೊರೆ ಹೋಗಬೇಕಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರನ್ನು ಹೊರತುಪಡಿಸಿ ಉಳಿದ ಜನರಿಗೆ ನೀರಿನ ವ್ಯವಸ್ಥೆ ಮಾಡುವುದು ಸ್ಥಳೀಯಾಡಳಿತದ ಜವಾಬ್ದಾರಿ. ಆದರೆ ಈ ಹೊಣೆಯಿಂದ ನುಣುಚಿಕೊಂಡು ಖಾಸಗಿ ಟ್ಯಾಂಕರ್‌ಗಳ ಜಾಲದಲ್ಲಿ ಜನರನ್ನು ತಾವಾಗಿಯೇ ದಬ್ಬುವ ಕಾರ್ಯವನ್ನು ಸ್ಥಳೀಯಾಡಳಿತಗಳು ಮಾಡುತ್ತಿವೆ.
ಇದನ್ನು ಓದಿದ್ದೀರಾ? ಹಾವುಗಳು ನುಗ್ಗುತ್ತಿವೆ ಎಚ್ಚರ; ಕೊಲ್ಲಬೇಡಿ ಕಾಲ್ ಮಾಡಿ
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ ಮಂಗಳೂರು ನಿವಾಸಿ, ಸಿಐಟಿಯು ಮುಖಂಡೆ ಭಾರತಿ ಬೋಳಾರ್, “ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರನ್ನು ಹೊರತುಪಡಿಸಿ ಉಳಿದ ಜನರಿಗೆ ನೀರಿನ ವ್ಯವಸ್ಥೆ ಮಾಡುವುದು ಮಂಗಳೂರು ಮಹಾನಗರ ಪಾಲಿಕೆ ಜವಾಬ್ದಾರಿ. ಆದರೆ ಆಡಳಿತ ಈ ಗೋಜಿಗೆಯೇ ಹೋಗಿಲ್ಲ. ಸಂಘಟನೆಗಳ ಒತ್ತಡದಿಂದಾಗಿ ಅಲ್ಲೊಂದು ಇಲ್ಲೊಂದು ಟ್ಯಾಂಕರ್ ನೀರಿನ ವ್ಯವಸ್ಥೆ ನಾಟಕ ನಡೆದಿದೆ. ಕಳೆದ ವರ್ಷ ಬೇಸಿಗೆಕಾಲದ ಆರಂಭದಲ್ಲಿ ಒಂದು ಟ್ಯಾಂಕರ್ ನೀರಿಗೆ 2,500 ರೂಪಾಯಿ ನೀಡಬೇಕಾಗಿತ್ತು. ಬಳಿಕ ಬೇಡಿಕೆ ಹೆಚ್ಚಿದಂತೆ 3000 ರೂಪಾಯಿಗೆ ಒಂದು ಟ್ಯಾಂಕರ್ ನೀರು ಲಭಿಸುತ್ತಿತ್ತು. ಈ ಬಾರಿ ಇನ್ನೆಷ್ಟು ದೋಚುತ್ತಾರೋ ತಿಳಿಯದು” ಎಂದಿದ್ದಾರೆ.
ಬೆಂಗಳೂರು ನಗರದಲ್ಲಿ ಸದ್ಯ ನೀರು ಸರಬರಾಜಿನ ವ್ಯವಸ್ಥೆಯನ್ನು ಜಲಮಂಡಳಿ ಮಾಡಲು ಸಜ್ಜಾಗಿದೆ. ಅದು ಕಾರ್ಯಗತವಾದರೆ ಮಾತ್ರ ಜನರಿಗೆ ಪ್ರಯೋಜನ.
ವರ್ಷವಿಡೀ ಕೂಡಿಡಿ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಖರೀದಿಸಿ!
ಹನಿ ಹನಿ ಕೂಡಿದರೆ ಹಳ್ಳವಲ್ಲ, ಈ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಹನಿ ಹನಿ ಕೂಡಿದರೆ ಒಂದು ಟ್ಯಾಂಕರ್ ನೀರು. ಅದಕ್ಕೆ ನಾವು ನೀಡಬೇಕಾದ ರೊಕ್ಕಕ್ಕೂ ಇದೇ ಮಾತು ಅನ್ವಯ. ಯುಗಾದಿ ಬಾಡೂಟಕ್ಕಾಗಿ ವರ್ಷವಿಡೀ ಕಂತಿನಲ್ಲಿ ಹಣ ಕಟ್ಟಿ ಯುಗಾದಿ ದಿನ ಕುರಿ ಮಾಂಸ ಖರೀದಿಸಿದಂತೆ, ವರ್ಷವಿಡೀ ಹುಂಡಿಯಲ್ಲಿಟ್ಟ ಹಣವನ್ನು ನೀವು ನಂಬಿದ ದೇವರಿಗೆ ಮುಡಿಪು ಕೊಟ್ಟಂತೆ ಈಗ ನಾವು ಬೇಸಿಗೆಕಾಲದಲ್ಲಿ ಟ್ಯಾಂಕರ್ ನೀರು ಖರೀದಿಗಾಗಿಯೇ ಹಣ ಉಳಿತಾಯ ಯೋಜನೆ ರೂಪಿಸಬೇಕಾದ ಸ್ಥಿತಿಯಿದೆ.
ಇವೆಲ್ಲವುದಕ್ಕೂ ಕಡಿವಾಣ ಹಾಕುವ ಸರ್ಕಾರದ ಕ್ರಮಗಳ ನಡುವೆಯೂ ಜನರಲ್ಲಿ ನೀರಿನ ಅಭಾವದ ಭೀತಿ ಹೆಚ್ಚಿನ ಹಣ ಲೂಟಿ ಮಾಡುವುದು ಮುಂದುವರೆದಿದೆ. ಈ ಟ್ಯಾಂಕರ್ ಮಾಲೀಕರಿಗೆ ‘ಕಾಸಿದ್ದವರೇ ಬಾಸು’ ಆಗಿ ವರ್ಷಗಳೇ ಕಳೆದಿದೆ. ಮೊದಲು ಯಾರಿಗೆ ಟ್ಯಾಂಕರ್ ನೀರು ತಲುಪಿಸುವುದು ಎಂಬ ಆದ್ಯತೆ ವಿಚಾರ ಬಂದಾಗ ಈ ಮಾಫಿಯಾದಾರರ ಕಣ್ಣಿಗೆ ಬೀಳುವುದು ಕಾಂಚಾಣ. ‘ಈ ಹಣದ ಆದ್ಯತೆ ಪಕ್ಕಕಿಡಿ, ನೀರಿಗಾಗಿ ಗೋಗರೆಯುವರಿಂದ ದುಪ್ಪಟ್ಟು ಹಣ ಸುಲಿಗೆ ಮಾಡಿ’ ಎಂಬ ನಿಯಮ ಟ್ಯಾಂಕರ್ ಮಾಫಿಯಾದ ಅಸ್ತ್ರದಂತಿದೆ. ಇವೆಲ್ಲವುದಕ್ಕೂ ಕಡಿವಾಣದ ಹೊಣೆ ಸರ್ಕಾರದ್ದು. ‘ಸಂಚಾರಿ ಕಾವೇರಿ’ ಯೋಜನೆ ಶೀಘ್ರವೇ ಅನುಷ್ಠಾನಗೊಳಿಸುವ ಜೊತೆಗೆ ಟ್ಯಾಂಕರ್ ದಂಧೆಯನ್ನೂ ನಿಯಂತ್ರಿಸುವುದು ಮುಖ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.