ಅಗತ್ಯ ವಸ್ತುಗಳ ಬೆಲೆ ಏರಿಕೆ ಕೂಡಲೇ ವಾಪಸ್ ಪಡೆಯಬೇಕು, ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಸಿಪಿಐಂಎಲ್ ಮಾಸ್‍ಲೈನ್ ಹಾಗೂ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮಸೂದೆಯು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲು ಹೊರಟಿದೆ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ರೈತ ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಮತ್ತು ರೈತ ವಿರೋಧಿಯಾಗಿರುವ ಕೃಷಿ ಮಾರ್ಕೆಂಟಿಗ್ ಕಾಯ್ದೆಯನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು, ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನೂ ರದ್ದು ಪಡಿಸಬೇಕು. ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ಎನ್‍ಇಪಿ ಶಿಕ್ಷಣ ನೀತಿ ಹಿಂಪಡೆಯಬೇಕು, ನರೇಗಾ ಕೂಲಿ ಕೆಲಸ ಕೂಲಿ ಹಣವನ್ನು 500 ರೂ. ಹೆಚ್ಚಿಸಬೇಕು ಹಾಗೂ 150 ದಿನಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗಾಳಿ-ಮಳೆಗೆ ನೆಲಕಚ್ಚಿದ ಸಜ್ಜೆ, ಭತ್ತ; ರೈತರು ಕಂಗಾಲು
ಸಂವಿಧಾನ ವಿರೋಧಿ ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ರಾಜ್ಯ ಸರ್ಕಾರದ ಎಪಿಎಂಸಿ ಹಾಗೂ ಹೊಸ ಭೂಮಿತಿ ಕಾಯ್ದೆಯನ್ನು ರದ್ದುಗೊಳಿಸಬೇಕು.ರಾಜ್ಯದಲ್ಲಿ ವಿದ್ಯುತ್, ಹಾಲಿನ ದರವನ್ನು ಅಗತ್ಯ ವಸ್ತುಗಳ ದರವನ್ನು ಇಳಿಸಬೇಕು, ರಾಜ್ಯದಲ್ಲಿ ಮೂರು ತಲೆಮಾರಿನಿಂದ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿ ಮಂಜೂರು ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ರಾಜ್ಯ ಕಾರ್ಯದರ್ಶಿ ಡಿ.ಎಸ್.ಪೂಜಾರ್, ಜಿಲ್ಲಾಧ್ಯಕ್ಷ ಅಶೋಕ ನೀಲೋಗಲ್, ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರ್ಗಿ, ಹನುಮಂತ ಸಿರವಾರ, ಶಿವರಾಜ್ ದೊಡ್ಡಿ, ವೀರೇಶ ನಾಯಕ, ಯಮೂನರಪ್ಪ ಗುಂಟೇರಹಟ್ಟಿ, ಛತ್ರಗೌಡ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿದ್ದರು.
