ಕಲ್ಯಾಣ ಕರ್ನಾಟಕ ಭಾಗದ ರೈತರ ಆರ್ಥಿಕ ದುಸ್ಥಿತಿಗೆ ಸಂಪೂರ್ಣ ನೀರಾವರಿ ಕೊರತೆಯೇ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರೈತ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ʼಅಫಜಲಪುರ, ಜೇವರ್ಗಿ ಎರಡು ತಾಲೂಕುಗಳ ಜೀವನಾಡಿಯಾಗಿರುವ ಭೀಮಾ ನದಿಯ ಸಂಪೂರ್ಣ ಮೇದಾ ನೀರನ್ನು ನೀರಾವರಿಗಾಗಿ ಬಳಸಿಕೊಂಡಿಲ್ಲ. ಅಫಜಲಪುರ ತಾಲೂಕಿನಲ್ಲಿ ಕೇವಲ ಶೇ 25ರಷ್ಟು ಭೂಮಿ ಕೂಡ ನೀರಾವರಿಗೆ ಒಳಪಟ್ಟಿಲ್ಲ. ಪಕ್ಕದಲ್ಲಿ ಹರಿಯುವ ಭೀಮಾನದಿ ನೀರು ವ್ಯರ್ಥವಾಗಿ ಪೋಲಾಗುತ್ತಿದೆ ಇದಕ್ಕೆ ಕಾರಣ ಈ ಭಾಗದ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿದೆʼ ಎಂದು ಅವರು ದೂರಿದರು.
ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ʼರೈತರು ದೇಶದ ಬೆನ್ನೆಲುಬು ಎನ್ನಲಾಗುತ್ತದೆ. ಆದರೆ ಇವತ್ತು ಪರಿಸ್ಥಿತಿ ತೀರಾ ಬದಗಿಟ್ಟಿದೆ. ಒಬ್ಬ ರೈತನಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಪರಿಸ್ಥಿತಿಯ ಸುಧಾರಣೆ ಆಗಬೇಕಾದರೆ ರೈತರು ಜಾಗೃತರಾಗಬೇಕುʼ ಎಂದು ಕರೆ ನೀಡಿದರು.
ಸಾವಯವ ಕೃಷಿ ತಜ್ಞ ಡಾಕ್ಟರ್ ಮಲ್ಲಿನಾಥ್ ಮಾತನಾಡಿ, ʼನಮ್ಮ ಪಾರಂಪರಿಕ ಕೃಷಿ ಪದ್ಧತಿ ಕೈಬಿಟ್ಟು ಈಗ ಒದ್ದಾಡುತ್ತಿದ್ದೇವೆ, ಮತ್ತೆ ನಾವು ಸಾವಯವ ಕೃಷಿ ಕಡೆ ಮುಖ ಮಾಡಬೇಕಾಗಿದೆʼ ಎಂದರು.
ರೈತ ಸಂಘದ ಉಪಾಧ್ಯಕ್ಷರಾದ ಮಹಾದೇವಿ ಮಾತನಾಡಿ, ʼರೈತರ ಬದುಕಿನಲ್ಲಿ ಮಹಿಳೆಯರ ಪಾತ್ರ ದೊಡ್ಡದಾಗಿದೆ. ಆದ್ದರಿಂದ ರೈತ ಮಹಿಳೆಯರು ರೈತ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕುʼ ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಸಿದ್ದಪ್ಪ ಬಿದರಿ, ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಮಹಾಂತೇಶ್ ಜಮಾದಾರ್ ಮಾತನಾಡಿದರು.
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಬೈರೇಗೌಡ ಮತ್ತು ಇತರರು ಮಾತನಾಡಿದರು. ಅಫಜಲಪುರ ತಾಲೂಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಮಂಜುನಾಥ ನಾಯ್ಕೋಡಿ ಸ್ವಾಗತಿಸಿದರು ಮತ್ತು ರವಿ ಗುಂಡಗುರ್ತಿ ಇವರು ಕಾರ್ಯಕ್ರಮ ನಿರ್ವಹಿಸಿದರು.
ಈ ಸುದ್ದಿ ಓದಿದ್ದೀರಾ? Second PUC Result | ಪಿಯುಸಿ ಫಲಿತಾಂಶ : 19 ರಿಂದ 22ನೇ ಸ್ಥಾನಕ್ಕೆ ಕುಸಿದ ಬೀದರ್
ಸಮಾರಂಭದಲ್ಲಿ ಮಲ್ಲನಗೌಡ ಪಾಟೀಲ್, ಮಹಾದೇವಿ ಬೇಗಾರ, ಜೈ ಲಕ್ಷ್ಮಿ, ರಮಾ ಸಜ್ಜನ, ಶರಣಪ್ಪ ಶೆಂಬೆಳ್ಳಿ, ಶಿವಯ್ಯ ಸ್ವಾಮಿ, ಜಗದೀಶ್ ಜೇವರ್ಗಿ, ಮಹಾಂತೇಶ ಜಮಾದಾರ ,ಮಲ್ಲಣ್ಣ ಪಡಶಟ್ಟಿ, ಮಹಾದೇವಿ ಬಿರಾದಾರ್, ಮಹೆಬೂಬ್ ಬಾಷಾ, ಬಸಮ್ಮ ಬಿರಾದಾರ್, ಹನುಮಗೌಡ, ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಕಮಲಾಬಾಯಿ ಸಜ್ಜನ್, ವಿಠಲ್, ಶರಣಪ್ಪ ಜಂಬಾಳೆ, ರಮೇಶ, ಪರಮೇಶ್ವರ ಜಳಕಿ, ಬಸವರಾಜ ಹಡಪದ, ಶಿವಯ್ಯ ಸ್ವಾಮಿ, ಪರಮೇಶ್ವರ ರಾಥೋಡ್, ಮರೆಪ್ಪ ಹಸನಾಪುರ, ಸರಸ್ವತಿ ಹಡಪದ, ಕಲಬುರ್ಗಿ ಜಿಲ್ಲೆಯ ವಿವಿಧ ತಾಲೂಕ ಅಧ್ಯಕ್ಷರುಗಳಾದ ಈರಣ್ಣ ಭಜಂತ್ರಿ, ಜಗದೀಶ ಕಡ್ಲಿ, ಸಂಗನಗೌಡ ಘಂಟಿ, ಪರಮೇಶ್ವರ ಮತ್ತಿಮೂಡ, ಬಸವರಾಜ ಸೀರೊಳ್ಳಿ, ಚನ್ನವೀರ ಸ್ವಾಮಿ, ಶಿವಲಿಂಗಪ್ಪ ಪೂಜಾರಿ ಸೇರಿದಂತೆ ರೈತ ಸಂಘಟನೆಯ ಜಿಲ್ಲಾ ಹಾಗೂ ತಾಲ್ಲೂಕು ಘಟಕ ಪದಾಧಿಕಾರಿಗಳು ಉಪಸ್ಥಿತರಿದ್ದರು.